ADVERTISEMENT

ಕೋಲಾರ: ನಗರದ ಮೇಲೆ ಸಿ.ಸಿ ಕ್ಯಾಮೆರಾ ನಿಗಾ!

ವಿಸ್ಟ್ರಾನ್‌ ಕಂಪನಿ ಸಹಯೋಗದಲ್ಲಿ ಪೊಲೀಸ್‌ ಇಲಾಖೆಯಿಂದ ಅಳವಡಿಕೆ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2022, 4:16 IST
Last Updated 26 ನವೆಂಬರ್ 2022, 4:16 IST
ಕೋಲಾರ ನಗರದಲ್ಲಿ ಶುಕ್ರವಾರ ವಿಸ್ಟ್ರಾನ್‌ ಕಂಪನಿ ಸಹಯೋಗದಲ್ಲಿ ಪೊಲೀಸ್‌ ಇಲಾಖೆ ಅಳವಡಿಸಿರುವ ಸಿ.ಸಿ.ಟಿ.ವಿ ಕ್ಯಾಮೆರಾ ವ್ಯವಸ್ಥೆಗೆ ಚಾಲನೆ ನೀಡಲಾಯಿತು. ವಿಸ್ಟ್ರಾನ್‌ ವ್ಯವಸ್ಥಾಪಕ ನಿರ್ದೇಶಕ ನಾಗರಾಜ್‌, ಉಪಾಧ್ಯಕ್ಷ ಹ್ಯಾನ್ಸ್‌, ಜಿಲ್ಲಾಧಿಕಾರಿ ವೆಂಕಟ್‌ ರಾಜಾ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಿ.ದೇವರಾಜ್‌ ಇದ್ದಾರೆ
ಕೋಲಾರ ನಗರದಲ್ಲಿ ಶುಕ್ರವಾರ ವಿಸ್ಟ್ರಾನ್‌ ಕಂಪನಿ ಸಹಯೋಗದಲ್ಲಿ ಪೊಲೀಸ್‌ ಇಲಾಖೆ ಅಳವಡಿಸಿರುವ ಸಿ.ಸಿ.ಟಿ.ವಿ ಕ್ಯಾಮೆರಾ ವ್ಯವಸ್ಥೆಗೆ ಚಾಲನೆ ನೀಡಲಾಯಿತು. ವಿಸ್ಟ್ರಾನ್‌ ವ್ಯವಸ್ಥಾಪಕ ನಿರ್ದೇಶಕ ನಾಗರಾಜ್‌, ಉಪಾಧ್ಯಕ್ಷ ಹ್ಯಾನ್ಸ್‌, ಜಿಲ್ಲಾಧಿಕಾರಿ ವೆಂಕಟ್‌ ರಾಜಾ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಿ.ದೇವರಾಜ್‌ ಇದ್ದಾರೆ   

ಕೋಲಾರ: ನಗರದಲ್ಲಿ ನಡೆಯುವ ಚಟುವಟಿಕೆಗಳ ಮೇಲೆ ಇನ್ನುಂದೆ ಸಿ.ಸಿ.ಟಿ.ವಿ ಕ್ಯಾಮೆರಾಗಳ ಮೂಲಕವೂ ಪೊಲೀಸ್‌ ಇಲಾಖೆ ನಿಗಾ ಇಡಲಿದೆ.

ಸಂಚಾರ ಉಲ್ಲಂಘನೆ, ಪೋಕರಿಗಳ ಹಾವಳಿ, ಕಳ್ಳತನ, ದರೋಡೆ ಸೇರಿದಂತೆ ಅಪರಾಧ ಪ್ರಕರಣ ತಡೆಯುವ ಉದ್ದೇಶದಿಂದ ಪೊಲೀಸ್‌ ಇಲಾಖೆಯು ತೈವಾನ್‌ನ ವಿಸ್ಟ್ರಾನ್‌ ಕಂಪನಿಯ ಸಹಯೋಗದಲ್ಲಿ ನಗರದ ವಿವಿಧೆಡೆ ಅತ್ಯಾಧುನಿಕ ತಂತ್ರಜ್ಞಾನದ 13 ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಸಿದೆ.

ಒಂದು ಸಿ.ಸಿ.ಕ್ಯಾಮೆರಾಕ್ಕೆ ₹ 1 ಲಕ್ಷ ವೆಚ್ಚವಾಗಿದ್ದು, ಕಾರ್ಪೊರೇಟ್‌ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್) ನಿಧಿಯಡಿ ಕಂಪನಿಯು ಕೊಡುಗೆ ನೀಡಿದೆ.

