ADVERTISEMENT

ಆರೋಗ್ಯಕರ ಸಮಾಜ ನಿರ್ಮಾಣ ಮಾಡಿ

ಡೆಂಗಿ ತಡೆಗೆ ಸಹಕರಿಸಿ: ತಾಲ್ಲೂಕು ಆರೋಗ್ಯಾಧಿಕಾರಿ ನಾರಾಯಣಸ್ವಾಮಿ ಕಿವಿಮಾತು

​ಪ್ರಜಾವಾಣಿ ವಾರ್ತೆ
Published 16 ಮೇ 2022, 15:35 IST
Last Updated 16 ಮೇ 2022, 15:35 IST
ರಾಷ್ಟ್ರೀಯ ಡೆಂಗಿ ದಿನಾಚರಣೆ ಅಂಗವಾಗಿ ಕೋಲಾರದಲ್ಲಿ ಸೋಮವಾರ ನಡೆದ ಜಾಗೃತಿ ಜಾಥಾದಲ್ಲಿ ಪ್ಯಾರಾ ಮೆಡಿಕಲ್ ವಿದ್ಯಾರ್ಥಿಗಳು ಪಾಲ್ಗೊಂಡರು
ರಾಷ್ಟ್ರೀಯ ಡೆಂಗಿ ದಿನಾಚರಣೆ ಅಂಗವಾಗಿ ಕೋಲಾರದಲ್ಲಿ ಸೋಮವಾರ ನಡೆದ ಜಾಗೃತಿ ಜಾಥಾದಲ್ಲಿ ಪ್ಯಾರಾ ಮೆಡಿಕಲ್ ವಿದ್ಯಾರ್ಥಿಗಳು ಪಾಲ್ಗೊಂಡರು   

ಕೋಲಾರ: ‘ಡೆಂಗಿ ತಡೆಗಟ್ಟುವಿಕೆ ಪ್ರಕ್ರಿಯೆ ಮನೆಯಿಂದಲೇ ಆರಂಭವಾಗಬೇಕು. ಜನರು ಮುನ್ನೆಚ್ಚರಿಕೆ ವಹಿಸುವ ಮೂಲಕ ಆರೋಗ್ಯಕರ ಸಮಾಜ ನಿರ್ಮಾಣ ಮಾಡಬೇಕು’ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಎ.ವಿ.ನಾರಾಯಣಸ್ವಾಮಿ ಕಿವಿಮಾತು ಹೇಳಿದರು.

ರಾಷ್ಟ್ರೀಯ ಡೆಂಗಿ ದಿನಾಚರಣೆ ಅಂಗವಾಗಿ ಇಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿ, ‘ಮಳೆಗಾಲ ಆರಂಭವಾಗಿರುವುದರಿಂದ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಮಳೆ ನೀರು ನಿಂತು ಸೊಳ್ಳೆ ಉತ್ಪತ್ತಿ ಹೆಚ್ಚಲಿದೆ. ಸೊಳ್ಳೆಗಳಿಂದ ಮಲೇರಿಯಾ, ಡೆಂಗಿ, ಚಿಕೂನ್ ಗುನ್ಯ ಕಾಯಿಲೆ ಬರುತ್ತದೆ’ ಎಂದರು.

‘ಡೆಂಗಿ ಜ್ವರವು ಸಾಂಕ್ರಾಮಿಕ ರೋಗವಾಗಿದ್ದು, ಸಾರ್ವಜನಿಕರು ಮನೆ ಸುತ್ತಮುತ್ತ ಒಳಾಂಗಣದಲ್ಲಿ ಮತ್ತು ಹೊರಾಂಗಣದಲ್ಲಿ ನೀರು ಶೇಖರಣೆಯಾಗದಂತೆ ಎಚ್ಚರ ವಹಿಸಬೇಕು. ವಯೋವೃದ್ಧರು, ಗರ್ಭಿಣಿಯರು ಹಾಗೂ ಮಕ್ಕಳು ಡೆಂಗಿ ತಡೆಗೆ ಕಡ್ಡಾಯವಾಗಿ ಸೊಳ್ಳೆ ಪರದೆ ಬಳಸಬೇಕು. ಸೊಳ್ಳೆ ಕಚ್ಚದಂತೆ ಮೈತುಂಬಾ ಬಟ್ಟೆ ಧರಿಸಬೇಕು. ಸೊಳ್ಳೆ ಬತ್ತಿ ಮತ್ತು ಮುಲಾಮು ದ್ರಾವಣ ಉಪಯೋಗಿಸಬೇಕು’ ಎಂದು ಸಲಹೆ ನೀಡಿದರು.

