ಕೋಲಾರ: ಜಿಲ್ಲೆಯ ಖಾಸಗಿ ಆಸ್ಪತ್ರೆಗಳಲ್ಲಿ ಸಿಸೇರಿಯನ್ (ಸಿ–ಸೆಕ್ಷನ್) ಹೆರಿಗೆ ಪ್ರಕರಣ ಹೆಚ್ಚುತ್ತಿದ್ದು, 2024–25ನೇ ಸಾಲಿನಲ್ಲಿ ಶೇ 70 ಹಾಗೂ 2025–26ನೇ ಸಾಲಿನಲ್ಲಿ ಆಗಸ್ಟ್ ಅಂತ್ಯದವರೆಗೆ ಶೇ 72ರಷ್ಟು ಪ್ರಮಾಣ ದಾಖಲಾಗಿರುವುದು ಆತಂಕ ಹುಟ್ಟಿಸಿದೆ.
ಸಿಸೇರಿಯನ್ ಹೆರಿಗೆಗಳಿಗೆ ಕಡಿವಾಣ ಹಾಕುವಂತೆ ಆರೋಗ್ಯ ಇಲಾಖೆ ಎಚ್ಚರಿಕೆ ನೀಡಿದ್ದರೂ ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ಮಾಡುತ್ತಿರುವ ಪ್ರಕರಣ ಹೆಚ್ಚುತ್ತಲೇ ಇವೆ.
ಹಣ ವಸೂಲಿಗಾಗಿ ಅನಗತ್ಯವಾಗಿ ಸಿಸೇರಿಯನ್ ಹೆರಿಗೆ ಮಾಡಿಸುವ ಖಾಸಗಿ ಆಸ್ಪತ್ರೆಗಳನ್ನು ಮುಚ್ಚಿಸುವಂತೆ ಈ ಹಿಂದೆ ಕೆಡಿಪಿ ಸಭೆಯಲ್ಲಿ ಸೂಚನೆ ಕೂಡ ನೀಡಲಾಗಿತ್ತು. ಆದರೂ ಪ್ರಮಾಣ ಕಡಿಮೆ ಆಗಿಲ್ಲ. ಕೆಲ ಗರ್ಭಿಣಿಯರು ಸಿಸೇರಿಯನ್ ಆಯ್ಕೆಯೂ ಹೆಚ್ಚಳಕ್ಕೆ ಕಾರಣ ಎಂಬುದು ತಿಳಿದು ಬಂದಿದೆ. ಕ್ಲಿಷ್ಟಕರ ಸಂದರ್ಭದಲ್ಲಷ್ಟೇ ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ಮಾಡಿಸಲು ಆರೋಗ್ಯ ಇಲಾಖೆ ಸಲಹೆ ನೀಡಿದೆ.
ಜಿಲ್ಲಾ ಆರೋಗ್ಯ ಇಲಾಖೆ ನೀಡಿರುವ ಮಾಹಿತಿ ಪ್ರಕಾರ ಈ ವರ್ಷ ಜಿಲ್ಲೆಯಲ್ಲಿ ಆಗಸ್ಟ್ ತಿಂಗಳ ಅಂತ್ಯದವರೆಗೆ ಒಟ್ಟು 7,093 ಹೆರಿಗೆ ಪ್ರಕರಣಗಳು ದಾಖಲಾಗಿವೆ. ಅದರಲ್ಲಿ ಒಟ್ಟು 3,906 ಸಿಸೇರಿಯನ್ ಹೆರಿಗೆ ನಡೆದಿವೆ. ಅಂದರೆ ಶೇ 55ರಷ್ಟು ಸಿಸೇರಿಯನ್, ಶೇ 45ರಷ್ಟು ಸಹಜ ಪ್ರಸವ ನಡೆದಿರುವುದು ಸ್ಪಷ್ಟವಾಗುತ್ತದೆ.
ಅದರಲ್ಲೂ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಪರಿಸ್ಥಿತಿ ಅವಲೋಕಿಸಿದರೆ ಅಂಕಿಅಂಶಗಳು ಮತ್ತಷ್ಟು ಆತಂಕ ಹುಟ್ಟಿಸುತ್ತವೆ. ಕಳೆದ ಐದು ತಿಂಗಳಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ಒಟ್ಟು 3,095 ಹೆರಿಗೆ ನಡೆದಿವೆ. ಈ ಪೈಕಿ 2,236 ಪ್ರಕರಣಗಳು ಸಿಸೇರಿಯನ್ ಹೆರಿಗೆಗಳಾಗಿವೆ. ಅಂದರೆ ಸಿಸೇರಿಯನ್ ಪ್ರಮಾಣ ಶೇ 72.
ಹಾಗೆ ನೋಡಿದರೆ ಸರ್ಕಾರಿ ಆಸ್ಪತ್ರೆಗಳೇ ಪರವಾಗಿಲ್ಲ. ಸರ್ಕಾರಿ ಆಸ್ಪತ್ರೆಗಳಲ್ಲಿ ದಾಖಲಾದ 3,998 ಪ್ರಕರಣಗಳಲ್ಲಿ ಕೇವಲ 1,640 ಸಿಸೇರಿಯನ್ ಹೆರಿಗೆಗಳಾಗಿವೆ. ಈ ಪ್ರಮಾಣ ಶೇ 42. ಇದು ಕೂಡ ಹೆಚ್ಚೇ. ಆದರೆ, ಖಾಸಗಿ ಆಸ್ಪತ್ರೆಗಳಿಗೆ ಹೋಲಿಸಿದರೆ ಓಕೆ.