ADVERTISEMENT

ಶುಕ್ರವಾರ ಬಾಲಕರ ಸರ್ಕಾರಿ ಪ್ರಥಮದರ್ಜೆ ಕಾಲೇಜು ವೃತ್ತದ ಬಳಿ ನಡೆದ ಕಾರ್ಯಕ್ರಮದಲ್ಲಿ ಈ ವ್ಯವಸ್ಥೆಗೆ ಚಾಲನೆ ನೀಡಲಾಯಿತು.

ಜಿಲ್ಲಾಧಿಕಾರಿ ವೆಂಕಟ್‌ ರಾಜಾ ಮಾತನಾಡಿ, ‘ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ವಿಶೇಷ ಕಾಳಜಿ ವಹಿಸಿ ಈ ವ್ಯವಸ್ಥೆ ಜಾರಿ ಮಾಡಿದ್ದಾರೆ. ನಗರದಲ್ಲಿ ಅಕ್ರಮ ಹತ್ತಿಕ್ಕಲು ಸಿ.ಸಿ ಕ್ಯಾಮೆರಾ ಅಳವಡಿಕೆ ಸಂಬಂಧ ವಿಸ್ಟ್ರಾನ್ ಕಂಪನಿಗೆ ಮನವಿ ಮಾಡಲಾಗಿತ್ತು. ನಮ್ಮ ಮನವಿಗೆ ಕಂಪನಿ ಸ್ಪಂದಿಸಿದೆ. ಇನ್ನು ಮುಂದೆ ಕೋಲಾರದಲ್ಲಿ ಅಕ್ರಮ ಚಟುವಟಿಕೆಗಳು ಸೇರಿದಂತೆ ಸಂಚಾರ ಉಲ್ಲಂಘನೆಗೆ ಕಡಿವಾಣಿ ಬೀಳಲಿದೆ. ಇನ್ನಷ್ಟು ಸಿ.ಸಿ ಕ್ಯಾಮೆರಾಗಳ ಅವಶ್ಯವಿದೆ. ಮುಂದಿನ ದಿನಗಳಲ್ಲಿ ಸರ್ಕಾರದ ಅನುದಾನದಲ್ಲಿ ಅಳವಡಿಸಲಾಗುವುದು’ ಎಂದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಿ.ದೇವರಾಜ್, ‘5 ತಿಂಗಳ ಹಿಂದೆ ಕೋಲಾರಕ್ಕೆ ಬಂದಾಗ ನಗರದ ಬೈರೇಗೌಡ ಬಡಾವಣೆಯಲ್ಲಿ ಸಿಬಿಐ ಮತ್ತು ಆದಾಯ ತೆರಿಗೆ ಅಧಿಕಾರಿಗಳ ಹೆಸರಿನಲ್ಲಿ ಮನೆ ದರೋಡೆ ನಡೆದಿತ್ತು. ಅದನ್ನು ಪತ್ತೆ ಮಾಡಲು 4 ತಿಂಗಳ ಕಾಯಬೇಕಾಯಿತು. ನಗರದಲ್ಲಿ ಸಿ.ಸಿ ಟಿ.ವಿ. ಕ್ಯಾಮೆರಾ ಇಲ್ಲದೆ ತೊಂದರೆಯಾಯಿತು. ಹೀಗಾಗಿ, ನಗರದಲ್ಲಿ ಸಿ.ಸಿ ಕ್ಯಾಮೆರಾ ಅಳವಡಿಸಿ ಸಂಚಾರ ಉಲ್ಲಂಘಟನೆ ಸೇರಿದಂತೆ ಹಲವಾರು ರೀತಿಯ ಅಕ್ರಮಗಳಿಗೆ ಕಡಿವಾಣ ಹಾಕಲು ವಿಸ್ಟ್ರಾನ್ ಕಂಪನಿಯ ಉಪಾಧ್ಯಕ್ಷ ಹಾನ್ಸ್ ಅವರಲ್ಲಿ ಮನವಿ ಮಾಡಿದ್ದೆವು’ ಎಂದು ಹೇಳಿದರು.

