
ಕೋಲಾರ: ಕೋಲಾರದಲ್ಲಿ 2 ದಿನ ನಡೆದ ಸಿಐಟಿಯು 7ನೇ ಜಿಲ್ಲಾ ಸಮ್ಮೇಳನದಲ್ಲಿ 20 ಪ್ರತಿನಿಧಿಗಳೊಂದಿಗೆ ಚರ್ಚಿಸಿ ಪ್ರಮುಖವಾಗಿ 17 ನಿರ್ಣಯ ಕೈಗೊಳ್ಳಲಾಗಿದೆ ಎಂದು ಸಿಐಟಿಯು ನೂತನ ಜಿಲ್ಲಾಧ್ಯಕ್ಷ ಪಿ.ಶ್ರೀನಿವಾಸ್ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಜಿಲ್ಲೆಯಲ್ಲಿ ಕೃಷಿಯಾಧಾರಿತ ಕೈಗಾರಿಕೆಗಳನ್ನು ಸ್ಥಾಪನೆ ಮಾಡಬೇಕು, ಜಿಲ್ಲೆಯಲ್ಲಿರುವ ಕೈಗಾರಿಕೆಗಳಲ್ಲಿ ಕಾರ್ಮಿಕ ಕಾನೂನುಗಳನ್ನು ಕಡ್ಡಾಯವಾಗಿ ಜಾರಿ ಮಾಡಬೇಕು. ಜಿಲ್ಲೆಯ ಕೈಗಾರಿಕೆಗಳಲ್ಲಿ ಸರೋಜಿನಿ ಮಹಿಷಿ ವರದಿಯಂತೆ ಸ್ಥಳೀಯರಿಗೆ ಕಾಯಂ ಉದ್ಯೋಗ ನೀಡಬೇಕು ಎಂಬ ನಿರ್ಣಯ ಕೈಗೊಳ್ಳಲಾಗಿದೆ’ ಎಂದರು.
ಕಾರ್ಪೊರೇಟ್ ಬಂಡವಾಳಪರ ರೂಪಿಸಿರುವ ಕಾರ್ಮಿಕ ಸಂಹಿತೆಗಳನ್ನು ರಾಜ್ಯದಲ್ಲಿ ಜಾರಿ ಮಾಡಬಾರದು. ₹36 ಸಾವಿರ ಸಮಾನ ಕನಿಷ್ಠ ವೇತನ ನಿಗದಿ ಮಾಡಬೇಕು. ಗುತ್ತಿಗೆ ಪದ್ಧತಿ ನಿಯಂತ್ರಣಕ್ಕಾಗಿ, ಗುತ್ತಿಗೆ ಕಾರ್ಮಿಕರ ಕಾಯಂಮಾತಿ ಕಾನೂನು ಜಾರಿ ಮಾಡಬೇಕು ಎಂದು ಆಗ್ರಹಿಸಿದರು.
ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನಡೆಯುತ್ತಿರುವ ನಿಧಿ ದುರುಪಯೋಗ ನಿಲ್ಲಿಸಬೇಕು. ಇಪಿಎಪ್ ನಿವೃತ್ತಿ ವೇತನವನ್ನು ಕನಿಷ್ಠ ₹10 ಸಾವಿರಕ್ಕೆ ಏರಿಸಬೇಕು ಎಂದು ಒತ್ತಾಯಿಸಿದರು.
ಚಿನ್ನದ ಗಣಿಯನ್ನು ಪುನರ್ ಆರಂಭಿಸಬೇಕು ಮತ್ತು ಪರಿಹಾರ ಹಾಗೂ ಗಣಿ ಕಾರ್ಮಿಕರು ವಾಸ ಮಾಡುವ ಮನೆಗಳನ್ನು ಗಣಿ ಕಾರ್ಮಿಕರಿಗೆ ನೀಡಬೇಕು. ಬೆಮಲ್ ಸೇರಿದಂತೆ ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣ ಮಾಡುವುದನ್ನು ಕೈಬಿಡಬೇಕು. ಬೆಮಲ್ ಕಾಯಂಯೇತರ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಹೇಳಿದರು.
ಕೋಲಾರ ಜಿಲ್ಲೆಯಲ್ಲಿ ಸಮಗ್ರ ಅಭಿವೃದ್ಧಿಗೆ ಪೂರಕ ಯೋಜನೆಗಳನ್ನು ಜಾರಿಗೊಳಿಸಬೇಕು. ಮಾಲೂರಿನ ವೆರ್ಗಾ ಆಟ್ಯಾಚ್‍ಮೆಂಟ್ ಕಾರ್ಮಿಕರ ಬೇಡಿಕೆಗಳನ್ನು ತಕ್ಷಣ ಈಡೇರಿಸಬೇಕು ಎಂದರು.
ಸಿಐಟಿಯು ಜಿಲ್ಲಾ ಉಪಾಧ್ಯಕ್ಷ ಗಾಂಧಿನಗರ ನಾರಾಯಸ್ವಾಮಿ ಮಾತನಾಡಿ, ಸಮ್ಮೇಳನದ 17 ನಿರ್ಣಯಗಳ ಆಧಾರದ ಮೇರೆ ಜಿಲ್ಲೆಯಲ್ಲಿ ದೊಡ್ಡಮಟ್ಟದ ಹೋರಾಟಕ್ಕೆ ಕರೆ ನೀಡಲಾಗಿದೆ. ಕೈಗಾರಿಕೆಗಳವರಿಗೆ ಕಾರ್ಮಿಕ ಇಲಾಖೆ, ಪೊಲೀಸ್ ಇಲಾಖೆಯ ಭಯ ಇಲ್ಲದಾಗಿದೆ. ಕಾರ್ಮಿಕರಿಗೆ ಎಲ್ಲೆಡೆ ರಕ್ಷಣೆ ಇಲ್ಲದಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬಿಪಿಎಲ್ ಕಾರ್ಡುಗಳ ರದ್ದು ಮಾಡಲು ರಾಜ್ಯ, ಕೇಂದ್ರ ಸರ್ಕಾರಗಳು ಮುಂದಾಗಿರುವುದು ಅವೈಜ್ಞಾನಿಕವಾಗಿದೆ ಎಂದರು.
ಸಮ್ಮೇಳನದಲ್ಲಿ ನೂತನ ಸಮಿತಿಯ ರಚನೆ ಮಾಡಲಾಗಿರುವುದಾಗಿ ವಿವರಿಸಿದರು. ಸುದ್ದಿಗೋಷ್ಠಿಯಲ್ಲಿ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ವಿಜಯಕೃಷ್ಣ, ಖಜಾಂಚಿ ಎಚ್.ಬಿ.ಕೃಷ್ಣಪ್ಪ, ಉಪಾಧ್ಯಕ್ಷ ಪಿ.ತಂಗರಾಜ್, ಕಾರ್ಯದರ್ಶಿಗಳಾದ ಬಿ.ಎಲ್.ಕೇಶವರಾವ್, ಎಂ.ಭೀಮರಾಜ್, ಐ.ಸಿ.ವೀರಭದ್ರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.