ADVERTISEMENT

ಕೋಲಾರ: ಎಂ.ಜಿ. ರಸ್ತೆ ವಿಸ್ತರಣೆಗೆ ವರ್ತಕರ ವಿರೋಧ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2020, 12:29 IST
Last Updated 7 ನವೆಂಬರ್ 2020, 12:29 IST

ಕೋಲಾರ: ನಗರದ ಎಂ.ಜಿ ರಸ್ತೆ ಹಾಗೂ ದೊಡ್ಡಪೇಟೆ ರಸ್ತೆಗಳ ವಿಸ್ತರಣೆಗೆ ಹೈಕೋರ್ಟ್‌ ತಡೆಯಾಜ್ಞೆ ನೀಡಿದ್ದರೂ ಜಿಲ್ಲಾಡಳಿತವು ರಸ್ತೆ ವಿಸ್ತರಣೆಗಾಗಿ ಕಟ್ಟಡಗಳನ್ನು ತೆರವುಗೊಳಿಸಲು ಮುಂದಾಗಿದೆ ಎಂದು ಜಿಲ್ಲಾ ವರ್ತಕರ ಸಂಘದ ಸದಸ್ಯರು ಆರೋಪಿಸಿದರು.

ಇಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘದ ಪದಾಧಿಕಾರಿಗಳು, ‘ನೂರಾರು ವರ್ತಕರು ಪೂರ್ವಜರ ಕಾಲದಿಂದ ಎಂ.ಜಿ ರಸ್ತೆ ಮತ್ತು ದೊಡ್ಡಪೇಟೆಯಲ್ಲಿ ವ್ಯಾಪಾರ ಮಾಡುತ್ತಾ ಬದುಕು ಸಾಗಿಸುತ್ತಿದ್ದಾರೆ. ಸುಮಾರು 300 ವರ್ತಕರು ಬಾಡಿಗೆ ಹಾಗೂ ಸ್ವಂತ ಕಟ್ಟಡಗಳಲ್ಲಿ ವಹಿವಾಟು ನಡೆಸುತ್ತಿದ್ದಾರೆ’ ಎಂದರು.

‘ಜಿಲ್ಲಾಡಳಿತವು 2015ರಲ್ಲಿ ರಸ್ತೆ ವಿಸ್ತರಣೆಗಾಗಿ ವಾಣಿಜ್ಯ ಕಟ್ಟಡಗಳನ್ನು ತೆರವುಗೊಳಿಸಲು ಮುಂದಾಗಿತ್ತು. ಆಗ ಹೈಕೋರ್ಟ್‌ ಮೆಟ್ಟಿಲೇರಿ ಕಟ್ಟಡಗಳ ತೆರವು ಕಾರ್ಯಾಚರಣೆಗೆ ತಡೆಯಾಜ್ಞೆ ತಂದಿದ್ದೇವೆ. ಪ್ರಕರಣದ ಬಗ್ಗೆ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಆದರೆ, ಜಿಲ್ಲಾಡಳಿತವು ತಡೆಯಾಜ್ಞೆ ಆದೇಶ ಉಲ್ಲಂಘಿಸಿ ಕಟ್ಟಡಗಳನ್ನು ತೆರವುಗೊಳಿಸಲು ಸಿದ್ಧತೆ ನಡೆಸಿದೆ’ ಎಂದು ಪದಾಧಿಕಾರಿ ಸೂರ್ಯಬಾಬು ದೂರಿದರು.

ADVERTISEMENT

‘ನಗರಸಭೆ ಅಧಿಕಾರಿಗಳು ರಸ್ತೆ ವಿಸ್ತರಣೆಗೆ ನೆಲಸಮಗೊಳಿಸಬೇಕಿರುವ ಕಟ್ಟಡಗಳನ್ನು ಗುರುತು (ಮಾರ್ಕಿಂಗ್‌) ಮಾಡಿದ್ದಾರೆ. ಅಧಿಕಾರಿಗಳು ರಸ್ತೆ ವಿಸ್ತರಣೆ ನೆಪದಲ್ಲಿ ವರ್ತಕರಿಗೆ ಕಿರುಕುಳ ನೀಡುತ್ತಿದ್ದಾರೆ. ಪ್ರಕರಣ ನ್ಯಾಯಾಲಯದಲ್ಲಿ ಇತ್ಯರ್ಥವಾಗುವುದಕ್ಕೂ ಮುನ್ನ ಕಟ್ಟಡಗಳನ್ನು ತೆರವುಗೊಳಿಸಿದರೆ ವರ್ತಕರೆಲ್ಲಾ ಕುಟುಂಬ ಸಮೇತ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ’ ಎಂದು ಹೇಳಿದರು.

‘ಈಗಾಗಲೇ ಕೊರೊನಾ ಸೋಂಕು ಮತ್ತು ಲಾಕ್‌ಡೌನ್‌ನಿಂದ ಸಾಕಷ್ಟು ನಷ್ಟ ಅನುಭವಿಸಿದ್ದೇವೆ. ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ಅಧಿಕಾರಿಗಳು ದೌರ್ಜನ್ಯ ನಡೆಸುತ್ತಿದ್ದಾರೆ. ಕಟ್ಟಡಗಳನ್ನು ತೆರವುಗೊಳಿಸಿದರೆ ವರ್ತಕರೆಲ್ಲಾ ಬೀದಿ ಪಾಲಾಗುತ್ತೇವೆ’ ಎಂದು ಸಂಘದ ಪದಾಧಿಕಾರಿ ಮನೋಹರ್‌ ಆತಂಕ ವ್ಯಕ್ತಪಡಿಸಿದರು.

ಪರ್ಯಾಯ ವ್ಯವಸ್ಥೆ: ‘ನ್ಯಾಯಾಲಯದ ಆದೇಶಕ್ಕೆ ಬದ್ಧವಾಗಿರುತ್ತೇವೆ. ಅಂತಿಮ ಆದೇಶ ಬರುವವರೆಗೂ ಯಥಾಸ್ಥಿತಿ ಕಾಯ್ದುಕೊಳ್ಳಬೇಕು. ರಸ್ತೆ ವಿಸ್ತರಣೆಯಿಂದ ಕಟ್ಟಡ ಕಳೆದುಕೊಳ್ಳುವ ವರ್ತಕರಿಗೆ ಮಾರುಕಟ್ಟೆ ದರಕ್ಕಿಂತ 2 ಪಟ್ಟು ಹೆಚ್ಚು ಪರಿಹಾರ ಕೊಡಬೇಕು. ವಹಿವಾಟಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು’ ಎಂದು ಸದಸ್ಯರು ಒತ್ತಾಯಿಸಿದರು.

ಸಂಘದ ಸದಸ್ಯರಾದ ಷಕೀಲ್‌, ರಾಜೇಂದ್ರಕುಮಾರ್‌ ಹಾಜರಿದ್ದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.