ADVERTISEMENT

ಕೆರೆ ಜಾಗ ಒತ್ತುವರಿ ತೆರವು

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2020, 16:03 IST
Last Updated 18 ಫೆಬ್ರುವರಿ 2020, 16:03 IST
ಕಂದಾಯ ಇಲಾಖೆ ಅಧಿಕಾರಿಗಳು ಕೋಲಾರ ತಾಲ್ಲೂಕಿನ ಸೀಪೂರು ಗ್ರಾಮದಲ್ಲಿ ಮಂಗಳವಾರ ಕೆರೆಯಂಗಳದ ಒತ್ತುವರಿ ತೆರವುಗೊಳಿಸಿದರು.
ಕಂದಾಯ ಇಲಾಖೆ ಅಧಿಕಾರಿಗಳು ಕೋಲಾರ ತಾಲ್ಲೂಕಿನ ಸೀಪೂರು ಗ್ರಾಮದಲ್ಲಿ ಮಂಗಳವಾರ ಕೆರೆಯಂಗಳದ ಒತ್ತುವರಿ ತೆರವುಗೊಳಿಸಿದರು.   

ಕೋಲಾರ: ತಾಲ್ಲೂಕಿನ ಸೀಪೂರು ಗ್ರಾಮದಲ್ಲಿ ಕೆರೆಯಂಗಳದ ಒತ್ತುವರಿಯನ್ನು ಕಂದಾಯ ಇಲಾಖೆ ಅಧಿಕಾರಿಗಳು ಮಂಗಳವಾರ ಒತ್ತುವರಿ ತೆರವುಗೊಳಿಸಿದರು.

ಗ್ರಾಮದ ಚಂದ್ರಪ್ರಕಾಶ್‌ ಎಂಬುವರು ಕೆರೆ ಜಾಗ ಒತ್ತುವರಿ ಮಾಡಿಕೊಂಡು ಅನಧಿಕೃತವಾಗಿ ಕೆ.ಸಿ ವ್ಯಾಲಿ ಯೋಜನೆ ನೀರು ಬಳಕೆ ಮಾಡುತ್ತಿದ್ದರು. ಈ ಬಗ್ಗೆ ಗ್ರಾಮಸ್ಥರು ಕಂದಾಯ ಇಲಾಖೆಗೆ ದೂರು ಕೊಟ್ಟಿದ್ದರು. ಈ ದೂರು ಆಧರಿಸಿ ಮಂಗಳವಾರ ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳು ಒತ್ತುವರಿ ತೆರುವ ಮಾಡಿದರು.

ಚಂದ್ರಪ್ರಕಾಶ್ ಅವರು ಕೆರೆಯಂಗಳದ ಒತ್ತುವರಿಯ ಜತೆಗೆ ಪಕ್ಕದ ರಾಜಕಾಲುವೆಯಲ್ಲಿ ಹರಿದು ಹೋಗುವ ಕೆ.ಸಿ ವ್ಯಾಲಿ ನೀರನ್ನು ಕೃಷಿ ಚಟುವಟಿಕೆಗೆ ಬಳಕೆ ಮಾಡುತ್ತಿದ್ದರು. ರಾಜಕಾಲುವೆಯಿಂದ ಒತ್ತುವರಿ ಜಾಗದವರೆಗೆ ಪೈಪ್‌ ಅಳವಡಿಸಿ ನೀರು ಬರುವಂತೆ ವ್ಯವಸ್ಥೆ ಮಾಡಿಕೊಂಡಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದಾಗ ಚಂದ್ರಪ್ರಕಾಶ್ ಒತ್ತುವರಿ ತೆರವು ಕಾರ್ಯಾಚರಣೆಗೆ ಅಡ್ಡಿಪಡಿಸಿದರು. ಅಲ್ಲದೇ, ಅಧಿಕಾರಿಗಳೊಂದಿಗೆ ವಾಗ್ವಾದಕ್ಕಿಳಿದರು. ಇದರಿಂದ ಸ್ಥಳದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಯಿತು. ಬಳಿಕ ಗ್ರಾಮಸ್ಥರು ಚಂದ್ರಪ್ರಕಾಶ್‌ರ ಮನವೊಲಿಸಿ ಪರಿಸ್ಥಿತಿ ತಿಳಿಗೊಳಿಸಿದರು.

‘ಚಂದ್ರಪ್ರಕಾಶ್‌ ಒತ್ತುವರಿ ಮಾಡಿದ್ದ ಕೆರೆಯ ಜಾಗಕ್ಕೆ ನಕಲಿ ದಾಖಲೆಪತ್ರ ಸೃಷ್ಟಿಸಿಕೊಂಡಿದ್ದರು. ಇಲಾಖೆಯಲ್ಲಿ ಲಭ್ಯವಿರುವ ದಾಖಲೆಪತ್ರ ಪರಿಶೀಲಿಸಿ ಚಂದ್ರಪ್ರಕಾಶ್ ವಿರುದ್ಧ ಶಿಸ್ತುಕ್ರಮ ಜರುಗಿಸಬೇಕು’ ಎಂದು ಗ್ರಾಮಸ್ಥರು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.