ADVERTISEMENT

ಜಾತಿ–ಪಕ್ಷ ಮೆಟ್ಟಿ ನಿಂತು ಸಾಲ: ಕೋಲಾರ ಡಿಸಿಸಿ ಬ್ಯಾಂಕ್ ಅಧ್ಯಕ್ಷ

​ಪ್ರಜಾವಾಣಿ ವಾರ್ತೆ
Published 9 ಜುಲೈ 2020, 12:17 IST
Last Updated 9 ಜುಲೈ 2020, 12:17 IST

ಕೋಲಾರ: ‘ನಬಾರ್ಡ್, ಅಫೆಕ್ಸ್ ಬ್ಯಾಂಕ್‌ನ ನಂಬಿಕೆಗೆ ಚ್ಯುತಿ ಬಾರದಂತೆ ಕೆಲಸ ಮಾಡುವ ಸಂಕಲ್ಪದೊಂದಿಗೆ ಅವಿಭಜಿತ ಕೋಲಾರ ಜಿಲ್ಲೆಯಲ್ಲಿ 4.50 ಲಕ್ಷ ಮಹಿಳೆಯರಿಗೆ ಶೂನ್ಯ ಬಡ್ಡಿ ಸಾಲ ವಿತರಿಸಿದ್ದೇವೆ’ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಗೋವಿಂದಗೌಡ ಹೇಳಿದರು.

ಇಲ್ಲಿ ಗುರುವಾರ ನಡೆದ ಪ್ಯಾಕ್ಸ್‌ಗಳಿಗೆ ಕಂಪ್ಯೂಟರ್‌ ವಿತರಣೆ ಮತ್ತು ಮೈಕ್ರೊ ಎಟಿಎಂ ಸೇವೆ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ‘ಜಾತಿ, ಪಕ್ಷ, ಭ್ರಷ್ಟತೆ ಮೆಟ್ಟಿ ನಿಂತು ಸಾಲ ನೀಡಿದ್ದೇವೆ. ಜನರ ಬಳಿಗೆ ಬ್ಯಾಂಕ್‌ ತೆಗೆದುಕೊಂಡು ಹೋಗಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇವೆ. ಪ್ಯಾಕ್ಸ್‌ಗಳು ರೈತರು ಮತ್ತು ಮಹಿಳೆಯರ ಪಾಲಿಗೆ ಆಪದ್ಭಾಂದವರಂತೆ ಕೆಲಸ ಮಾಡಬೇಕು’ ಎಂದರು.

‘ಭದ್ರತೆ ಇಲ್ಲದೆ ಸಾಲ ನೀಡಿ ಮಹಿಳೆಯರ ಬದುಕಿಗೆ ನೆರವಾಗುತ್ತಿರುವ ಬ್ಯಾಂಕ್‌ನ ವಿರುದ್ಧ ಬರುವ ಸುಳ್ಳು ದೂರಿಗೆ ಸ್ಪಂದಿಸುವ ಅಗತ್ಯವಿಲ್ಲ. ಯಾವುದೇ ವಾಣಿಜ್ಯ ಬ್ಯಾಂಕ್ ಮಾಡದ ಕೆಲಸವನ್ನು ಡಿಸಿಸಿ ಬ್ಯಾಂಕ್ ಮಾಡಿದೆ. ಮಹಿಳೆಯರಿಗೆ ಸ್ವಾವಲಂಬಿ ಬದುಕು ಕಟ್ಟಿಕೊಡಲು ಸಹಾಯ ಮಾಡಿದೆ’ ಎಂದು ಶಾಸಕಿ ಹಾಗೂ ಡಿಸಿಸಿ ಬ್ಯಾಂಕ್ ನಿರ್ದೇಶಕಿ ಎಂ.ರೂಪಕಲಾ ಮೆಚ್ಚುಗೆ ವ್ಯಕ್ತಪಡಿಸಿದರು.

ADVERTISEMENT

ಕೈ ಜೋಡಿಸಿ: ‘ಸಹಕಾರಿ ವ್ಯವಸ್ಥೆ ಸರಿಪಡಿಸಲು ಎಲ್ಲರೂ ಕೈ ಜೋಡಿಸಬೇಕು. ಸರ್ಕಾರಿ ಇಲಾಖೆಗಳ ಹಣವನ್ನು ಡಿಸಿಸಿ ಬ್ಯಾಂಕ್‌ನಲ್ಲಿ ಠೇಚಣಿ ಇಡುವಂತೆ ಸರ್ಕಾರದ ಮೇಲೆ ಒತ್ತಡ ತರಬೇಕು. ಪ್ರಾಥಮಿಕ ಹಾಲು ಸಹಕಾರ ಸಂಘಗಳ ಸದಸ್ಯರು ಸೊಸೈಟಿ ಹಾಗೂ ಡಿಸಿಸಿ ಬ್ಯಾಂಕ್‌ನಲ್ಲಿ ಖಾತೆ ತೆರೆಯಬೇಕು’ ಎಂದು ಅಫೆಕ್ಸ್ ಬ್ಯಾಂಕ್ ನಿರ್ದೇಶಕ ನೀಲಕಂಠೇಗೌಡ ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.