ADVERTISEMENT

ಮಕ್ಕಳು ಸಂವಿಧಾನದ ಮಹತ್ವ ಅರಿಯಿರಿ

​ಪ್ರಜಾವಾಣಿ ವಾರ್ತೆ
Published 27 ಜನವರಿ 2020, 12:43 IST
Last Updated 27 ಜನವರಿ 2020, 12:43 IST
ಕೋಲಾರ ತಾಲ್ಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢ ಶಾಲೆಯಲ್ಲಿ ಭಾನುವಾರ ಗಣ ರಾಜ್ಯೋತ್ಸವ ಆಚರಿಸಲಾಯಿತು.
ಕೋಲಾರ ತಾಲ್ಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢ ಶಾಲೆಯಲ್ಲಿ ಭಾನುವಾರ ಗಣ ರಾಜ್ಯೋತ್ಸವ ಆಚರಿಸಲಾಯಿತು.   

ಕೋಲಾರ: ‘ದೇಶದ ಆಡಳಿತ ವಿಧಾನ ಮತ್ತು ಕಾನೂನಿನ ಪರಿಕಲ್ಪನೆ ಹೊತ್ತ ಸಂವಿಧಾನದ ಮಹತ್ವವನ್ನು ವಿದ್ಯಾರ್ಥಿಗಳು ಅರಿಯಬೇಕು’ ಎಂದು ತಾಲ್ಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮುನಿಯಪ್ಪ ಕಿವಿಮಾತು ಹೇಳಿದರು.

ಶಾಲೆಯಲ್ಲಿ ಭಾನುವಾರ ಗಣ ರಾಜ್ಯೋತ್ಸವದಲ್ಲಿ ಮಾತನಾಡಿ, ‘ಸಂವಿಧಾನವು ಅಂಬೇಡ್ಕರ್‌ ಸೇರಿದಂತೆ ಅನೇಕ ಮಹನೀಯರ ಪರಿಶ್ರಮದ ಫಲ. ನೆಮ್ಮದಿ ಜೀವನ ನಡೆಸಲು ಅಗತ್ಯವಾದ ಕಾನೂನುಗಳು ಸಂವಿಧಾನದಲ್ಲಿವೆ. ಸಂವಿಧಾನವು ಹಕ್ಕುಗಳ ಜತೆಗೆ ನೀಡಿರುವ ಕರ್ತವ್ಯಗಳನ್ನು ಸತ್ಪ್ರಜೆಗಳಾಗಿ’ ಎಂದರು.

‘ಹೋರಾಟಗಾರರ ಬಲಿದಾನದಿಂದ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿತು. ಹೋರಾಟವನ್ನೇ ಉಸಿರಾಗಿಸಿಕೊಂಡು ಬ್ರಿಟೀಷರ ವಿರುದ್ಧ ಜೀವದ ಹಂಗು ತೊರೆದು ಹೋರಾಡಿದ ಮಹನೀಯರನ್ನು ಎಲ್ಲರೂ ಸ್ಮರಿಸಬೇಕು. ಸಂವಿಧಾನ ಪಾಲಿಸುವುದು ಮತ್ತು ಗೌರವಿಸುವುದು ಭಾರತೀಯನ ಕರ್ತವ್ಯ. ಸಮಾಜದ ಎಲ್ಲರ ಏಳಿಗೆಗೆ ಸಂವಿಧಾನ ಅಡಿಪಾಯ’ ಎಂದು ಶಾಲೆಯ ಮುಖ್ಯ ಶಿಕ್ಷಕ ಸಿ.ಎನ್.ಪ್ರದೀಪ್‌ಕುಮಾರ್ ಅಭಿಪ್ರಾಯಪಟ್ಟರು.

ADVERTISEMENT

‘ರಾಷ್ಟ್ರೀಯ ಹಬ್ಬಗಳನ್ನು ಶಿಸ್ತಿನಿಂದ ಆಚರಿಸಬೇಕು. ಭವಿಷ್ಯದ ಪ್ರಜೆಗಳಾದ ಮಕ್ಕಳು ದೇಶದ ಘನತೆಗೆ ಧಕ್ಕೆ ಬಾರದಂತೆ ಸರಿ ದಾರಿಯಲ್ಲಿ ನಡೆಯಬೇಕು. ಭಾರತವು ಇಡೀ ವಿಶ್ವದಲ್ಲೇ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ. ದೇಶದ ಸಂವಿಧಾನವು ಪ್ರಪಂಚಕ್ಕೆ ಮಾದರಿ’ ಎಂದು ತಿಳಿಸಿದರು.

ಸಂವಿಧಾನ ಗೌರವಿಸಿ: ‘ಮಕ್ಕಳು ರಾಷ್ಟ್ರಗೀತೆ, ರಾಷ್ಟ್ರಧ್ವಜ, ಸಂವಿಧಾನಕ್ಕೆ ಗೌರವ ನೀಡಬೇಕು. ಸಂವಿಧಾನ ನೀಡಿರುವ ಕಾನೂನುಗಳಿಗೆ ವಿರುದ್ಧವಾಗಿ ನಡೆಯಬಾರದು’ ಎಂದು ಗ್ರಾಮದ ಮುಖಂಡ ಸಿ.ನಂಜುಂಡಪ್ಪ ಹೇಳಿದರು.

ಮಕ್ಕಳು ಸಾಮೂಹಿಕ ನೃತ್ಯ ಪ್ರದರ್ಶಿಸಿದರು. ಶಾಲಾ ಎಸ್‌ಡಿಎಂಸಿ ಉಪಾಧ್ಯಕ್ಷೆ ಹೇಮಾವತಿ, ಸದಸ್ಯರಾದ ರಾಘವೇಂದ್ರ, ಪಾರ್ವತಿ, ಮುನಿಯಪ್ಪ ಶಿಕ್ಷಕರಾದ ಅನಂತ ಪದ್ಮನಾಭ್, ಭವಾನಿ, ಶ್ವೇತಾ, ಸುಗುಣ, ಫರೀದಾ, ವೆಂಕಟರೆಡ್ಡಿ, ಶ್ರೀನಿವಾಸಲು, ಡಿ.ಚಂದ್ರಶೇಖರ್, ಕೆ.ಲೀಲಾ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.