ADVERTISEMENT

‘ಡೆಂಗಿ ಸೊಳ್ಳೆಯಿಂದ ಬರುವ ಕಾಯಿಲೆಯಾಗಿದ್ದು, ಇದಕ್ಕೆ ನಿಖರವಾದ ಚಿಕಿತ್ಸೆ ಮತ್ತು ಚುಚ್ಚುಮದ್ದು ಇಲ್ಲದ ಕಾರಣ ಸಾವು ಸಹ ಸಂಭವಿಸಬಹುದು. ಹೀಗಾಗಿ ಇದಕ್ಕಾಗಿ ಕಾಯಿಲೆ ಬರದಂತೆ ಎಚ್ಚರ ವಹಿಸಬೇಕು. ‘ಡೆಂಗಿ ತಡೆಗಟ್ಟಬಹುದು ಬನ್ನಿ ಎಲ್ಲರೂ ಕೈ ಜೋಡಿಸೋಣ’ ಎಂಬ ಧ್ಯೇಯ ವಾಕ್ಯದೊಂದಿಗೆ ಈ ಬಾರಿಯ ಡೆಂಗಿ ದಿನಾಚರಣೆ ಆಚರಿಸಲಾಗುತ್ತಿದ್ದು, ಕಾಯಿಲೆ ನಿಯಂತ್ರಣಕ್ಕೆ ಸಾರ್ವಜನಿಕರು ಸಹಕರಿಸಬೇಕು’ ಎಂದು ಕೋರಿದರು.

ಮಳೆ ಆರಂಭ: ‘ಜಿಲ್ಲೆಯಲ್ಲಿ ಮಳೆ ಆರಂಭವಾಗಿರುವುದರಿಂದ ಡೆಂಗಿ ಮತ್ತು ಚಿಕೂನ್‌ ಗುನ್ಯಾ ರೋಗ ಹರಡುವ ಸಾಧ್ಯತೆ ಹೆಚ್ಚಿದೆ. ಈ ರೋಗಗಳಿಗೆ ಕಾರಣವಾದ ಸೊಳ್ಳೆಗಳ ಸಂತತಿ ಬೆಳೆಯದಂತೆ ಎಚ್ಚರ ವಹಿಸಬೇಕು’ ಎಂದು ನಗರಸಭೆ ಅಧ್ಯಕ್ಷೆ ಶ್ವೇತಾ ಸಲಹೆ ನೀಡಿದರು.

‘ಸೊಳ್ಳೆ ನಿಯಂತ್ರಣಕ್ಕೆ ನಗರಸಭೆ ಕ್ರಮ ಕೈಗೊಂಡಿದೆ. ಈಗಾಗಲೇ ಅಬೆಟ್ ಸಿಂಪಡಿಸಿ, ಫಾಗಿಂಗ್ ಮಾಡಲಾಗುತ್ತಿದೆ. ಜನರು ಮನೆಗಳಲ್ಲಿ ನೀರಿನ ಡ್ರಮ್‌ಗಳಿಗೆ ಮುಚ್ಚಳ ಮುಚ್ಚಬೇಕು ಹಾಗೂ ಬಯಲಿನಲ್ಲಿರುವ ತ್ಯಾಜ್ಯ ವಸ್ತುಗಳಾದ ಬಾಟಲಿ, ಪ್ಲಾಸ್ಟಿಕ್ ಲೋಟಗಳು, ಒರಳು ಕಲ್ಲು, ಚಿಪ್ಪಿನಲ್ಲಿ ಮಳೆ ನೀರು ಸಂಗ್ರಹವಾಗದಂತೆ ಎಚ್ಚರ ವಹಿಸಬೇಕು’ ಎಂದು ಮನವಿ ಮಾಡಿದರು.

‘ಕೋವಿಡ್‍ಗಿಂತಲೂ 2 ಪಟ್ಟು ಹೆಚ್ಚು ಸಾವುಗಳು ಸಾಂಕ್ರಾಮಿಕ ರೋಗಗಳಿಂದ ಸಂಭವಿಸುತ್ತವೆ. ಆದ್ದರಿಂದ ಜನ ಎಚ್ಚೆತ್ತುಕೊಳ್ಳಬೇಕು’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಜಗದೀಶ್ ಹೇಳಿದರು.

ಎಸ್‌ಎನ್‌ಆರ್ ಆಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎಸ್‌.ಎನ್‌.ವಿಜಯ್‌ಕುಮಾರ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಚಾರಿಣಿ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಎಂ.ಕಮಲಾ, ರೋಟರಿ ಸೆಂಟ್ರಲ್ ಅಧ್ಯಕ್ಷ ಸಿಎಂಆರ್ ಶ್ರೀನಾಥ್ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.