ADVERTISEMENT

ಅಮ್ಮವಾರಿಪೇಟೆಯಲ್ಲಿ ಘಟನೆ: ಜಿಲ್ಲಾಧಿಕಾರಿ ಜತೆ ವರ್ತಕರ ವಾಗ್ವಾದ

ಮಾಂಸ ಮಾರಾಟ ಮಳಿಗೆಗಳಿಗೆ ಬೀಗ

​ಪ್ರಜಾವಾಣಿ ವಾರ್ತೆ
Published 16 ಜನವರಿ 2021, 16:36 IST
Last Updated 16 ಜನವರಿ 2021, 16:36 IST

ಕೋಲಾರ: ಜಿಲ್ಲಾ ಕೇಂದ್ರದಲ್ಲಿ ಶನಿವಾರ ನಗರ ಪ್ರದಕ್ಷಿಣೆ ನಡೆಸಿದ ಜಿಲ್ಲಾಧಿಕಾರಿ ಸಿ.ಸತ್ಯಭಾಮ ಅವರೊಂದಿಗೆ ಅಮ್ಮವಾರಿಪೇಟೆಯ ಕೋಳಿ ಮತ್ತು ಕುರಿ ಮಾಂಸ ಮಾರಾಟ ಮಳಿಗೆಗಳ ಮಾಲೀಕರು ವಾಗ್ವಾದ ನಡೆಸಿದ್ದರಿಂದ ಸ್ಥಳದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಯಿತು.

ಅಮ್ಮವಾರಿಪೇಟೆಯ ಮಾಂಸದ ಅಂಗಡಿಗಳಲ್ಲಿ ಸ್ವಚ್ಛತೆ ಕಾಪಾಡದ ಬಗ್ಗೆ ಮತ್ತು ಅಂಗಡಿ ಮಾಲೀಕರು ಪಾದಚಾರಿ ಮಾರ್ಗ ಒತ್ತುವರಿ ಮಾಡಿಕೊಂಡಿರುವ ಸಂಬಂಧ ಅಸಮಾಧಾನ ವ್ಯಕ್ತಪಡಿಸಿದ ಜಿಲ್ಲಾಧಿಕಾರಿಯು ಮಳಿಗೆಗಳಿಗೆ ಬೀಗಮುದ್ರೆ ಹಾಕುವಂತೆ ನಗರಸಭೆ ಅಧಿಕಾರಿಗಳಿಗೆ ಸೂಚಿಸಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಮಳಿಗೆ ಮಾಲೀಕರು, ‘ನಿಮ್ಮಿಂದ ನಮಗೆ ತುಂಬಾ ಸಮಸ್ಯೆಯಾಗುತ್ತಿದೆ. ನಮಗೆ ತೊಂದರೆ ಕೊಡುವುದಕ್ಕಾಗಿಯೇ ಇಲ್ಲಿಗೆ ಬಂದಿದ್ದೀರಿ. ನಮ್ಮ ಸ್ವಂತ ಕಟ್ಟಡಗಳಲ್ಲಿ ವ್ಯಾಪಾರ ಮಾಡುತ್ತಿದ್ದೇವೆ. ನಗರಸಭೆಗೂ ಮಳಿಗೆಗಳಿಗೂ ಸಂಬಂಧವಿಲ್ಲ’ ಎಂದು ಜಿಲ್ಲಾಧಿಕಾರಿ ಜತೆ ವಾಗ್ವಾದಕ್ಕಿಳಿದರು.

ADVERTISEMENT

‘ನೀವು ನಮಗೆ ಮಾರುಕಟ್ಟೆ ಕಟ್ಟಿಸಿಕೊಟ್ಟಿಲ್ಲ. ವ್ಯಾಪಾರಕ್ಕೆ ಸೂಕ್ತ ಜಾಗ ಕೊಟ್ಟಿಲ್ಲ. ನಿರಂತರವಾಗಿ ತೊಂದರೆ ಮಾಡುತ್ತಾ ಬಂದಿದ್ದೀರಿ’ ಎಂದು ಏರು ಧ್ವನಿಯಲ್ಲಿ ಮಾತನಾಡಿದರು.

