ADVERTISEMENT

ಕೋಲಾರ | ಹೊರಗಿನವರಿಗೆ ಉಸ್ತುವಾರಿ; ಪರಂಪರೆ ಮುಂದುವರಿಕೆ!

ಸಚಿವ ಬೈರತಿ ಸುರೇಶ್‌ಗೆ ಅಸ್ತು–ಮುನಿಯಪ್ಪ, ಕೃಷ್ಣ‌ಬೈರೇಗೌಡಗೆ ತಪ್ಪಿದ ಅವಕಾಶ

ಕೆ.ಓಂಕಾರ ಮೂರ್ತಿ
Published 9 ಜೂನ್ 2023, 19:30 IST
Last Updated 9 ಜೂನ್ 2023, 19:30 IST
ಬೈರತಿ ಸುರೇಶ್‌
ಬೈರತಿ ಸುರೇಶ್‌   

ಕೋಲಾರ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರಮಾಪ್ತ ಬೈರತಿ ಸುರೇಶ್ ಅವರಿಗೆ ಕೋಲಾರ ಜಿಲ್ಲೆಯ ಉಸ್ತುವಾರಿ ಸಚಿವ ಸ್ಥಾನ ಒಲಿದಿದೆ.

ನಗರಾಭಿವೃದ್ಧಿ ಸಚಿವರೂ ಆಗಿರುವ ಬೈರತಿ ಸುರೇಶ್‌ ಬೆಂಗಳೂರಿನ ಹೆಬ್ಬಾಳ ಕ್ಷೇತ್ರದವರು. ಕೋಲಾರ ಜಿಲ್ಲೆ ಪಾಲಿಗೆ ಅವರು ಹೊರಗಿನವರು ಹಾಗೂ ಹೊಸಬರು. ಈ ಮೂಲಕ ಜಿಲ್ಲೆಗೆ ಹೊರಗಿನವರನ್ನು ಉಸ್ತುವಾರಿ ಸಚಿವರನ್ನಾಗಿ ನಿಯೋಜಿಸುವ ಪರಂಪರೆ ಮುಂದುವರಿದಿದೆ. ಜಿಲ್ಲೆಯಲ್ಲಿ ಗೆದ್ದ ಶಾಸಕರಿಗೆ ಸಚಿವ ಸ್ಥಾನ ಸಿಗದಿರುವುದೇ ಇದಕ್ಕೆ ಮುಖ್ಯ ಕಾರಣ.

ಇನ್ನು ಜಿಲ್ಲೆಯವರೇ ಆಗಿದ್ದು, ಹೊರಗಿನ ಕ್ಷೇತ್ರಗಳಲ್ಲಿ ಗೆದ್ದಿರುವ ಆಹಾರ ಸಚಿವ ಕೆ.ಎಚ್‌.ಮುನಿಯಪ್ಪ (ಬೆಂಗಳೂರು ಗ್ರಾಮಾಂತರದ ದೇವನಹಳ್ಳಿ) ಹಾಗೂ ಕಂದಾಯ ಸಚಿವ ಕೃಷ್ಣಬೈರೇಗೌಡ (ಬೆಂಗಳೂರಿನ ಬ್ಯಾಟರಾಯನಪುರ) ಅವರ ಹೆಸರೂ ಈ ಸ್ಥಾನಕ್ಕೆ ಕೇಳಿಬರುತಿತ್ತು. ಇವರಿಬ್ಬರಿಗೂ ಜಿಲ್ಲೆಯ ಸಮಸ್ಯೆಗಳ ಅರಿವು ಚೆನ್ನಾಗಿ ಇತ್ತು.

ADVERTISEMENT

ಆದರೆ, ಮುನಿಯಪ್ಪ ಅವರ ನಿಯೋಜನೆ ವಿಚಾರದಲ್ಲಿ ಘಟಬಂಧನ್‌ನಲ್ಲಿ ಗುರುತಿಸಿಕೊಂಡಿರುವ ಕಾಂಗ್ರೆಸ್‌ ಶಾಸಕರು, ವಿಧಾನ ಪರಿಷತ್‌ ಸದಸ್ಯರಿಂದ ಆಕ್ಷೇಪವಿತ್ತು. ಜೊತೆಗೆ ಹೊಂದಾಣಿಕೆ ಸಮಸ್ಯೆ ಆಗಬಹುದೆಂದು ಮುನಿಯಪ್ಪ ಅವರಲ್ಲೂ ಈ ಜವಾಬ್ದಾರಿ ವಹಿಸಿಕೊಳ್ಳಲು ನಿರಾಸಕ್ತಿ ಇತ್ತು. ಇನ್ನು ಕೃಷ್ಣಬೈರೇಗೌಡರು ಸಮ್ಮಿಶ್ರ ಸರ್ಕಾರದಲ್ಲಿ ಜಿಲ್ಲೆಯ ಉಸ್ತುವಾರಿ ಆಗಿದ್ದರು. ಅವರು ಘಟಬಂಧನ್‌ಗೆ ತೀರಾ ಹತ್ತಿರವಿದ್ದರು. ಅವರ ನೇಮಕಕ್ಕೆ ಮುನಿಯಪ್ಪ ಆಪ್ತರಿಂದ ಆಕ್ಷೇಪ ಉಂಟಾಗಿರುವ ಸಾಧ್ಯತೆ ಇದೆ.

