ADVERTISEMENT

ಮರಾಠ ಪರಿಷತ್ ವಿರುದ್ಧ ಆರೋಪ ಸಲ್ಲದು

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2021, 16:02 IST
Last Updated 16 ಸೆಪ್ಟೆಂಬರ್ 2021, 16:02 IST

ಕೋಲಾರ: ‘ಸಮಿತಿಯು ಉತ್ತಮವಾಗಿ ಸಂಘಟನೆ ಮತ್ತು ಸೇವಾ ಕಾರ್ಯಕ್ರಮ ನಡೆಸುತ್ತಿದ್ದು, ಅನಾಮಧೇಯ ವ್ಯಕ್ತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವ ಸುಳ್ಳು ಸಂದೇಶಗಳಿಗೆ ಸಮುದಾಯದ ಜನರು ಕಿವಿಗೊಡಬಾರದು’ ಎಂದು ಕ್ಷತ್ರಿಯ ಮರಾಠ ಪರಿಷತ್ ಜಿಲ್ಲಾ ಅಧ್ಯಕ್ಷ ಶ್ರೀನಿವಾಸರಾವ್ ಕದಂ ಮನವಿ ಮಾಡಿದರು.

ಇಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಇತ್ತೀಚೆಗೆ ಕೆಲ ಕಿಡಿಗೇಡಿಗಳು ಸಾಮಾಜಿಕ ಜಾಲತಾಣಗಳಲ್ಲಿ ಕ್ಷತ್ರಿಯ ಮರಾಠ ಪರಿಷತ್ ಜಿಲ್ಲಾ ಸಮಿತಿ ಬಗ್ಗೆ ಸುಳ್ಳು ಆರೋಪ ಮಾಡುವ ಮೂಲಕ ಸಂಘ ಮತ್ತು ಆಡಳಿತ ಮಂಡಳಿ ಹೆಸರಿಗೆ ಮಸಿ ಬಳಿಯಲು ಯತ್ನಿಸಿದ್ದಾರೆ. ಇದಕ್ಕೆ ಸಮುದಾಯದ ಜನ ಮನ್ನಣೆ ನೀಡಬಾರದು’ ಎಂದು ಹೇಳಿದರು.

‘ಸಮಿತಿಯು ಮರಾಠ ಜನಾಂಗವನ್ನು ಪ್ರವರ್ಗ 3ಬಿಯಿಂದ 2ಎಗೆ ತರುವಂತೆ ಹೋರಾಟ ನಡೆಸುತ್ತಿದೆ. ಮರಾಠ ಅಭಿವೃದ್ಧಿ ನಿಗಮಕ್ಕೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಲು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ ಸಕಾರಾತ್ಮಕ ಸ್ಪಂದನೆ ವ್ಯಕ್ತವಾಗಿದೆ. ಜಿಲ್ಲಾ ಕೇಂದ್ರಗಳಲ್ಲಿ ಸಮುದಾಯದವರಿಗೆ ಧಾರ್ಮಿಕ ಶ್ರದ್ಧಾ ಕೇಂದ್ರಗಳನ್ನು ನಿರ್ಮಿಸಲು ಜಮೀನು ಖರೀದಿಸಿದ್ದು, ಕೆಲವೆಡೆ ಈಗಾಗಲೇ ಭವನ ನಿರ್ಮಾಣವಾಗಿವೆ’ ಎಂದು ವಿವರಿಸಿದರು.

ADVERTISEMENT

‘ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ಶಿವಾಜಿ ಜಯಂತಿ ಆಚರಿಸಲು ಆರ್ಥಿಕ ನೆರವು ನೀಡುವುದರ ಜತೆಗೆ ವಿದ್ಯಾರ್ಥಿವೇತನ, ವಿಧವಾ ವೇತನ ಮತ್ತು ಅಂಗವಿಕಲರಿಗೆ ನೆರವು ನೀಡಲಾಗುತ್ತಿದೆ. ಕೋವಿಡ್‌ನಿಂದ ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ಹಣಕಾಸು ಆರ್ಥಿಕ ನೆರವು ನೀಡಲಾಗಿದೆ. ಡೋಂಗಿಗಳು ಸಮಿತಿ ವಿರುದ್ಧ ಸುಳ್ಳು ಆರೋಪ ಮಾಡುವುದನ್ನು ಬಿಟ್ಟು ನ್ಯಾಯಯುತವಾಗಿ ನಡೆದುಕೊಳ್ಳಬೇಕು’ ಎಂದು ಹೇಳಿದರು.

ಕ್ಷತ್ರಿಯ ಮರಾಠ ಪರಿಷತ್ ರಾಜ್ಯ ಸಂಘಟನಾ ಕಾರ್ಯದರ್ಶಿ ರಾನೋಜರಾವ್, ಜಿಲ್ಲಾ ಸಮಿತಿ ಉಪಾಧ್ಯಕ್ಷ ಕೆ.ವೇಣುಗೋಪಾಲರಾವ್, ಕಾರ್ಯದರ್ಶಿ ಚಂದ್ರಶೇಖರರಾವ್, ಮಾಲೂರು ತಾಲ್ಲೂಕು ಘಟಕದ ಕಾರ್ಯದರ್ಶಿ ಶಿವಾಜಿರಾವ್, ಬಂಗಾರಪೇಟೆ ತಾಲ್ಲೂಕು ಘಟಕದ ಕಾರ್ಯದರ್ಶಿ ಚಂದ್ರರಾವ್‌, ಖಜಾಂಚಿ ಮಾಧವರಾವ್, ಕೆಜಿಎಫ್ ತಾಲ್ಲೂಕು ಘಟಕದ ಅಧ್ಯಕ್ಷ ಎಸ್.ಪಿತಾಂಬರರಾವ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.