ADVERTISEMENT

ಲಂಚ: ರಾಜಸ್ವ ನಿರೀಕ್ಷಕನ ಬಂಧನ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2022, 15:18 IST
Last Updated 9 ಫೆಬ್ರುವರಿ 2022, 15:18 IST
ಬಿ.ಕೆ.ವಿಜಯ್‌ದೇವ
ಬಿ.ಕೆ.ವಿಜಯ್‌ದೇವ   

ಕೋಲಾರ: ಬಗರ್‌ಹುಕುಂ ಯೋಜನೆಯಡಿ ಭೂ ಮಂಜೂರಾತಿಗೆ ಶಿಫಾರಸು ಮಾಡಲು ಅರ್ಜಿದಾರರಿಂದ ಲಂಚ ಪಡೆಯುತ್ತಿದ್ದ ವೇಳೆ ತಾಲ್ಲೂಕಿನ ಕಸಬಾ ಹೋಬಳಿಯ ರಾಜಸ್ವ ನಿರೀಕ್ಷಕ ಬಿ.ಕೆ.ವಿಜಯ್‌ದೇವ ಅವರು ಬುಧವಾರ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾರೆ.

ತಾಲ್ಲೂಕಿನ ತೇರಹಳ್ಳಿ ಮಜರಾ ಪಾಪರಾಜನಹಳ್ಳಿಯ ರೈತ ಸೀನಪ್ಪ ಅವರು 1999ರಿಂದ 3 ಎಕರೆ ಬಗರ್‌ ಹುಕುಂ ಜಮೀನು ಸಾಗುವಳಿ ಮಾಡುತ್ತಿದ್ದಾರೆ. ಈ ಜಮೀನಿನ ಸಕ್ರಮಕ್ಕಾಗಿ ಅವರು 2019ರಲ್ಲಿ ಅರ್ಜಿ ಸಲ್ಲಿಸಿ ಸಾಗುವಳಿ ಚೀಟಿ ಮಂಜೂರಾತಿಗಾಗಿ ವಿಜಯ್‌ದೇವರನ್ನು ಸಂಪರ್ಕಿಸಿದ್ದರು. ಆಗ ವಿಜಯ್‌ದೇವ ಅವರು ಸೀನಪ್ಪರಿಂದ ₹ 5 ಸಾವಿರ ಪಡೆದು ಜಮೀನಿನ ಸರ್ವೆ ಮಾಡಿಸಿದ್ದರು ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.

ಆರೋಪಿ ವಿಜಯ್‌ದೇವ ಅವರು ಎಕರೆಗೆ ₹ 20 ಸಾವಿರದಂತೆ ಒಟ್ಟಾರೆ ₹ 60 ಸಾವಿರ ಲಂಚ ಕೊಟ್ಟರೆ ಸಾಗುವಳಿ ಚೀಟಿ ಮಂಜೂರಾತಿಗೆ ಶಿಫಾರಸು ಮಾಡುವುದಾಗಿ ಸೀನಪ್ಪರಿಗೆ ಹೇಳಿದ್ದರು. ಈ ಸಂಬಂಧ ಸೀನಪ್ಪ ಎಸಿಬಿಗೆ ದೂರು ಕೊಟ್ಟಿದ್ದರು. ಈ ದೂರು ಆಧರಿಸಿ ಬುಧವಾರ ಕಾರ್ಯಾಚರಣೆ ನಡೆಸಿದ ಎಸಿಬಿ ಅಧಿಕಾರಿಗಳು ವಿಜಯ್‌ದೇವ ಅವರನ್ನು ಲಂಚ ಪಡೆಯುತ್ತಿದ್ದ ಸಂದರ್ಭದಲ್ಲೇ ಬಂಧಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.