ADVERTISEMENT

ಸ್ಫೋಟಕ ಸಿಡಿದು ಕಾರ್ಮಿಕ ಸಾವು: ರಸ್ತೆ ಅಪಘಾತವೆಂದು ಬಿಂಬಿಸಲು ಯತ್ನ, ಸಿಐ ಅಮಾನತು

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2022, 15:57 IST
Last Updated 14 ಅಕ್ಟೋಬರ್ 2022, 15:57 IST
   

ಮಾಲೂರು (ಕೋಲಾರ): ತಾಲ್ಲೂಕಿನ ಟೇಕಲ್‌ ಹೋಬಳಿಯ ಅನಿಮಿಟ್ಟನಹಳ್ಳಿ ಬಳಿ ಕಲ್ಲು ಕ್ವಾರಿಯಲ್ಲಿ (ಜಲ್ಲಿ ಕ್ರಷರ್‌) ಸ್ಫೋಟಕ ಸಿಡಿದು ಕಾರ್ಮಿಕರೊಬ್ಬರು ಮೃತಪಟ್ಟಿದ್ದಾರೆ. ಆದರೆ, ಅಪಘಾತದಿಂದ ಮೃತಪಟ್ಟಿದ್ದಾರೆ ಎಂದು ಬಿಂಬಿಸಲು ಪ್ರಯತ್ನ ನಡೆದಿದೆ.

ಬಿಹಾರ ಮೂಲದ ರಾಕೇಶ್ ಸಾಣಿ (34) ಮೃತ ವ್ಯಕ್ತಿ. ಘಟನೆ ಗುರುವಾರ ಸಂಜೆ ನಡೆದಿದ್ದು, ಟಿಪ್ಪರ್‌ ಹರಿದು ಮೃತಪಟ್ಟಿರುವುದಾಗಿ ಮಾಸ್ತಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಮೃತ ರಾಕೇಶ್ ತಮ್ಮ ನಿತೀಶ್‌ ಕುಮಾರ್‌ ಈ ರೀತಿ ದೂರು ನೀಡಿದ್ದರು. ವ್ಯಕ್ತಿಯ ಮೃತದೇಹವನ್ನು ಆಸ್ಪತ್ರೆಗೆ ಸಾಗಿಸಿ ಮರಣೋತ್ತರ ಪರೀಕ್ಷೆ ಕೂಡ ನಡೆಸಲಾಗಿದೆ. ಸ್ಫೋಟಕ ಸಿಡಿತದಲ್ಲಿ ಗಾಯಗೊಂಡಿರುವ ಬಿಹಾರ ಮೂಲದ ಮತ್ತೊಬ್ಬ ಕಾರ್ಮಿಕ ಅಜಾದ್‌ ಎಂಬುವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಬಗ್ಗೆ ಅನುಮಾನ ವ್ಯಕ್ತವಾಗುತ್ತಿದ್ದಂತೆ ಕೇಂದ್ರ ವಲಯ ಐಜಿಪಿ ಚಂದ್ರಶೇಖರ್‌ ಹಾಗೂ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಿ.ದೇವರಾಜ್‌ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ADVERTISEMENT

‘ಇದು ಅಪಘಾತವಲ್ಲ; ಸ್ಫೋಟಕದಿಂದ ಸಂಭವಿಸಿರುವ ಸಾವು ಎಂಬುದು ಪ್ರಾಥಮಿಕ ತನಿಖೆಯಿಂದ ದೃಢಪಟ್ಟಿದೆ. ಕಾಲು ಜಾರಿ ಟಿಪ್ಪರ್‌ ಅಡಿಗೆ ಬಿದ್ದು ಮೃತಪಟ್ಟಿದ್ದಾರೆ ಎಂಬ ದೂರು ನೀಡಿ ಪೊಲೀಸರ ದಾರಿ ತಪ್ಪಿಸಿದ್ದಾರೆ. ಮೃತದೇಹ ಪರೀಕ್ಷಿಸಿದಾಗ ಸುಟ್ಟು ಕರಕಲಾಗಿದ್ದು, ಸ್ಫೋಟಕದಿಂದ ಆಗಿರುವ ಗಾಯ ಎಂಬುದು ಗೊತ್ತಾಯಿತು. ಅಪಘಾತವೆಂದು ಪ್ರಕರಣ ದಾಖಲಿಸಿದ ಮಾಸ್ತಿ ಠಾಣೆ ಸರ್ಕಲ್‌ ಇನ್‌ಸ್ಪೆಕ್ಟರ್‌ ವಸಂತಕುಮಾರ್‌ ಅವರನ್ನು ಅಮಾನತುಗೊಳಿಸಲಾಗಿದೆ. ಮತ್ತೊಮ್ಮೆ ಮರಣೋತ್ತರ ಪರೀಕ್ಷೆ ನಡೆಸಲಾಗುವುದು’ ಎಂದು ದೇವರಾಜ್‌ ‘ಪ್ರಜಾವಾಣಿ’ಗೆ ಹೇಳಿದರು.

‘ಸ್ಫೋಟಕ ಸರಬರಾಜು ಮಾಡಿದ ದೀಪೆನ್‌ ಎಂಬಾತನನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದೇವೆ. ಡಿವೈಎಸ್‌ಪಿ ಮುರಳೀಧರ್‌ ನೇತೃತ್ವದಲ್ಲಿ ತನಿಖೆ ನಡೆಸಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.