ADVERTISEMENT

ಕೋಲಾರ | ಹಿಂದೂ ಸಮಾಜ ಒಡೆಯಲು ಹುನ್ನಾರ: ಓಂಶಕ್ತಿ ಚಲಪತಿ

ರಾಜ್ಯ ಕಾಂಗ್ರೆಸ್‌ ಸರ್ಕಾರದಿಂದ ಜಾತಿಗಳ ನಡುವೆ ಗೊಂದಲ: ಬಿಜೆಪಿ ಜಿಲ್ಲಾಧ್ಯಕ್ಷ ಆರೋಪ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2025, 6:01 IST
Last Updated 22 ಸೆಪ್ಟೆಂಬರ್ 2025, 6:01 IST
ಕೋಲಾರದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಓಂಶಕ್ತಿ ಚಲಪತಿ ಮಾತನಾಡಿದರು. ಪಕ್ಷದ ಮುಖಂಡರು ಪಾಲ್ಗೊಂಡಿದ್ದರು
ಕೋಲಾರದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಓಂಶಕ್ತಿ ಚಲಪತಿ ಮಾತನಾಡಿದರು. ಪಕ್ಷದ ಮುಖಂಡರು ಪಾಲ್ಗೊಂಡಿದ್ದರು   

ಕೋಲಾರ: ರಾಜ್ಯ ಕಾಂಗ್ರೆಸ್‌ ಸರ್ಕಾರವು ಜಾತಿ ಜಾತಿಗಳ ನಡುವೆ ಗೊಂದಲ ಮೂಡಿಸಿ ಹಿಂದೂ ಸಮಾಜ ಒಡೆಯಲು ಹುನ್ನಾರ ನಡೆಸಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಓಂಶಕ್ತಿ ಚಲಪತಿ ಆರೋಪಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಗೆ ನಮ್ಮ ವಿರೋಧವಿಲ್ಲ. ಆದರೆ, ತುಷ್ಟೀಕರಣದ ಜಾತಿಗಣತಿಗೆ ನಮ್ಮ ವಿರೋಧವಿದೆ. ಕ್ರೈಸ್ತ ಧರ್ಮದ ಓಲೈಕೆಗಾಗಿ ಹಿಂದೂ ಧರ್ಮ ಬಲಿಕೊಡಲು ಮುಂದಾಗಿದೆ’ ಎಂದು ವಾಗ್ದಾಳಿ ನಡೆಸಿದರು.

‘ಸೆ.22 ರಿಂದ ರಾಜ್ಯದಲ್ಲಿ ಎಲ್ಲಾ ಜಾತಿಗಳ ಜನಗಣತಿ ನಡೆಯಲಿದೆ. ಕ್ರಿಶ್ಚಿಯನ್‌ ಮಿಷನರಿಗಳು, ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಓಲೈಕೆಗಾಗಿ ಕಾಂಗ್ರೆಸ್‌ ಸರ್ಕಾರ ಜಾತಿಗಳಲ್ಲಿ ಗೊಂದಲ ಸೃಷ್ಟಿಸಿದೆ. ಹಿಂದೂ ಧರ್ಮದಿಂದ ಕ್ರೈಸ್ತ ಧರ್ಮಕ್ಕೆ ಮತಾಂತರ ಗೊಂಡಿರುವವರನ್ನು ಗುರುತಿಸಿ ಒಕ್ಕಲಿಗ ಕ್ರಿಶ್ಚಿಯನ್, ದಲಿತ, ಕುರುಬ, ವಾಲ್ಮೀಕಿ, ಬಲಿಜ, ವೀರಶೈವ, ಬ್ರಾಹ್ಮಣ ಕ್ರಿಶ್ಚಿಯನ್... ಹೀಗೆ ನಾನಾ ಜಾತಿಗಳನ್ನು ವಿಂಗಡಿಸಿ ಸಂವಿಧಾನಕ್ಕೆ ವಿರುದ್ಧವಾಗಿ ಸಮೀಕ್ಷೆ ಮಾಡಲು ಹೊರಟಿದೆ’ ಎಂದು ದೂರಿದರು.