ಕಳೆದ ಹತ್ತು ವರ್ಷಗಳಲ್ಲಿ ಬಹುತೇಕ ಅವಧಿಯಲ್ಲಿ ಜಿಲ್ಲೆಯ ಹೊರಗಿನವರೇ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು.

ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಿಲ್ಲೆಯಲ್ಲಿ ಆ ಪಕ್ಷದ ಯಾವುದೇ ಶಾಸಕ ಇರಲಿಲ್ಲ. ಆದರೆ, ಮುಳಬಾಗಿಲು ಕ್ಷೇತ್ರದಿಂದ ಗೆದ್ದಿದ್ದ ಪಕ್ಷೇತರ ಎಚ್‌.ನಾಗೇಶ್‌ ಕೆಲ ದಿನ ಉಸ್ತುವಾರಿ ಸಚಿವರಾಗಿದ್ದರು. ಬಳಿಕ ಆರೋಪ ಬಂದ ‌ಕಾರಣ ಆ ಸ್ಥಾನ ತೊರೆಯಬೇಕಾಯಿತು. ಅವರ ಬಳಿಕ ಹೊರಗಿನವರು ಉಸ್ತುವಾರಿ ಸಚಿವರಾಗಿದ್ದರು. ಅರವಿಂದ ಲಿಂಬಾವಳಿ, ನಂತರ ಮುನಿರತ್ನ ಮೂರೂವರೆ ವರ್ಷ ಉಸ್ತುವಾರಿ ಸಚಿವರಾಗಿದ್ದರು. ‌ಅವರು ಅಪರೂಪಕ್ಕೆ ಬಂದು ಹೋಗುತ್ತಿದ್ದಕ್ಕೆ, ಕೆಡಿಪಿ ಸಭೆ ನಡೆಸದಿದ್ದಕ್ಕೆ ಸಾರ್ವಜನಿಕರು, ಸಂಘಟನೆಗಳಿಂದ ಟೀಕೆ ವ್ಯಕ್ತವಾಗಿತ್ತು.

2013ರಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಆರಂಭದಲ್ಲಿ ಯು.ಟಿ.ಖಾದರ್‌ ಉಸ್ತುವಾರಿಯಾಗಿದ್ದರು. ಬಳಿಕ ರಾಮಲಿಂಗಾರೆಡ್ಡಿ, ಆನಂತರ ಆರೋಗ್ಯ ಸಚಿವರಾಗಿದ್ದ ರಮೇಶ್‌ ಕುಮಾರ್‌ ಜಿಲ್ಲಾ ಉಸ್ತುವಾರಿ ಆಗಿದ್ದರು. ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಕೃಷ್ಣ ಬೈರೇಗೌಡ ಉಸ್ತುವಾರಿಯಾಗಿದ್ದರು.

ಸಿ.ಬೈರೇಗೌಡ, ಆಲಂಗೂರು ಶ್ರೀನಿವಾಸ್‌, ಕೆ.ಶ್ರೀನಿವಾಸಗೌಡ, ಕೃಷ್ಣಯ್ಯ ಶೆಟ್ಟಿ, ಕೆ.ಆರ್‌.ರಮೇಶ್‌ ಕುಮಾರ್‌ ನಂತರ ಕೋಲಾರ ಮೂಲದ ಯಾರಿಗೂ ಮಂತ್ರಿಯಾಗುವ ಅವಕಾಶ ಸಿಕ್ಕಿಲ್ಲ.

ಎನ್‌.ಚಲುವರಾಯಸ್ವಾಮಿ, ಬಾಲಚಂದ್ರ ಜಾರಕಿಹೊಳಿ, ಬಿ.ಎನ್‌.ಬಚ್ಚೇಗೌಡ ಹಾಗೂ ಎ.ನಾರಾಯಣಸ್ವಾಮಿ ಅವರು ಅತಿಥಿ ಉಸ್ತುವಾರಿ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ. ಉಸ್ತುವಾರಿಗಳು ನೇಮಕವಾಗದ ಸಂದರ್ಭದಲ್ಲಿ ‌ಧ್ವಜಾರೋಹಣ ಕಾರ್ಯಕ್ರಮ ನೆರವೇರಿಸಿದ್ದಾರೆ.

