ಅಮಾನತು
ಕೋಲಾರ: ಸೌದೆ ವ್ಯಾಪಾರಿಯ ಬಳಿ ಲಂಚ ಪಡೆದ ಆರೋಪ ಪ್ರಕರಣದಲ್ಲಿ ಅರಣ್ಯ ಇಲಾಖೆಯ ಇಬ್ಬರು ಸಿಬ್ಬಂದಿಯನ್ನು ಅಮಾನತುಗೊಳಿಸಿ ಪ್ರಾದೇಶಿಕ ಅರಣ್ಯ ಸಂರಕ್ಷಣಾಧಿಕಾರಿಯು ಡಿ.1ರಂದು ಆದೇಶ ಹೊರಡಿಸಿದ್ದಾರೆ.
ಉಪವಲಯ ಅರಣ್ಯಾಧಿಕಾರಿ ವಿ.ಹರೀಶ್, ಗಸ್ತು ಅರಣ್ಯ ಪಾಲಕ (ಗಾರ್ಡ್) ನಾಗರಾಜಪ್ಪ ಅಮಾನತುಗೊಂಡವರು.
ತಾಲ್ಲೂಕಿನ ಚಾಮರಹಳ್ಳಿ ಮುನಿಶಾಮಪ್ಪ ಸೌದೆ ವ್ಯಾಪಾರಿಯಾಗಿದ್ದು, ವೆಂಕಟರಾಮಪ್ಪ ಎಂಬುವರ ತೋಟದಲ್ಲಿ 2025ರ ಆಗಸ್ಟ್ 28ರಂದು ಸಂಜೆ ಆಲದ ಮರಗಳನ್ನು ಕಟಾವು ಮಾಡಿ ಸಾಗಣೆಮಾಡುತ್ತಿರುವಾಗ ಉಪ ವಲಯ ಅರಣ್ಯಾಧಿಕಾರಿ ಮತ್ತು ಮೋಜಣಿದಾರ ಹರೀಶ್ ಟ್ರಾಕ್ಟರನ್ನು ಜಪ್ತಿ ಮಾಡಿದ್ದಾರೆ. ಪರವಾನಗಿ ಇಲ್ಲವೆಂದು ಲಂಚಕ್ಕೆ ಬೇಡಿಕೆ ಇಟ್ಟು, ನೆಡುತೋಪು ಕಾವಲುದಾರ ಟಿ.ವಿ.ರಾಜೇಶ್ ಅವರ ಫೋನ್ ಪೇಗೆ ₹ 45 ಸಾವಿ ಪಡೆದುಕೊಂಡಿರುತ್ತಾರೆ ಎಂದು ಅಮಾನತು ಆದೇಶದಲ್ಲಿ ಉಲ್ಲೇಖವಾಗಿದೆ.
ಈ ಬಗ್ಗೆ ‘ನಮ್ಮ ರೈತ ಸಂಘ’ದ ಜಿಲ್ಲಾಧ್ಯಕ್ಷ ಕೆ.ವೈ.ಗಣೇಶ್ ಗೌಡ ಹಾಗೂ ಪದಾಧಿಕಾರಿಗಳು ಶಾಸಕ ಕೊತ್ತೂರು ಜಿ.ಮಂಜುನಾಥ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ಅವರಿಗೆ ದೂರು ನೀಡಿದ್ದರು. ನ.21ರಂದು ನಡೆದ ಕೆಡಿಪಿ ಸಭೆಯಲ್ಲಿ ಲಂಚದ ವಿಚಾರವೂ ವ್ಯಾಪಕ ಚರ್ಚೆಯಾಗಿತ್ತು. ಆಗ ಸಚಿವ ಬೈರತಿ ಸುರೇಶ್ ಅವರು ತನಿಖೆ ನಡೆಸಿ ಅಮಾನತುಪಡಿಸಲು ಡಿಸಿಎಫ್ ಸರೀನಾ ಸಿಕ್ಕಲಿಗಾರ್ ಅವರಿಗೆ ಸೂಚಿಸಿದ್ದರು.
ರಾಜೇಶ್ ಅವರ ತಾಯಿ ಖಾತೆಗೆ ₹ 35 ಸಾವಿರ ಹಾಕಿಸಿಕೊಂಡಿದ್ದು, ಅಲ್ಲಿಂದ ಹರೀಶ್ ಖಾತೆಗೆ ₹ 20 ಸಾವಿರ ವರ್ಗಾವಣೆ ಮಾಡಿಕೊಂಡಿದ್ದಾರೆ. ಉಳಿದಿದ್ದನ್ನು ನಗದು ಮೂಲಕ ನೀಡಿದ್ದಾರೆ. ವಾಹನ ಜಪ್ತಿಪಡಿಸಿಕೊಂಡಿರುವ ವಿರುದ್ಧ ನಿಯಮಾನುಸಾರ ಕ್ರಮಕೈಗೊಳ್ಳದೆ ಬಿಡುಗಡೆ ಮಾಡಿ ಕಳುಹಿಸುವ ಮೂಲಕ ಕರ್ತವ್ಯಲೋಪ ಎಸಗಿದ್ದಾರೆ ಎಂಬುದು ಅಮಾನತು ಪತ್ರದಲ್ಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.