‘360 ಕೋನಾದಲ್ಲಿ ಕಾರ್ಯನಿರ್ವಹಿಸುವ ಈಕ್ಯಾಮೆರಾಗಳನ್ನು ಸದ್ಯಕ್ಕೆ ಬಂಗಾರಪೇಟೆ ವೃತ್ತ, ಮೆಕ್ಕೆ ವೃತ್ತ‌, ಇಟಿಸಿಎಂ ವೃತ್ತ, ಅಮ್ಮವಾರಿಪೇಟೆ ಪೇಟೆ ವೃತ್ತ, ಕಾಲೇಜು ವೃತ್ತ ಮತ್ತು ಮೆಕ್ಕೆ ಸರ್ಕಲ್ ಸೇರಿದಂತೆ ವಿವಿಧ ಭಾಗಗಳಲ್ಲಿ ಅಳವಡಿಸಲಾಗಿದೆ, ಸಂಚಾರಿ ನಿಯಮ ಉಲ್ಲಂಘಿಸಿದರೆ ವಾಹನಗಳ ನಾಮಫಲಕ ನಂಬರ್‌ ಸಮೇತ ಸೆರೆಯಾಗುತ್ತದೆ. ರಸ್ತೆಗಳಲ್ಲಿ ಗಲಾಟೆ, ಕುಡಿದು ಗುಂಪು ಕಟ್ಟುವುದು, ಜನ್ಮದಿನ ಆಚರಣೆ ಮಾಡಿಕೊಳ್ಳುವುದು, ಕಳ್ಳತನ, ದರೋಡೆ ಪ್ರಕರಣಕ್ಕೆ ಕಡಿವಾಣ ಹಾಕಲು ಈ ವ್ಯವಸ್ಥೆ ಅಗತ್ಯವಾಗಿವೆ’ ಎಂದು ವಿವರಿಸಿದರು.

‘ಕೋಲಾರ ನಗರದಲ್ಲಿ ಶೇ 98ರಷ್ಟು ಸಜ್ಜನರಿದ್ದಾರೆ. ಶೇ 2ರಷ್ಟು ದುಷ್ಟರಿದ್ದಾರೆ. ಈ ದುಷ್ಟರಿಂದಲೇ ನಗರ ಹಾಳಾಗುತ್ತಿದೆ. ಈಗಾಗಲೇ ಪೊಲೀಸ್ ಇಲಾಖೆಯಿಂದಲೂ ಸಿ.ಸಿ. ಕ್ಯಾಮೆರಾ ಅಳವಡಿಸಲಾಗಿದೆ. ಇನ್ನೂ ಅತ್ಯಾಧುನಿಕ ತಂತ್ರಜ್ಞಾನವುಳ್ಳ ಕ್ಯಾಮರಾಗಳ ಅವಶ್ಯವಿದೆ. ದಾನಿಗಳ ಸಹಾಯ ಕೋರಲಾಗುತ್ತಿದೆ’ ಎಂದರು.

ವಿಸ್ಟ್ರಾನ್‌ ಉಪಾಧ್ಯಕ್ಷ ಹಾನ್ಸ್ ಮಾತನಾಡಿ, ‘ವಿಸ್ಟ್ರಾನ್ ಕಂಪನಿಯು ಜಿಲ್ಲೆಯ ಅಭಿವೃದ್ಧಿಗೆ ನಾನಾ ರೀತಿಯ ಕೊಡುಗೆ ನೀಡುತ್ತಿದೆ. ಜನರ ಸುರಕ್ಷತೆ ಆದ್ಯತೆ ಕೊಡಬೇಕು. ಸಿಎಸ್‌ಆರ್ ನಿಧಿಯಿಂದ ಶಾಲೆಗಳ ಅಭಿವೃದ್ಧಿ, ಕೊರೊನಾ ಸಂದರ್ಭದಲ್ಲಿ ಆಮ್ಲಜನಕ ಯಂತ್ರ, ವೆಂಟಲೇಟರ್‌ ನೀಡಲಾಗಿತ್ತು. ಡಿ.ದೇವರಾಜ್‌ ಅವರ ಮನವಿ ಮೇರೆಗೆ ಸಿ.ಸಿ ಕ್ಯಾಮೆರಾ ಕೊಡುಗೆ ನೀಡಿದ್ದೇವೆ’ ಎಂದು ತಿಳಿಸಿದರು.

ವಿಸ್ಟ್ರಾನ್‌ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ನಾಗರಾಜ್, ‘ಕಂಪನಿಯಲ್ಲಿ ಚರ್ಚೆ ಮಾಡಿ ಜಿಎಸ್‌ಟಿ ಸೇರಿದಂತೆ ₹ 22 ಲಕ್ಷ ಖರ್ಚು ಮಾಡಿ ಸಿ.ಸಿ.ಟಿ.ವಿ ಕ್ಯಾಮೆರಾ ಕೊಡುಗೆ ನೀಡಿದ್ದೇವೆ’ ಎಂದರು.

