ADVERTISEMENT

ಊರು ಕೇರಿಯಲ್ಲಿ ಬಾಡೂಟದ ಘಮಲು

ಕೋವಿಡ್‌ ಭೀತಿ ನಡುವೆಯೂ ಕಳೆಗಟ್ಟಿದ ವರ್ಷ ತೊಡಕಿನ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2021, 10:16 IST
Last Updated 14 ಏಪ್ರಿಲ್ 2021, 10:16 IST
ವರ್ಷ ತೊಡಕಿನ ಹಿನ್ನೆಲೆಯಲ್ಲಿ ಕೋಲಾರದ ಎಂ.ಬಿ ರಸ್ತೆಯಲ್ಲಿ ಬುಧವಾರ ನಾಟಿ ಕೋಳಿ ವ್ಯಾಪಾರ ಭರ್ಜರಿಯಾಗಿ ನಡೆಯಿತು.
ವರ್ಷ ತೊಡಕಿನ ಹಿನ್ನೆಲೆಯಲ್ಲಿ ಕೋಲಾರದ ಎಂ.ಬಿ ರಸ್ತೆಯಲ್ಲಿ ಬುಧವಾರ ನಾಟಿ ಕೋಳಿ ವ್ಯಾಪಾರ ಭರ್ಜರಿಯಾಗಿ ನಡೆಯಿತು.   

ಕೋಲಾರ: ಜಿಲ್ಲೆಯಾದ್ಯಂತ ಬುಧವಾರ ವರ್ಷ ತೊಡಕಿನ ಆಚರಣೆ ಭರ್ಜರಿಯಾಗಿತ್ತು. ಗ್ರಾಮೀಣ ಭಾಗದಲ್ಲಿ ಮುಂಜಾನೆಯೇ ಕುರಿ ಹಾಗೂ ಮೇಕೆಗಳನ್ನು ಕೊಯ್ದು ಮಾಂಸ ಮಾರಾಟ ಮಾಡಲಾಯಿತು.

ನಗರ ಸೇರಿದಂತೆ ಜಿಲ್ಲೆಯಾದ್ಯಂತ ಮಂಗಳವಾರ ಯುಗಾದಿ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು. ದೇವಾಲಯಗಳಿಗೆ ತೆರಳಿದ ಜನ ಶ್ರದ್ಧಾಭಕ್ತಿಯಿಂದ ಪೂಜೆ ಸಲ್ಲಿಸಿದರು. ನಂತರ ದೇವರಿಗೆ, ಹಿರಿಯರಿಗೆ ನಮಸ್ಕರಿಸಿ ಬೇವು–ಬೆಲ್ಲ ತಿಂದು ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು. ಮಧ್ಯಾಹ್ನ ಹೊಳಿಗೆ, ಪಾಯಸ ಸವಿದು ಸಂಭ್ರಮಿಸಿದರು.

ಯುಗಾದಿ ಹಬ್ಬದ ಮಾರನೆ ದಿನ ವರ್ಷ ತೊಡಕು ಆಚರಿಸುವುದು ಹಿಂದಿನಿಂದ ನಡೆದುಕೊಂಡು ಬಂದ ಪದ್ಧತಿ. ಕೋಳಿ, ಕುರಿ ಮಾಂಸ ಹಾಗೂ ಮೀನಿನ ಅಂಗಡಿ ಮಾಲೀಕರು ನಸುಕಿನಲ್ಲೇ ಮಳಿಗೆಗಳ ಬಾಗಿಲು ತೆರೆದು ವಹಿವಾಟು ಆರಂಭಿಸಿದರು. ಕೋವಿಡ್‌ 2ನೇ ಅಲೆ ಭೀತಿ ನಡುವೆಯೂ ಗ್ರಾಹಕರು ಮಾಂಸ ಖರೀದಿಗೆ ಮುಗಿಬಿದ್ದರು. ಮಾಂಸದ ಜತೆಗೆ ಮದ್ಯದ ವಹಿವಾಟು ಹೆಚ್ಚಿತ್ತು.

ADVERTISEMENT

ನಗರದ ಅಮ್ಮವಾರಿಪೇಟೆ, ಕ್ಲಾಕ್‌ಟವರ್‌, ಎಂ.ಬಿ ರಸ್ತೆ ಸುತ್ತಮುತ್ತಲಿನ ಕೋಳಿ, ಮೀನು ಹಾಗೂ ಕುರಿ ಮಾಂಸದ ಅಂಗಡಿಗಳು ಗ್ರಾಹಕರಿಂದ ಗಿಜಿಗುಡುತ್ತಿದ್ದವು. ಅಂಗಡಿಗಳ ಮುಂದೆ ಗ್ರಾಹಕರು ಮಾಂಸ ಖರೀದಿಗೆ ಸಾಲುಗಟ್ಟಿ ನಿಂತಿದ್ದರು. ಎಂ.ಬಿ ರಸ್ತೆಯ ಅಕ್ಕಪಕ್ಕ ನಾಟಿ ಕೋಳಿ ವಹಿವಾಟು ಭರ್ಜರಿಯಾಗಿತ್ತು. ಮೀನಿನ ವ್ಯಾಪಾರವೂ ಜೋರಾಗಿತ್ತು. ಅಮ್ಮವಾರಿಪೇಟೆ ಮಾರುಕಟ್ಟೆಯಲ್ಲಿ ಜನ ಜಾತ್ರೆಯೇ ಕಂಡುಬಂತು.