ADVERTISEMENT

‘ಇದಕ್ಕೆ ಎಲ್ಲಾ ಸಮುದಾಯಗಳ ಸ್ವಾಮೀಜಿಗಳು ವಿರೋಧ ವ್ಯಕ್ತಪಡಿಸಿದ್ದಾರೆ. ಸ್ವತಃ ಕಾಂಗ್ರೆಸ್ ಪಕ್ಷದವರೇ ಟೇಬಲ್ ಕುಟ್ಟಿ ಅಸಮಾಧಾನ ಹೊರ ಹಾಕಿದ್ದಾರೆ. ಇಂತಹ ಷಡ್ಯಂತ್ರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದಾಳತ್ವ ವಹಿಸಿದ್ದರೆ, ಅವರ ಬೆನ್ನ ಹಿಂದೆ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಇದ್ದು ಬೆಂಬಲ ವ್ಯಕ್ತಪಡಿಸಿದ್ದಾರೆ’ ಎಂದು ಆರೋಪಿಸಿದರು.

‘ಹಿಂದೂ ಧರ್ಮದಿಂದ ಮತಾಂತರ ಆಗಿದ್ದರೆ ಸಮೀಕ್ಷೆಯಲ್ಲಿ ಕ್ರೈಸ್ತರೆಂದೇ ನಮೂದಿಸಿಕೊಳ್ಳಲಿ. ಅದನ್ನು ಬಿಟ್ಟು ಒಕ್ಕಲಿಗ ಕ್ರಿಶ್ಚಿಯನ್, ಕುರುಬ ಕ್ರಿಶ್ಚಿಯನ್, ಬಲಿಜ ಕ್ರಿಶ್ಚಿಯನ್ ಎನ್ನುವುದು ಸೇರಿದಂತೆ ಇನ್ನಿತರೆ ಜಾತಿಗಳ ಹೆಸರನ್ನು ಏಕೆ ಬಳಕೆ ಮಾಡಬೇಕು? ಅಲ್ಪಸಂಖ್ಯಾತರು ಯಾರೂ ಮತಾಂತರ ಆಗಿಲ್ಲವೇ’ ಎಂದು ಪ್ರಶ್ನಿಸಿದರು.

‘ಸಮೀಕ್ಷೆಯ ವೇಳೆ ಧರ್ಮದ ಕಾಲಂನಲ್ಲಿ ಹಿಂದೂ ಎಂದೇ ನಮೂದಿಸಬೇಕೆಂದು ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಶಾಸಕ, ಸಂಸದರು ಸೇರಿದಂತೆ ಎಲ್ಲರಿಗೂ ಸೂಚಿಸಿದ್ದಾರೆ ಎಂದರು.

