ADVERTISEMENT

ಆರೋಗ್ಯಕರ ಸಮಾಜ ನಿರ್ಮಾಣ ಮಾಡಿ: ಶೋಭಿತಾ

ಡೆಂಗಿ–ಚಿಕೂನ್‌ ಗುನ್ಯಾ ತಡೆ ಮಾಸಾಚರಣೆಯಲ್ಲಿ ತಹಶೀಲ್ದಾರ್‌ ಶೋಭಿತಾ ಕಿವಿಮಾತು

​ಪ್ರಜಾವಾಣಿ ವಾರ್ತೆ
Published 16 ಜುಲೈ 2021, 17:02 IST
Last Updated 16 ಜುಲೈ 2021, 17:02 IST
ಕೋಲಾರದಲ್ಲಿ ಶುಕ್ರವಾರ ನಡೆದ ಡೆಂಗಿ ಮತ್ತು ಚಿಕೂನ್‌ ಗುನ್ಯಾ ತಡೆ ಮಾಸಾಚರಣೆ ಕಾರ್ಯಕ್ರಮದಲ್ಲಿ ತಹಶೀಲ್ದಾರ್‌ ಶೋಭಿತಾ ಮಾತನಾಡಿದರು
ಕೋಲಾರದಲ್ಲಿ ಶುಕ್ರವಾರ ನಡೆದ ಡೆಂಗಿ ಮತ್ತು ಚಿಕೂನ್‌ ಗುನ್ಯಾ ತಡೆ ಮಾಸಾಚರಣೆ ಕಾರ್ಯಕ್ರಮದಲ್ಲಿ ತಹಶೀಲ್ದಾರ್‌ ಶೋಭಿತಾ ಮಾತನಾಡಿದರು   

ಕೋಲಾರ: ‘ಜಿಲ್ಲೆಯಲ್ಲಿ ಮುಂಗಾರು ಮಳೆ ಆರಂಭವಾಗಿರುವುದರಿಂದ ಡೆಂಗಿ ಮತ್ತು ಚಿಕೂನ್‌ ಗುನ್ಯಾ ರೋಗ ಹರಡುವ ಸಾಧ್ಯತೆ ಹೆಚ್ಚಿದೆ. ಈ ರೋಗಗಳಿಗೆ ಕಾರಣವಾದ ಸೊಳ್ಳೆಗಳ ಸಂತತಿ ಬೆಳೆಯದಂತೆ ಎಚ್ಚರ ವಹಿಸಬೇಕು’ ಎಂದು ತಹಶೀಲ್ದಾರ್‌ ಶೋಭಿತಾ ಸೂಚಿಸಿದರು.

ಇಲ್ಲಿ ಶುಕ್ರವಾರ ನಡೆದ ಡೆಂಗಿ ಮತ್ತು ಚಿಕೂನ್‌ ಗುನ್ಯಾ ತಡೆ ಮಾಸಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ‘ಜಿಲ್ಲೆಯಲ್ಲಿ ಇತ್ತೀಚೆಗೆ ಡೆಂಗಿ 15 ಪ್ರಕರಣ ಹಾಗೂ 26 ಚಿಕೂನ್‌ ಗುನ್ಯಾ ಪ್ರಕರಣ ವರದಿಯಾಗಿವೆ’ ಎಂದರು.

‘ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಮಳೆ ನೀರು ನಿಂತು ಸೊಳ್ಳೆ ಉತ್ಪತ್ತಿ ಹೆಚ್ಚಲಿದೆ. ಸೊಳ್ಳೆಗಳಿಂದ ಮಲೇರಿಯಾ, ಡೆಂಗಿ, ಚಿಕೂನ್ ಗುನ್ಯ ಕಾಯಿಲೆ ಬರುತ್ತದೆ. ಡೆಂಗಿ ತಡೆಗಟ್ಟುವಿಕೆ ಪ್ರಕ್ರಿಯೆ ಮನೆಯಿಂದಲೇ ಆರಂಭವಾಗಬೇಕು. ಜನರು ಮುನ್ನೆಚ್ಚರಿಕೆ ವಹಿಸುವ ಮೂಲಕ ಆರೋಗ್ಯಕರ ಸಮಾಜ ನಿರ್ಮಾಣ ಮಾಡಬೇಕು’ ಎಂದು ಕಿವಿಮಾತು ಹೇಳಿದರು.