ಬಾಲಕರ ಕಾಲೇಜಿನ ಪ್ರಾಂಶುಪಾಲ ನಾರಾಯಣಪ್ಪ, ಡಿವೈಎಸ್‌ಪಿ ಮುರಳೀಧರ್ ಇದ್ದರು.

ದರೋಡೆ ಆರೋಪಿ ಪತ್ತೆ: ‘ಬೈರೇಗೌಡ ನಗರದಲ್ಲಿ ನಡೆದ ಮನೆ ದರೋಡೆ ಆರೋಪಿಗಳ ಪತ್ತೆ ಹಚ್ಚುವಲ್ಲಿ ನಮ್ಮ ಪೊಲೀಸರು ಯಶಸ್ವಿಯಾಗಿದ್ದಾರೆ. ನಗರದ ಎಂಪಿಎಂಸಿ ಮಾರುಕಟ್ಟೆಯ ಡಿಕೆ ಮಂಡಿಯ ಮಾಲೀಕನ ಮಗ ಇದರಲ್ಲಿ ಶಾಮೀಲಾಗಿದ್ದಾನೆ. ಉತ್ತರ ಪ್ರದೇಶದವರ ಸಂಪರ್ಕದಲ್ಲಿ ಈ ಡಕಾಯಿತಿ ಮಾಡಿಸಿದ್ದಾನೆ. ಇದಕ್ಕೂ ಮುನ್ನ ಕೀರ್ತಿ ಫೈನಾನ್ಸ್ ದರೋಡೆ ಪ್ರಕರಣದಲ್ಲಿ ಆತ ಶಾಮೀಲಾಗಿರುವುದು ಪತ್ತೆಯಾಗಿದೆ’ ಎಂದು ದೇವರಾಜ್‌ ಹೇಳಿದರು.

ಕೋಲಾರ ಮತ್ತಷ್ಟು ಅಭಿವೃದ್ಧಿ: ಎಸ್ಪಿ

‘ವಿಸ್ಟ್ರಾನ್‌ ಕಂಪನಿಯ ಸಹಯೋಗದಲ್ಲಿ ಕೋಲಾರವನ್ನು ಮತ್ತಷ್ಟು ಅಭಿವೃದ್ಧಿಪಡಿಸಲಾಗುವುದು. ಕ್ಯಾಲನೂರು ಸರ್ಕಾರಿ ಶಾಲೆಯನ್ನು ಸಿಎಸ್‌ಆರ್‌ ನಿಧಿಯಡಿ ಅಭಿವೃದ್ಧಿಪಡಿಸಲಿದ್ದಾರೆ. ರಾಜ್ಯದಲ್ಲಿ ಅತ್ಯುತ್ತಮ ಮಾದರಿ ಶಾಲೆಯನ್ನಾಗಿ ಮಾಡಬೇಕೆಂದು ಕೋರಿದ್ದೇನೆ. ಅದಕ್ಕೆ ಒಪ್ಪಿದ್ದು, ಸದ್ಯದಲ್ಲೇ ಕಂಪನಿಯ ನಾಗರಾಜ್‌ ಜೊತೆ ಕ್ಯಾಲನೂರಿಗೆ ಭೇಟಿ ನೀಡಿ ಪರಿಶೀಲಿಸುತ್ತೇವೆ’ ಎಂದು ಡಿ.ದೇವರಾಜ್‌ ಹೇಳಿದರು.

‘ತಾಂತ್ರಿಕವಾಗಿ ನಗರವನ್ನು ಮೇಲ್ದರ್ಜೆಗೇರಿಸಲಾಗಿದೆ. ಈಗಾಗಲೇ ಎಂ.ಜಿ.ರಸ್ತೆಗೆ ಅಳವಡಿಸಲು ಕಿಯೋನಿಕ್ಸ್‌ಗೆ ಜವಾಬ್ದಾರಿ ಕೊಡಲಾಗಿದೆ. ಕ್ಲಾಕ್‌ ಟವರ್‌ ಹಾಗೂ ಬಸ್‌ ನಿಲ್ದಾಣ ಬಳಿಯೂ ಅತ್ಯಾಧುನಿಕ ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಸಲಾಗುವುದು. ಸದ್ಯ ನಗರದಲ್ಲಿ 50 ಸಿ.ಸಿ.ಟಿ.ವಿ ಕ್ಯಾಮೆರಾಗಳು ಇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.