2024ರ ಏಪ್ರಿಲ್‌ನಿಂದ 2025ರ ಮಾರ್ಚ್ ಅಂತ್ಯದವರೆಗಿನ ಅಂಕಿಅಂಶಗಳು ಕೂಡ ಇದೇ ಆತಂಕಕಾರಿ ಮಾಹಿತಿ ತೆರೆದಿಡುತ್ತವೆ. ಖಾಸಗಿ ಆಸ್ಪತ್ರೆಗಳಲ್ಲಿ ಹೆರಿಗೆಗೆಂದು ದಾಖಲಾದ ಪ್ರಕರಣಗಳಲ್ಲಿ ಶೇ 70ರಷ್ಟು ಸಿ–ಸೆಕ್ಷನ್ ಹೆರಿಗೆ ಆಗಿರುವುದು ಪತ್ತೆಯಾಗಿದೆ.
ಖಾಸಗಿ ಆಸ್ಪತ್ರೆಗಳಲ್ಲಿ ಒಟ್ಟು 7,142 ಹೆರಿಗೆಗಳು ನಡೆದಿದ್ದು, ಅದರಲ್ಲಿ 5,023 ಸಿಸೇರಿಯನ್ ಹೆರಿಗೆಗಳಾಗಿರುವುದು ಗಂಭೀರವಾದ ವಿಚಾರವಾಗಿದೆ. ಅದರಲ್ಲೂ ಮುಳಬಾಗಿಲು (ಶೇ 99) ಹಾಗೂ ಮಾಲೂರು (ಶೇ 80) ತಾಲ್ಲೂಕುಗಳಲ್ಲಿ ಈ ಸಂಖ್ಯೆ ಮತ್ತಷ್ಟು ಅಧಿಕವಾಗಿದೆ.
‘ಕೆಲ ಮಹಿಳೆಯರು ಕೂಡ ವಿವಿಧ ಕಾರಣಗಳಿಂದ ಸಿ–ಸೆಕ್ಷನ್ ಹೆರಿಗೆಗೆ ಮುಂದಾಗುತ್ತಾರೆ. ಇಂಥ ದಿನವೇ ಮಗು ಜನಿಸಿದರೆ ಒಳ್ಳೆಯದು ಎಂಬ ಕೆಲವರ ನಂಬಿಕೆಯೂ ಇದಕ್ಕೆ ಕಾರಣ. ಸಿ–ಸೆಕ್ಷನ್ ಕಡಿಮೆ ಮಾಡಲು ಆರೋಗ್ಯ ಇಲಾಖೆಯಿಂದಲೂ ನಿಗಾ ಇಡಲಾಗಿದೆ’ಡಾ.ಚಾರಿಣಿ, ಜಿಲ್ಲಾ ಆರ್‌ಸಿಎಚ್ ಅಧಿಕಾರಿ
ಸಹಜ ಹೆರಿಗೆ ಸಂದರ್ಭದಲ್ಲಾಗುವ ಅತೀವ ನೋವು ಸಹಿಸಲಾಗದೆಂದು ಬಹುತೇಕರು ಶಸ್ತ್ರಚಿಕಿತ್ಸೆ ಮೊರೆ ಹೋಗುತ್ತಾರೆ. ಇನ್ನು ಕೆಲವೆಡೆ ಖಾಸಗಿ ಆಸ್ಪತ್ರೆಗಳೇ ಸಿ–ಸೆಕ್ಷನ್ ಹೆರಿಗೆಗೆ ಪ್ರೋತ್ಸಾಹಿಸುತ್ತಿರುವುದು ಕಂಡುಬಂದಿದೆ.
ತಾಯಿ ಹಾಗೂ ಮಗುವಿನ ಜೀವ ಉಳಿಸಲು ಅತ್ಯಗತ್ಯ ಎನಿಸಿದಾಗ, ಮಗು ಗರ್ಭಾಶಯದಲ್ಲಿ ಸರಿಯಾದ ಸ್ಥಾನದಲ್ಲಿ ಇಲ್ಲದಿದ್ದರೆ, ಕೆಲ ಆರೋಗ್ಯ ಸಮಸ್ಯೆ, ದೈಹಿಕ ಸಮಸ್ಯೆ ಸನ್ನಿವೇಶಗಳಲ್ಲಿ ಸಿ–ಸೆಕ್ಷನ್ ಹೆರಿಗೆ ಮಾಡಿಸಬಹುದು ಎನ್ನುತ್ತಾರೆ ವೈದ್ಯರು.
ಸಿ–ಸೆಕ್ಷನ್ ಹೆರಿಗೆ ನಂತರ ಚೇತರಿಗೆ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಸೋಂಕು, ಅಧಿಕ ರಸ್ತಸ್ರಾವ, ಅರಿವಳಿಕೆ ನೀಡುವುದರಿಂದ ಅಡ್ಡ ಪರಿಣಾಮ ಉಂಟಾಗಬಹುದು, ದೀರ್ಘಕಾಲೀನ ಸಮಸ್ಯೆಗಳು ಉಂಟಾಗುತ್ತವೆ ಎಂಬುದಾಗಿ ವೈದ್ಯರು ಎಚ್ಚರಿಕೆ ಕೂಡ ನೀಡುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.