ಇದರಿಂದ ಕೆಂಡಾಮಂಡಲರಾದ ಜಿಲ್ಲಾಧಿಕಾರಿ, ‘ಮೊದಲು ಸರಿಯಾಗಿ ಮಾತನಾಡುವುದನ್ನು ಕಲಿಯಿರಿ. ನಿಮಗೆ ಇಷ್ಟ ಬಂದಂತೆ ವ್ಯಾಪಾರ ಮಾಡುವುದಕ್ಕೆ ಅವಕಾಶವಿಲ್ಲ. ಕಂಡಕಂಡಲ್ಲಿ ಕಸ ಸುರಿದು ಮಾರುಕಟ್ಟೆಯಲ್ಲಿ ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣ ಮಾಡಿದ್ದೀರಿ. ಎಲ್ಲೆಡೆ ಪಾದಚಾರಿ ಮಾರ್ಗ ಒತ್ತುವರಿಯಾಗಿದೆ’ ಎಂದು ಗುಡುಗಿದರು.

‘ಹೇಳುವವರು, ಕೇಳುವವರು ಯಾರೂ ಇಲ್ಲ ಎಂದುಕೊಂಡಿದ್ದೀರಾ? ಜಿಲ್ಲಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಲು ಬಂದಿದ್ದೇನೆ. ನನ್ನ ಕೆಲಸಕ್ಕೆ ಅಡ್ಡಿಪಡಿಸುತ್ತೀರಾ? ಮನಬಂದಂತೆ ಮಾತನಾಡಿದರೆ ಸುಮ್ಮನೆ ಬಿಡುವುದಿಲ್ಲ. ಅನಗತ್ಯವಾಗಿ ವಾದ ಮಾಡಬೇಡಿ. ನಗರಸಭೆಯಿಂದ ಪಡೆದಿರುವ ವಾಣಿಜ್ಯ ಪರವಾನಗಿ ತೋರಿಸಿ’ ಎಂದು ತಾಕೀತು ಮಾಡಿದರು.

ಹೆದರುವುದಿಲ್ಲ: ಜಿಲ್ಲಾಧಿಕಾರಿ ಮಾತಿನಿಂದ ಮತ್ತಷ್ಟು ಕೆರಳಿದ ವರ್ತಕರು, ‘ನಿಮ್ಮ ಬೆದರಿಕೆಗೆ ಜಗ್ಗುವುದಿಲ್ಲ. ನಮಗೂ ಕಾನೂನು ಗೊತ್ತಿದೆ. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ನಮ್ಮನ್ನು ಬಂಧನ ಮಾಡಿಸಿ. ನಾವು ಹೆದರುವುದಿಲ್ಲ’ ಎಂದು ತಿರುಗೇಟು ನೀಡಿದರು.

ಬಳಿಕ ಜಿಲ್ಲಾಧಿಕಾರಿಯು ರಸ್ತೆಗೆ ಅಡ್ಡವಾಗಿ ಇಟ್ಟಿದ್ದ ಕೋಳಿಗಳನ್ನು ಜಪ್ತಿ ಮಾಡಿಸಿ ಮಳಿಗೆಗಳಿಗೆ ಬೀಗ ಹಾಕಿಸಿದರು. ಎಲ್ಲಾ ಮಳಿಗೆಗಳ ವಾಣಿಜ್ಯ ಪರವಾನಗಿ ಪರಿಶೀಲಿಸುವಂತೆ ನಗರಸಭೆ ಅಧಿಕಾರಿಗಳಿಗೆ ಆದೇಶಿಸಿದರು. ನಗರಸಭೆ ಅಧ್ಯಕ್ಷೆ ಶ್ವೇತಾ, ಆಯುಕ್ತ ಶ್ರೀಕಾಂತ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.