ADVERTISEMENT

ಕೋಲಾರ | ಮಹಿಳಾ ಸಾಹಿತ್ಯ ಸಮ್ಮೇಳನ ಲೀಲಾ ಸಂಪಿಗೆ ಅಧ್ಯಕ್ಷೆ

20ರಂದು ಸಮ್ಮೇಳನಕ್ಕೆ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 10 ಮೇ 2022, 4:43 IST
Last Updated 10 ಮೇ 2022, 4:43 IST
ಲೀಲಾ ಸಂಪಿಗೆ
ಲೀಲಾ ಸಂಪಿಗೆ   

ತುಮಕೂರು: ಜಿಲ್ಲಾ ಮಹಿಳಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಲೇಖಕಿ ಲೀಲಾ ಸಂಪಿಗೆ ಆಯ್ಕೆ ಆಗಿದ್ದಾರೆ. ಮೇ 20ರಂದು ಸಾಹಿತ್ಯ ಸಮ್ಮೇಳನ ನಡೆಯಲಿದೆ.

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಲೀಲಾ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.

ಹಿನ್ನೆಲೆ: ಲೀಲಾ ಅವರು ತುರುವೇಕೆರೆ ತಾಲ್ಲೂಕು ಸಂಪಿಗೆ ಗ್ರಾಮದವರಾಗಿದ್ದು, ಅಲ್ಲಿಯೇ ಪ್ರೌಢ ಶಿಕ್ಷಣ ಮುಗಿಸಿ, ತುಮಕೂರಿನಲ್ಲಿ ಪದವಿಪೂರ್ವ, ಬೆಂಗಳೂರಿನ ಮಹಾರಾಣಿ ಕಾಲೇಜಿನಲ್ಲಿ ಪದವಿ, ಮೈಸೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ಸಾಹಿತ್ಯ ಹಾಗೂ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಹಂಪಿ ಕನ್ನಡ ವಿ.ವಿಯಲ್ಲಿ ವೇಶ್ಯಾವಾಟಿಕೆ ಮೇಲೆ ಪ್ರಬಂಧ ರಚಿಸಿ ಪಿಎಚ್.ಡಿ ಪದವಿ ಗಳಿಸಿದ್ದಾರೆ.

ADVERTISEMENT

ರಾಜ್ಯ ಏಡ್ಸ್ ಪ್ರಿವೆನ್‌ಷನ್ ಸೊಸೈಟಿ ಜಂಟಿ ನಿರ್ದೇಶಕಿಯಾಗಿ ಕಾರ್ಯ ನಿರ್ವಹಿಸಿ, ಸಾಕ್ಷರತಾ ಆಂದೋಲನದಲ್ಲಿ ತೊಡಗಿಸಿಕೊಂಡಿ ದ್ದರು. ವೇಶ್ಯೆಯರ ಬದುಕಿನ ಬಗ್ಗೆ ಸಾಕಷ್ಟು ಅಧ್ಯಯನ ನಡೆಸಿದ್ದು, ‘ವೇಶ್ಯಾವಾಟಿಕೆ ಒಂದು ಅಧ್ಯಯನ’, ‘ವೇಶ್ಯೆಯರು ಒಂದು ಆಧುನಿಕ ಬುಡಕಟ್ಟೇ’, ‘ಆನುದೇವಾ ಅನುಮಾನಗಳ ಕಂತೆ’, ‘ಒಲಂಪಿಕ್ಸ್ ಎಂಬ ಕೆಂಪು ದೀಪ’, ‘ದೇವದಾಸಿ ಮಕ್ಕಳ ಸ್ಥಿತಿಗತಿ’, ‘ಬುಡಕಟ್ಟು ಮಕ್ಕಳ ಶೈಕ್ಷಣಿಕ ಸ್ಥಿತಿಗತಿ’, ‘ಮಹಿಳೆ ಮತ್ತು ಮಾಧ್ಯಮ’ ಕೃತಿಗಳೂ ಸೇರಿದಂತೆ ಸಾಕಷ್ಟು ಸಂಶೋಧನಾ ಲೇಖನಗಳನ್ನು ರಚಿಸಿದ್ದಾರೆ.

ವೇಶ್ಯೆಯರ ಬಗ್ಗೆ ಸಾಕಷ್ಟು ಅಧ್ಯಯನ ನಡೆಸಿದ್ದು, ‘ವೇಶ್ಯಾ’ ಪದದ ಅರ್ಥ ವ್ಯಾಪ್ತಿ ವಿಸ್ತರಿಸಿದ್ದಾರೆ. ಭಾರತೀಯ ಸಮಾಜದಲ್ಲಿ ಮಹಿಳೆಯರ ಪಾತ್ರ, ಆಚರಣಾತ್ಮಕ ಲೈಂಗಿಕ ಸಂಪ್ರದಾಯಗಳು, ವೇಶ್ಯಾವಾಟಿಕೆಯ ಆಧುನಿಕ ವೈವಿಧ್ಯ, ಸಾಮಾಜಿಕ ಆಕರ ಕೃತಿಗಳನ್ನು ಅಭ್ಯಾಸ ಮಾಡಿ ತಮ್ಮ ಕೃತಿಯಲ್ಲಿ ವಿಶ್ಲೇಷಣೆ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.