ಪಕ್ಷದ ಜಿಲ್ಲಾ ಉಪಾಧ್ಯಕ್ಷ ಮಾಗೇರಿ ನಾರಾಯಣಸ್ವಾಮಿ ಮಾತನಾಡಿ, ‘ಕೇಂದ್ರ ಸರ್ಕಾರ ಜಾತಿ ಜನಗಣತಿ ಮಾಡುತ್ತಿರುವ ವೇಳೆ ರಾಜ್ಯ ಸರ್ಕಾರ ಮಾಡಲು ಮುಂದಾಗಿರುವುದು ಸರಿಯಲ್ಲ. ಯಾವುದೇ ಅರಿವು ಮೂಡಿಸದೆ, ಸಾರ್ವಜನಿಕ ಅಭಿಪ್ರಾಯದ ವಿರುದ್ಧವಾಗಿ ಕೆಲಸ ಮಾಡಲಾಗುತ್ತಿದೆ. ನವರಾತ್ರಿ ಹಬ್ಬದ ವೇಳೆ ಅನೇಕ ಶಿಕ್ಷಕರು ಉಪವಾಸ ಇರುತ್ತಾರೆ. ಆ ವೇಳೆ ಶಿಕ್ಷಕರಿಂದ ಸಮೀಕ್ಷೆ ಕಾರ್ಯ ಮಾಡಿಸುವುದರಿಂದ ತೊಂದರೆಯಾಗಲಿದೆ’ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ವಿ ಮಹೇಶ್, ಉಪಾಧ್ಯಕ್ಷ ವಿಜಯಕುಮಾರ್, ಮಹಿಳಾ ಅಧ್ಯಕ್ಷೆ ಅರುಣಮ್ಮ, ತಾಲ್ಲೂಕು ಅಧ್ಯಕ್ಷ ರಾಮಚಂದ್ರ, ನಗರಾಧ್ಯಕ್ಷ ಸಾ.ಮಾ.ಬಾಬು, ವಿವಿಧ ಮೋರ್ಚಾ ಅಧ್ಯಕ್ಷರಾದ ಬಾಲಾಜಿ, ತಿಮ್ಮರಾಯಪ್ಪ, ನಾಮಾಲ್ ಮಂಜು, ಮಮತಮ್ಮ, ವೆಂಕಟೇಶ್ ಇದ್ದರು.

ಧರ್ಮದ ಕಲಂನಲ್ಲಿ ಹಿಂದೂ ಎಂದೇ ನಮೂದಿಸಿ: ಓಂಶಕ್ತಿ ಚಲಪತಿ ರಾಜ್ಯ ಸರ್ಕಾರದಿಂದ ತುಷ್ಟೀಕರಣ–ಆರೋಪ ಅಲ್ಪಸಂಖ್ಯಾತರು ಯಾರೂ ಮತಾಂತರ ಆಗಿಲ್ಲವೇ–ಪ್ರಶ್ನೆ

ಅಧಿಕಾರಕ್ಕೆ ಬಂದಾಗಿಂದ ಮುಸ್ಲಿಮರ ಓಲೈಕೆ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್‌ ಸರ್ಕಾರವು ಇದೀಗ ಕ್ರೈಸ್ತರ ಓಲೈಕೆಗೆ ಮುಂದಾಗಿದೆ
ಓಂಶಕ್ತಿ ಚಲಪತಿ ಬಿಜೆಪಿ ಜಿಲ್ಲಾಧ್ಯಕ್ಷ
ನೇಪಾಳದಂತೆ ದಂಗೆ:
ಎಚ್ಚರಿಕೆ ‘ಹಿಂದೆ ಪರಕೀಯರಿಂದ ದೌರ್ಜನ್ಯಕ್ಕೆ ಒಳಗಾಗಿದ್ದ ಹಿಂದೂ ಧರ್ಮಕ್ಕೆ ಈಗ ಹಿಂದೂಗಳಿಂದಲೇ ಹೊಡೆತ ಬೀಳುತ್ತಿದೆ. ಕೂಡಲೇ ಈ ಎಲ್ಲದಕ್ಕೂ ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತರ ಕೊಡದಿದ್ದರೆ ನೇಪಾಳ ಬಾಂಗ್ಲಾದೇಶದಂತೆ ದಂಗೆ ಏಳುವ ಕಾಲ ದೂರವಿಲ್ಲವೆಂದು ಓಂಶಕ್ತಿ ಚಲಪತಿ ಎಚ್ಚರಿಕೆ ನೀಡಿದರು ರಾಜಕಾರಣವನ್ನು ಚುನಾವಣೆಯಲ್ಲಿ ಮಾಡಬೇಕೇ ಹೊರತು ಜನರು ಹಾಗೂ ಧರ್ಮದ ಮೇಲೆ ಮಾಡುವುದಲ್ಲ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.