
ಕೋಲಾರ: ನಗರಸಭೆ ಅಧಿಕಾರಿಗಳು ಹಾಗೂ ಸಿಬ್ಬಂದಿ ವಿರುದ್ಧ ಭ್ರಷ್ಟಾಚಾರದ ಆರೋಪಗಳು ಕೇಳಿ ಬರುತ್ತಿವೆ. ಖಾತೆ, ಜನನ ಮರಣ ಪ್ರಮಾಣಪತ್ರ ಹಾಗೂ ಇನ್ನಿತರ ಕೆಲಸ ಮಾಡಿಕೊಡಲು ಹಣ ಕೇಳುತ್ತಿರುವ ಬಗ್ಗೆ, ಸುತ್ತಾಡಿಸುತ್ತಿರುವ ಬಗ್ಗೆ ಹಾಗೂ ವಿಳಂಬ ಮಾಡುತ್ತಿರುವ ಬಗ್ಗೆ ಸಾರ್ವಜನಿಕರು ದೂರು ನೀಡುತ್ತಿದ್ದಾರೆ ಎಂದು ಶಾಸಕ ಕೊತ್ತೂರು ಮಂಜುನಾಥ್ ಹೇಳಿದರು.
ಕೋಲಾರ ನಗರಸಭೆಯ ಕಚೇರಿಯಲ್ಲಿ ಗುರುವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದರು.
ಎಲ್ಲದಕ್ಕೂ ದುಡ್ಡು ದುಡ್ಡು, ಎಷ್ಟು ಹಣ ಮಾಡುತ್ತೀರಿ? ಸಾರ್ವಜನಿಕರಿಂದ ಹಣ ಪಡೆದು ಮನೆಗೆ ಹೋದ ಮೇಲೆ ರಾತ್ರಿ ನೆಮ್ಮದಿಯಾಗಿ ನಿದ್ದೆ ಬರುತ್ತದೆಯೇ? ಹಣ ಇದ್ದವರು ಪರದಾಡುತ್ತಿರುವ ವಿಚಾರ ಗೊತ್ತಿಲ್ಲವೇ? ಸಿರಿವಂತರ ನೆಮ್ಮದಿಯಿಂದ ಇದ್ದಾರೆಯೇ? ಈಚಿನ ಕೆಲ ಘಟನೆಗಳು ತಮಗೆ ಗೊತ್ತಾಗುತ್ತಿಲ್ಲವೇ ಎಂದು ಪ್ರಶ್ನಿಸಿದರು.
ಪ್ರಮುಖವಾಗಿ ನಗರಸಭೆ ಹಾಗೂ ತಾಲ್ಲೂಕು ಕಚೇರಿಯಲ್ಲಿ ಲಂಚದ ಹಾವಳಿ ಹೆಚ್ಚು ಕೇಳಿ ಬರುತ್ತಿದೆ. ಖಾತೆ ಏಕೆ ವಿಳಂಬ ಮಾಡುತ್ತೀರಿ? ಹಣ ಕೊಟ್ಟರೆ ಮಾತ್ರ ಖಾತೆ ಮಾಡಿಕೊಡುತ್ತಾರೆ ಎಂಬ ದೂರುಗಳು ಬರುತ್ತಿವೆ ಎಂದು ಹೇಳಿದರು.
ದೊಡ್ಡ ಮಾಡಬೇಕು. ಆದರೆ, ಅದು ಗೆರೆ ದಾಟಬಾರದು. ನಾನು ಶಾಸಕನಾಗಿ ಮೂರು ವರ್ಷಗಳಾಗುತ್ತಾ ಬರುತ್ತಿದೆ. ಗುತ್ತಿಗೆದಾರರು ಇರಬಹುದು, ಅಧಿಕಾರಿಗಳು ಆಗಿರಬಹುದು. ಯಾರ ಬಳಿಯೂ ಹಣ ಕೇಳಿಲ್ಲ. ಅವರ ಕಾಸಿನಲ್ಲಿ ಚಹಾ ಕೂಡ ಕುಡಿಯಲ್ಲ. ನಾನೇ ಅವರಿಗೆ ಚಹಾ ಕೊಟ್ಟು ಕಳಿಸುತ್ತೇನೆ ಎಂದರು.
ವರ್ಗಾವಣೆ ಮಾಡಿ ಕಳಿಸಬಹುದು ಅಥವಾ ಅಮಾನತುಗೊಳಿಸಬಹುದು. ಅದಕ್ಕೆ ತಕರಾರು ಬರುತ್ತದೆ. ನಾವು ಏನು ಮಾಡಬೇಕು ಹೇಳಿ ಎಂದು ಕೇಳಿದರು.
ಬೇಸಿಗೆ ಬರುತ್ತಿದ್ದು, ನೀರಿನ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು. ನಗರದಲ್ಲಿ 300 ಕೊಳವೆ ಬಾವಿ ಇವೆ. 20 ಕೊಳವೆಬಾವಿ ಕೊರೆಯಿಸಲು ಅಧಿಕಾರಿಗಳು ಪ್ರಸ್ತಾಪ ಕಳಿಸಿದರೆ ಅನುದಾನ ಕೊಡಿಸಲಾಗುವುದು ಶಾಸಕರಿಗೆ ₹ 50 ಕೋಟಿ ವಿಶೇಷ ಅನುದಾನ ಸಿಗುತ್ತಿದೆ. ಅದರಲ್ಲಿ ಸ್ವಲ್ಪ ಅನುದಾನ ತೆಗೆದಿರಿಸಲಾಗುವುದು ಎಂದರು.