ಆಂಧ್ರಪ್ರದೇಶ, ತಮಿಳುನಾಡು ಹಾಗೂ ಮಂಗಳೂರಿನಿಂದ ತರಿಸಲಾಗಿದ್ದ ಮೀನುಗಳನ್ನು ಖರೀದಿಸಲು ಗ್ರಾಹಕರು ಮುಗಿಬಿದ್ದರು. ಗ್ರಾಮೀಣ ಪ್ರದೇಶದಿಂದ ರೈತರು ತಂದಿದ್ದ ನಾಟಿ ಕೋಳಿಗಳು ಕ್ಷಣ ಮಾತ್ರದಲ್ಲಿ ಮಾರಾಟವಾದವು. ಕುರಿ ಹಾಗೂ ಕೋಳಿ ಮಾಂಸದ ಅಂಗಡಿ ಮಾಲೀಕರು ಗ್ರಾಹಕರಿಂದ ಮುಂಗಡ ಹಣ ಪಡೆದು ಟೋಕನ್‌ ನೀಡಿ ನಂತರ ಮಾಂಸ ವಿತರಿಸಿದರು.

ಬೆಲೆ ಏರಿಕೆ: ಹಕ್ಕಿ ಜ್ವರದ ಕಾರಣಕ್ಕೆ ಜಿಲ್ಲೆಯ ಸಾಕಷ್ಟು ಕಡೆ ಬಾಯ್ಲರ್‌ ಮತ್ತು ಫಾರಂ ಕೋಳಿಗಳನ್ನು ಕೆಲ ತಿಂಗಳುಗಳ ಹಿಂದೆ ಜೀವಂತ ಸಮಾಧಿ ಮಾಡಲಾಗಿತ್ತು. ಬಹುಪಾಲು ಪೌಲ್ಟ್ರಿಗಳನ್ನು ಮುಚ್ಚಲಾಗಿತ್ತು. ಹೀಗಾಗಿ ಕೋಳಿ ಮಾಂಸದ ಉತ್ಪಾದನೆ ಕಡಿಮೆಯಾಗಿ ಬೆಲೆ ಕುಸಿದಿತ್ತು.

ಆದರೆ, ವರ್ಷ ತೊಡಕಿನ ಹಿನ್ನೆಲೆಯಲ್ಲಿ ಬುಧವಾರ ಕೋಳಿ ಬೆಲೆ ಏಕಾಏಕಿ ಏರಿಕೆಯಾಯಿತು. ಚಿಕ್ಕ ಬಾಯ್ಲರ್‌ ಕೋಳಿ ಕೆ.ಜಿಗೆ ₹ 240 ಹಾಗೂ ದೊಡ್ಡ ಬಾಯ್ಲರ್‌ ₹ 250 ಇತ್ತು. ಮೀನು ಕೆ.ಜಿಗೆ ₹ 300 ಇತ್ತು. ನಾಟಿ ಕೋಳಿ ಕೆ.ಜಿಗೆ ₹ 500ರಂತೆ ಮಾರಾಟವಾಯಿತು.

ಮತ್ತೊಂದೆಡೆ ಕುರಿ ಮಾಂಸದ ಬೆಲೆ ಗಗನಕ್ಕೇರಿತು. ಮಾರುಕಟ್ಟೆಗೆ ಬಂದಿದ್ದ ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ ತಟ್ಟಿತು. ಕುರಿ ಮತ್ತು ಮೇಕೆ ಮಾಂಸದ ಬೆಲೆ ಕೆ.ಜಿಗೆ ₹ 700 ಇತ್ತು. ಬಾಡೂಟ ತಯಾರಿಕೆಗೆ ಅತ್ಯಗತ್ಯವಾದ ಕೊತ್ತಂಬರಿ ಸೊಪ್ಪು ಕಟ್ಟಿಗೆ ₹ 40 ಮತ್ತು ಪುದಿನ ಕಟ್ಟಿಗೆ ₹ 20 ಇತ್ತು. ಸೌತೆ ಕಾಯಿ, ಈರುಳ್ಳಿ, ನಿಂಬೆ ಹಣ್ಣು ವ್ಯಾಪಾರ ಭರ್ಜರಿಯಾಗಿ ನಡೆಯಿತು. ಗ್ರಾಮೀಣ ಭಾಗದಲ್ಲಿ ಮುಂಜಾನೆಯೇ ಕುರಿ ಹಾಗೂ ಮೇಕೆಗಳನ್ನು ಕೊಯ್ದು ಮಾಂಸ ಮಾರಾಟ ಮಾಡಲಾಯಿತು.

ಬಾಡೂಟದ ಘಮಲು: ಊರು ಕೇರಿಗಳಲ್ಲಿ ಬಾಡೂಟದ ಘಮಲು ಜೋರಾಗಿತ್ತು. ಯುಗಾದಿ ದಿನ ಹೋಳಿಗೆ ಸವಿದಿದ್ದ ಮಂದಿ ಮಾಂಸದೂಟದ ರುಚಿ ಸವಿದರು. ಹಬ್ಬಕ್ಕಾಗಿ ಸಿದ್ಧಪಡಿಸಲಾಗಿದ್ದ ಮಾಂಸದ ಸಾರು, ಮುದ್ದೆ, ಬಿರಿಯಾನಿ, ಕಬಾಬ್‌, ಬೋಟಿ ಫ್ರೈ ಸೇರಿದಂತೆ ವಿವಿಧ ಭಕ್ಷ್ಯಗಳು ಮಾಂಸ ಪ್ರಿಯರ ಬಾಯಲ್ಲಿ ನೀರೂರಿಸಿದವು. ಮನೆ ಮಂದಿಯೆಲ್ಲಾ ಒಟ್ಟಿಗೆ ಕುಳಿತು ಬಾಡೂಟ ಸವಿದು ಸಂಭ್ರಮಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.