ADVERTISEMENT

‘ಡೆಂಗಿ ಜ್ವರವು ಸಾಂಕ್ರಾಮಿಕ ರೋಗವಾಗಿದ್ದು, ಸಾರ್ವಜನಿಕರು ಮನೆ ಸುತ್ತಮುತ್ತ ಒಳಾಂಗಣದಲ್ಲಿ ಮತ್ತು ಹೊರಾಂಗಣದಲ್ಲಿ ನೀರು ಶೇಖರಣೆಯಾಗದಂತೆ ಎಚ್ಚರ ವಹಿಸಬೇಕು. ವಯೋವೃದ್ಧರು, ಗರ್ಭಿಣಿಯರು ಹಾಗೂ ಮಕ್ಕಳು ಡೆಂಗಿ ತಡೆಗೆ ಕಡ್ಡಾಯವಾಗಿ ಸೊಳ್ಳೆ ಪರದೆ ಬಳಸಬೇಕು. ಸೊಳ್ಳೆ ಕಚ್ಚದಂತೆ ಮೈತುಂಬಾ ಬಟ್ಟೆ ಧರಿಸಬೇಕು. ಸೊಳ್ಳೆ ಬತ್ತಿ ಮತ್ತು ಮುಲಾಮು ದ್ರಾವಣ ಉಪಯೋಗಿಸಬೇಕು’ ಎಂದು ಸಲಹೆ ನೀಡಿದರು.

‘ಒಳಾಂಗಣ ಮತ್ತು ಹೊರಾಂಗಣದ ಸಿಮೆಂಟ್ ತೊಟ್ಟಿಗಳು, ಪ್ಲಾಸ್ಟಿಕ್ ಡ್ರಮ್‌, ಬಕೆಟ್‌, ಬ್ಯಾರಲ್, ಹೂವಿನ ಕುಂಡಗಳು, ಹವಾನಿಯಂತ್ರಿತ ಉಪಕರಣ (ಎ.ಸಿ), ಮಡಿಕೆಗಳು, ಒರಳು ಕಲ್ಲು, ತೆಂಗಿನ ಚಿಪ್ಪುಗಳಲ್ಲಿ ಮಳೆ ನೀರು ಶೇಖರಣೆಯಾಗಿ ಈಡಿಸ್ ಲಾರ್ವಾ ಉತ್ಪತ್ತಿಯಾಗುತ್ತವೆ. ನೀರು ಶೇಖರಣೆ ಮಾಡಿರುವ ತೊಟ್ಟಿ, ಡ್ರಮ್‌ಗಳನ್ನು ವಾರಕ್ಕೊಮ್ಮೆ ಖಾಲಿ ಮಾಡಿ ಸ್ವಚ್ಛಗೊಳಿಸಬೇಕು’ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ರಮ್ಯ ದೀಪಿಕಾ ಹೇಳಿದರು.

