ಕೆ.ಎಚ್. ಮುನಿಯಪ್ಪ
ಕೋಲಾರ: ‘ರಾಜ್ಯ ಕಾಂಗ್ರೆಸ್ ಸರ್ಕಾರ ಎರಡೂವರೆ ವರ್ಷ ಪೂರೈಸಿದ ಬಳಿಕ ಹಿರಿಯ ಸಚಿವರು ಎರಡನೇ ಹಂತದ ನಾಯಕರಿಗೆ ಅವಕಾಶ ಮಾಡಿಕೊಡಲು ತ್ಯಾಗಕ್ಕೆ ಸಿದ್ಧರಾಗಬೇಕು. ಮೂರ್ನಾಲ್ಕು ಬಾರಿ ಗೆದ್ದಿರುವ ಶಾಸಕರಿಗೆ ಇನ್ನೂ ಅವಕಾಶಗಳು ಸಿಕ್ಕಿಲ್ಲ’ ಎಂದು ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘2028ರ ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿ ಇಟ್ಟುಕೊಂಡು ಪಕ್ಷ ಕಟ್ಟಬೇಕಿದೆ. ಮತ್ತೆ ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ತರಲು, ಪಕ್ಷದ ಒಳಿತಿಗಾಗಿ ಅಭಿವೃದ್ಧಿ ಕೆಲಸಗಳ ಜೊತೆಗೆ ಎರಡನೇ ಹಂತದ ನಾಯಕರಿಗೆ ಅವಕಾಶ ಮಾಡಿಕೊಡಬೇಕು’ ಎಂದರು.
‘ನಾನು ಬಹಳ ಹಿಂದೆಯೇ ಸದುದ್ದೇಶದಿಂದ ಈ ಮಾತು ಹೇಳಿದ್ದೆ. ಆ ಮಾತಿಗೆ ನಾನು ಈಗಲೂ ಬದ್ಧ. ರಾಜಕೀಯವಾಗಿ ಪಕ್ಷ ಕಟ್ಟಬೇಕಾದರೆ ತ್ಯಾಗ ಮಾಡಲು ಸಿದ್ಧರಿರಬೇಕು. ಆದರೆ, ಅಂತಿಮವಾಗಿ ತೀರ್ಮಾನ ಮಾಡುವುದು ಹೈಕಮಾಂಡ್’ ಎಂದು ಸೂಕ್ಷ್ಮವಾಗಿ ನುಡಿದರು.
‘ಮುಖ್ಯಮಂತ್ರಿ ಬದಲಾವಣೆ ಕುರಿತಾಗಲಿ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕುರಿತಾಗಲಿ ಪಕ್ಷದಲ್ಲಿ ಯಾವುದೇ ತೀರ್ಮಾನ ಆಗಿಲ್ಲ. ಇಬ್ಬರೂ ತಮ್ಮ ತಮ್ಮ ಸ್ಥಾನಗಳಲ್ಲಿ ಮುಂದುವರಿಯಲಿದ್ದಾರೆ’ ಎಂದು ತಿಳಿಸಿದರು.
ಬಿಪಿಎಲ್ ಪಡಿತರ: ‘ಅರ್ಜಿ ಹಾಕಿದವರಿಗೆ ಶೀಘ್ರದಲ್ಲೇ ಹೊಸದಾಗಿ ಬಿಪಿಎಲ್ ಪಡಿತರ ಚೀಟಿ ಕೊಡಲಾಗುವುದು. ಅನ್ನಭಾಗ್ಯ ಯೋಜನೆಯಡಿ ಪ್ರತಿ ತಿಂಗಳು ತಪ್ಪದೇ 10 ಕೆ.ಜಿ ಅಕ್ಕಿ ವಿತರಿಸಲಾಗುತ್ತಿದೆ’ ಎಂದು ಆಹಾರ ಸಚಿವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.