ತೆರಿಗೆ ಸಂಗ್ರಹ ವೇಗವಾಗಿ ನಡೆಯಬೇಕು. ವಾಣಿಜ್ಯ ಚಟುವಟಿಕೆ ನಡೆಸುವ ಮಳಿಗೆಗಳ ತೆರಿಗೆ ಸಂಗ್ರಹಿಸಬೇಕು. ನಗರದಲ್ಲಿ 40 ಸಾವಿರ ಆಸ್ತಿಗಳಿವೆ. ವಾಣಿಜ್ಯ ಮಳಿಗೆ ಬಳಿ ಹೋಗಿ ಪರಿಶೀಲಿಸಿ ತೆರಿಗೆ ವಸೂಲಿ ಮಾಡಬೇಕು. ನೀರಿನ ಕರ ವಸೂಲಿಗೂ ಕ್ರಮ ವಹಿಸಬೇಕು ಎಂದು ಸೂಚನೆ ನೀಡಿದರು.
ನಗರಸಭೆ ಆಯುಕ್ತ ನವೀನ್ ಚಂದ್ರ ಮಾತನಾಡಿ, ‘ಬದುಕಿದ್ದವರಿಗೆ ಮರಣ ಪ್ರಮಾಣ ಪತ್ರ ಕೊಟ್ಟಿರುವುದು ಗೊತ್ತಾಗಿದೆ. ಈ ಸಂಬಂಧ ಸದ್ಯದಲ್ಲೇ ಎಲ್ಲಾ ಆಸ್ಪತ್ರೆ ಸೇರಿಸಿ ಸಭೆ ನಡೆಸಲಾಗುವುದು. ಯಾವುದೇ ವಿಳಂಬ, ನ್ಯೂನತೆಗೆ ಅವಕಾಶ ನೀಡುವುದಿಲ್ಲ’ ಎಂದರು.
₹ 11 ಕೋಟಿ ಆಸ್ತಿ ತೆರಿಗೆ ವಸೂಲಿ ಮಾಡಲಾಗಿದೆ. ₹ 1 ಕೋಟಿ ಬಾಕಿ ಇದೆ. ಈ ಸಂಬಂಧ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ನಾಲ್ಕು ಮನೆಗೆ ನಲ್ಲಿ ಹಾಕಿದ್ದರೆ ನಾಲ್ಕೂ ಮಂದಿ ಠೇವಣಿ ಕಟ್ಟಬೇಕು. ಇಲ್ಲದಿದ್ದರೆ ಸಂಪರ್ಕ ಕಡಿತಗೊಳಿಸಲಾಗುವುದು ಎಂದು ತಿಳಿಸಿದರು.
ಜನನ ಮರಣ ಪ್ರಮಾಣಪತ್ರ ವಿತರಣೆ ಸಂಬಂಧ ನಗರದ ಎಲ್ಲ ಆಸ್ಪತ್ರೆ ಸೇರಿಸಿ ಸಭೆ ನಡೆಸಲಾಗುವುದು. ಯಾವುದೇ ವಿಳಂಬ, ನ್ಯೂನತೆಗೆ ಅವಕಾಶ ನೀಡುವುದಿಲ್ಲ ಎಂದರು.
ನಗರಸಭೆ ಮಾಜಿ ಅಧ್ಯಕ್ಷೆ ಲಕ್ಷ್ಮಿದೇವಮ್ಮ ಹಾಗೂ ಇತರೆ ಅಧಿಕಾರಿಗಳು ಇದ್ದರು.
3 ತಿಂಗಳಲ್ಲಿ ಪ್ಲಾಸ್ಟಿಕ್ ಮುಕ್ತಗೊಳಿಸಿ
ಮೂರು ತಿಂಗಳಲ್ಲಿ ಕೋಲಾರ ನಗರವನ್ನು ಪ್ಲಾಸ್ಟಿಕ್ ಮುಕ್ತಗೊಳಿಸಬೇಕು ಎಂದು ಕೊತ್ತೂರು ಮಂಜುನಾಥ್ ಸೂಚನೆ ನೀಡಿದರು. ನಗರದ ಹಲವು ಕಾಲುವೆಗಳು ಪ್ಲಾಸ್ಟಿಕ್ ಮಯವಾಗಿವೆ. ಅಂಗಡಿಗಳ ಮೇಲೆ ಪ್ಲಾಸ್ಟಿಕ್ ದಾಳಿ ನಡೆಸುವುದರಿಂದ ಪ್ರಯೋಜನ ಇಲ್ಲ. ಪ್ಲಾಸ್ಟಿಕ್ ಮೂಲ ಪತ್ತೆ ಮಾಡಿ ಎಲ್ಲಿಂದ ಬರುತ್ತದೆ ಎಂಬುದನ್ನು ಪತ್ತೆ ಹಚ್ಚಿ ದಾಳಿ. ಕೇಸ್ ಹಾಕುವ ಎಚ್ಚರಿಕೆ ನೀಡಬೇಕು ಎಂದರು. ಈ ಬಗ್ಗೆ ಮಾತನಾಡಿದ ಆಯುಕ್ತ ನವೀನ್ ಚಂದ್ರ ಈಗಾಗಲೇ ಎಚ್ಚರಿಕೆ ನೀಡಿದ್ದೇವೆ. ಮುಂದಿನ ದಿನಗಳಲ್ಲಿ ಅನಿರೀಕ್ಷಿತ ದಾಳಿ ನಡೆಸುತ್ತೇವೆ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.