ಕೆ.ಎಚ್‌.ಮುನಿಯಪ್ಪ
ಕೃಷ್ಣ ಬೈರೇಗೌಡ
ಮುನಿಯಪ್ಪ, ಕೃಷ್ಣ‌ ಬೈರೇಗೌಡಗೆ ಮುಳುವಾದ ಜಿಲ್ಲೆಯ ಮುಖಂಡರೊಂದಿಗಿನ ಹೊಂದಾಣಿಕೆ ಕೊರತೆ ಕೋಲಾರ ಜಿಲ್ಲೆಯ ಹೆಚ್ಚಿನ ಉಸ್ತುವಾರಿಗಳು ಹೊರ ಜಿಲ್ಲೆಯವರು ಭಾನುವಾರ ಜಿಲ್ಲೆಗೆ ಉಸ್ತುವಾರಿ ಸಚಿವರ ಮೊದಲ ಭೇಟಿ.
ಸಿದ್ದರಾಮಯ್ಯ ಆಪ್ತರೇ ಆಗಿರುವುದರಿಂದ ಅವರಿಂದ ಹೆಚ್ಚಿನ ಅಭಿವೃದ್ಧಿ ಕೆಲಸ ನಡೆಯಲಿವೆ ಎಂಬ ನಂಬಿಕೆ ಇದೆ. ನಾವು ಕೆಲಸ ಮಾಡಿಸಿಕೊಳ್ಳುತ್ತೇವೆ. ಬಿಜೆಪಿ ಅವಧಿಯಲ್ಲಿ ಇದ್ದಂತೆ ನಡೆಯಲ್ಲ.
ಸಿ.ಲಕ್ಷ್ಮಿನಾರಾಯಣ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ

ಕಳೆದ 30 ವರ್ಷಗಳಲ್ಲಿ ಕೋಲಾರ ಜಿಲ್ಲಾ ಉಸ್ತುವಾರಿ ಸಚಿವರಾದವರು

* ಸಿ.ಬೈರೇಗೌಡ

* ವಿ.ಮುನಿಯಪ್ಪ

* ಕೆ.ಶ್ರೀನಿವಾಸಗೌಡ‌

* ಆಲಂಗೂರು ಶ್ರೀನಿವಾಸ್‌

* ಕೃಷ್ಣಯ್ಯ ಶೆಟ್ಟಿ

* ವರ್ತೂರು ಪ್ರಕಾಶ್‌

* ಯು.ಟಿ.ಖಾದರ್‌

* ರಾಮಲಿಂಗಾರೆಡ್ಡಿ

* ಕೆ.ಆರ್‌.ರಮೇಶ್‌ ಕುಮಾರ್‌

* ಕೃಷ್ಣ ಬೈರೇಗೌಡ

* ಎಚ್‌.ನಾಗೇಶ್‌

* ಅರವಿಂದ ಲಿಂಬಾವಳಿ

* ಮುನಿರತ್ನ

* ಬೈರತಿ ಸುರೇಶ್‌ (ಪ್ರಸ್ತುತ)

ಸಿದ್ದರಾಮಯ್ಯ ಕನಸು ಸಾಕಾರಕ್ಕೆ ನಿಯೋಜನೆ!
ಸಿದ್ದರಾಮಯ್ಯ ಅವರು ಕೋಲಾರ‌ದಲ್ಲಿ ಸ್ಪರ್ಧಿಸಲು ಮುಂದಾಗಿದ್ದಾಗ ಕ್ಷೇತ್ರದ ಅಭಿವೃದ್ಧಿ ಸಂಬಂಧ ಹಲವು ಯೋಜನೆ ರೂಪಿಸಿದ್ದರು. ಹೀಗಾಗಿ ಆ ಯೋಜನೆ ಸಾಕಾರಗೊಳಿಸಲು ಬೈರತಿ ಸುರೇಶ್‌ ಅವರನ್ನು ನಿಯೋಜಿಸಿದ್ದಾರೆ ಎನ್ನಲಾಗುತ್ತಿದೆ. ಜಿಲ್ಲೆಯ ಕಾಂಗ್ರೆಸ್‌ ಶಾಸಕರು ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷರು ಕೂಡ ಇದೇ ಮಾತು ಹೇಳಿದ್ದಾರೆ. ಸುರೇಶ್‌ ನಗರಾಭಿವೃದ್ಧಿ ಸಚಿವರೂ ಆಗಿರುವುದರಿಂದ ಕೋಲಾರ ನಗರ ಅಭಿವೃದ್ಧಿಗೆ ನೆರವಾಗಬಹುದು ಎಂಬ ನಿರೀಕ್ಷೆ ಇಲ್ಲಿಯ ಜನರಲ್ಲಿ ಹೆಚ್ಚಿದೆ. ‘ನಾನು ಸದ್ಯ ನವದೆಹಲಿಯಲ್ಲಿದ್ದೇನೆ. ಒಂದೆರಡು ದಿನಗಳಲ್ಲಿ ಕೋಲಾರಕ್ಕೆ ಬಂದು ಮಾತನಾಡುತ್ತೇನೆ’ ಎಂದು ಬೈರತಿ ಸುರೇಶ್‌ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು. ಜೂನ್‌ 11ಕ್ಕೆ ಕಾಂಗ್ರೆಸ್‌ ಸರ್ಕಾರದ ಗ್ಯಾರಂಟಿ ‘ಶಕ್ತಿ’ ಯೋಜನೆ ಸಂಬಂಧ ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣಕ್ಕೆ ಜಿಲ್ಲೆಯಲ್ಲಿ ಆಯೋಜಿಸಿರುವ ಕಾರ್ಯಕ್ರಮಕ್ಕೆ ಅವರು ಕೋಲಾರದಲ್ಲಿ ಚಾಲನೆ ನೀಡಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.