‘ಕೆರೆ, ಕುಂಟೆ, ಕಾಲುವೆ, ತೊಟ್ಟಿಗಳಲ್ಲಿ ಗಪ್ಪಿ ಅಥವಾ ಗ್ಯಾಂಬೂಸಿಯಾ ಮೀನು ಮರಿಗಳನ್ನು ಬಿಡಬೇಕು. ನೀರಿನ ಡ್ರಮ್‌ಗಳಿಗೆ ಮುಚ್ಚಳ ಮುಚ್ಚಬೇಕು ಹಾಗೂ ಬಯಲಿನಲ್ಲಿರುವ ತ್ಯಾಜ್ಯ ವಸ್ತುಗಳಾದ ಬಾಟಲಿ, ಪ್ಲಾಸ್ಟಿಕ್ ಲೋಟಗಳು, ಒರಳು ಕಲ್ಲು, ಚಿಪ್ಪಿನಲ್ಲಿ ಮಳೆ ನೀರು ಸಂಗ್ರಹವಾಗದಂತೆ ಎಚ್ಚರ ವಹಿಸಬೇಕು. ಡೆಂಗಿ ಸಂಶಯಾಸ್ಪದ ಪ್ರಕರಣಗಳ ಬಗ್ಗೆ ಸಮುದಾಯಕ್ಕೆ ಅರಿವು ಮೂಡಿಸಲು ಆರೋಗ್ಯ ಇಲಾಖೆಯಿಂದ ಈಡಿಸ್ ಲಾರ್ವಾ ಸಮೀಕ್ಷೆ ನಡೆಸಬೇಕು’ ಎಂದು ತಿಳಿಸಿದರು.

ಜೀವನ ಚಕ್ರ: ‘ವೈರಸ್‌ ಸೋಂಕು ಹೊಂದಿದ ಈಡೀಸ್ ಈಜಿಪ್ಟೈ ಎಂಬ ಸೊಳ್ಳೆಯ ಕಡಿತದಿಂದ ಒಬ್ಬರಿಂದ ಇನ್ನೊಬ್ಬರಿಗೆ ಡೆಂಗಿ ಜ್ವರ ಹಾಗೂ ಚಿಕೂನ್‌ ಗುನ್ಯ ಕಾಯಿಲೆ ಬರುತ್ತದೆ. ಸ್ವಚ್ಛ ನೀರಿನಲ್ಲಿ ಹುಟ್ಟುವ ಈ ಸೊಳ್ಳೆ ಸಾಧಾರಣವಾಗಿ ಹಗಲಿನಲ್ಲಿ ಕಚ್ಚುತ್ತದೆ. ಈಡೀಸ್ ಈಜಿಪ್ಟೈ ಸೊಳ್ಳೆಯು ತನ್ನ ಜೀವನ ಚಕ್ರ ಪೂರ್ಣಗೊಳಿಸಲು 8ರಿಂದ 10 ದಿನ ತೆಗೆದುಕೊಳ್ಳುತ್ತದೆ’ ಎಂದು ಮಾಹಿತಿ ನೀಡಿದರು.

‘ಈಡೀಸ್ ಈಜಿಪ್ಟೈ ಸೊಳ್ಳೆ ನೋಡಲು ಸ್ವಲ್ಪ ವಿಭಿನ್ನವಾಗಿರುತ್ತದೆ. ಈ ಸೊಳ್ಳೆ ಮೈ ಮೇಲೆ ಕಪ್ಪು ಬಿಳಿ ಬಣ್ಣದ ಚುಕ್ಕೆ ಇರುತ್ತವೆ. ಈ ಕಾರಣಕ್ಕೆ ಇವುಗಳನ್ನು ಟೈಗರ್ ಸೊಳ್ಳೆಗಳೆಂದು ಕರೆಯುತ್ತೇವೆ. ಇವು ಸಾಮಾನ್ಯವಾಗಿ ಹಗಲು ಹೊತ್ತಿನಲ್ಲಿ ಮಾತ್ರ ಕಚ್ಚುತ್ತವೆ. ಹೆಣ್ಣು ಸೊಳ್ಳೆ ಮೊಟ್ಟೆಗಳನ್ನು ಇಡಲು ಬೇಕಾಗುವ ಪ್ರೋಟಿನ್‌ಗಾಗಿ ಮನುಷ್ಯನನ್ನು ಕಚ್ಚುತ್ತವೆ’ ಎಂದು ವಿವರಿಸಿದರು.

ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಬಾಬು, ಆರೋಗ್ಯ ನಿರ್ವಹಣಾಧಿಕಾರಿ ಆರ್.ಸತ್ಯ ನಾರಾಯಣಗೌಡ, ಗ್ರಾಮ ಪಂಚಾಯಿತಿ ಅಧಿಕಾರಿಗಳು ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.