ADVERTISEMENT

ಕೆಜಿಎಫ್‌: ಚಂದ್ರಬಾಬು ನಾಯ್ಡು ರೋಡ್‌ ಶೋಗೆ ಅಡ್ಡಿ

ವೈಎಸ್‌ಆರ್‌ ಕಾಂಗ್ರೆಸ್‌ ವಿರುದ್ಧ ಕಿಡಿ

​ಪ್ರಜಾವಾಣಿ ವಾರ್ತೆ
Published 5 ಜನವರಿ 2023, 6:45 IST
Last Updated 5 ಜನವರಿ 2023, 6:45 IST
ಆಂಧ್ರಪ್ರದೇಶದ ಕುಪ್ಪಂ ಕ್ಷೇತ್ರಕ್ಕೆ ತೆರಳುವ ವೇಳೆ ಕೆಜಿಎಫ್ ತಾಲ್ಲೂಕು ಎಂ.ಕೊತ್ತೂರು ಗ್ರಾಮಕ್ಕೆ ಬುಧವಾರ ಆಗಮಿಸಿದ ಚಂದ್ರಬಾಬು ನಾಯ್ಡು ಅವರು ಅಭಿಮಾನಿಗಳಿಗೆ ನಮಸ್ಕರಿಸಿದರು
ಆಂಧ್ರಪ್ರದೇಶದ ಕುಪ್ಪಂ ಕ್ಷೇತ್ರಕ್ಕೆ ತೆರಳುವ ವೇಳೆ ಕೆಜಿಎಫ್ ತಾಲ್ಲೂಕು ಎಂ.ಕೊತ್ತೂರು ಗ್ರಾಮಕ್ಕೆ ಬುಧವಾರ ಆಗಮಿಸಿದ ಚಂದ್ರಬಾಬು ನಾಯ್ಡು ಅವರು ಅಭಿಮಾನಿಗಳಿಗೆ ನಮಸ್ಕರಿಸಿದರು   

ಕೆಜಿಎಫ್‌: ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ತೆಲುಗು ದೇಶಂ ಮುಖ್ಯಸ್ಥ ಚಂದ್ರಬಾಬು ನಾಯ್ಡು ತಾವು ಪ್ರತಿನಿಧಿಸುವ ಕುಪ್ಪಂ ಕ್ಷೇತ್ರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ರೋಡ್‌ ಶೋಗೆ ವೈಎಸ್‌ಆರ್ ಕಾಂಗ್ರೆಸ್‌ ಪಕ್ಷದ ಮುಖಂಡರು, ಕಾರ್ಯಕರ್ತರು ಅಡ್ಡಿಪಡಿಸಿದರು.

ಚಂದ್ರಬಾಬು ನಾಯ್ಡು ಏಳು ಬಾರಿ ಗೆಲುವು ಸಾಧಿಸಿರುವ ಕುಪ್ಪಂ ಕ್ಷೇತ್ರಕ್ಕೆ ತೆರಳಲು ಕೆಜಿಎಫ್‌ ತಾಲ್ಲೂಕಿನ ಎಂ. ಕೊತ್ತೂರು ಗ್ರಾಮದ ಮೂಲಕ ತೆರಳಬೇಕು. ಆಂಧ್ರದ ಗಡಿ ದಾಟಿ ಕರ್ನಾಟಕದ ಗಡಿಯೊಳಗೆ ಬಂದಿದ್ದ ತೆಲುಗು ದೇಶಂ ಪಕ್ಷದ ನೂರಾರು ಮುಖಂಡರು ಮತ್ತು ಕಾರ್ಯಕರ್ತರು ನಾಯ್ಡು ಅವರನ್ನು ಸ್ವಾಗತಿಸಿದರು.

ಬಳಿಕ ಅವರ ಯಾತ್ರೆ ಕುಪ್ಪಂ ಕ್ಷೇತ್ರದ ಕೆನಮಾಕನಹಳ್ಳಿ ಪ್ರವೇಶಿಸಿತು. ಈ ಗ್ರಾಮದಲ್ಲಿ ಸಭೆ ಉದ್ದೇಶಿಸಿ ಮಾತನಾಡಲು ಹಾಕಿದ್ದ ಪೆಂಡಾಲ್‌ ಅನ್ನು ಪೊಲೀಸರು ಕಿತ್ತು ಹಾಕಿದ್ದು ತೆಲುಗು ದೇಶಂ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರಲ್ಲಿ ಆಕ್ರೋಶಕ್ಕೆ ಕಾರಣವಾಯಿತು.

ADVERTISEMENT

‘ಮುಖ್ಯಮಂತ್ರಿ ಜಗಮೋಹನ್‌ ರೆಡ್ಡಿ ಅವರಿಗೆ ಸೋಲಿನ ಭೀತಿ ಶುರುವಾಗಿದೆ. ಆದ್ದರಿಂದಲೇ ತೆಲುಗು ದೇಶಂ ಪಕ್ಷದ ಕಾರ್ಯಕರ್ತರ ಮೇಲೆ ದೌರ್ಜನ್ಯ ನಡೆಸಲು ಶುರು ಮಾಡಿದ್ದಾರೆ’ ಎಂದು ದೂರಿದರು.

’ಜಗಮೋಹನ್‌ ರೆಡ್ಡಿ ಬೆಂಬಲಿಗರು ಗೂಂಡಾಗಿರಿ ವರ್ತನೆ ತೋರುತ್ತಿದ್ದು, ಕ್ಷೇತ್ರದಲ್ಲಿ ಅರಾಜಕತೆ ಸೃಷ್ಟಿಸುತ್ತಿದ್ದಾರೆ. ಚಂದ್ರಬಾಬು ನಾಯ್ಡು ಅವರಿಗೆ ರೋಡ್‌ ಶೋಗೆ ಅವಕಾಶ ನೀಡುತ್ತಿಲ್ಲ’ ಎಂದು ತೆಲುಗು ದೇಶಂ ಪಕ್ಷದ ಮುಖಂಡ ಮತ್ತು ಚಿತ್ತೂರು ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಟಿ. ಮುನಿಸ್ವಾಮಿ ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.