ADVERTISEMENT

ಕೋಲಾರ ನಗರಸಭೆ ನಿವೇಶನದ ಒತ್ತುವರಿ ತೆರವು

​ಪ್ರಜಾವಾಣಿ ವಾರ್ತೆ
Published 8 ಜುಲೈ 2020, 15:14 IST
Last Updated 8 ಜುಲೈ 2020, 15:14 IST
ಕೋಲಾರದ ಕುವೆಂಪುನಗರದಲ್ಲಿನ ನಗರಸಭೆ ಜಾಗದಲ್ಲಿ ಅನಧಿಕೃತವಾಗಿ ನಿರ್ಮಿಸಿದ್ದ ವಾಣಿಜ್ಯ ಮಳಿಗೆಯನ್ನು ಅಧಿಕಾರಿಗಳು ಬುಧವಾರ ತೆರವುಗೊಳಿಸಿದರು.
ಕೋಲಾರದ ಕುವೆಂಪುನಗರದಲ್ಲಿನ ನಗರಸಭೆ ಜಾಗದಲ್ಲಿ ಅನಧಿಕೃತವಾಗಿ ನಿರ್ಮಿಸಿದ್ದ ವಾಣಿಜ್ಯ ಮಳಿಗೆಯನ್ನು ಅಧಿಕಾರಿಗಳು ಬುಧವಾರ ತೆರವುಗೊಳಿಸಿದರು.   

ಕೋಲಾರ: ನಗರದ ಕುವೆಂಪುನಗರ ಬಡಾವಣೆಯಲ್ಲಿನ ನಗರಸಭೆ ಜಾಗದಲ್ಲಿ ಅನಧಿಕೃತವಾಗಿ ನಿರ್ಮಿಸಿದ್ದ ವಾಣಿಜ್ಯ ಮಳಿಗೆಯನ್ನು ಬುಧವಾರ ತೆರವುಗೊಳಿಸಲಾಯಿತು.

ನಗರಸಭೆಗೆ ಸೇರಿದ ಲಕ್ಷಾಂತರ ರೂಪಾಯಿ ಮೌಲ್ಯದ 30/40 ಅಳತೆಯ ನಿವೇಶನದಲ್ಲಿ ಖಾಸಗಿ ವ್ಯಕ್ತಿಯೊಬ್ಬರು ನಿಯಮಬಾಹಿರವಾಗಿ ಮಳಿಗೆ ನಿರ್ಮಿಸಿದ್ದರು. ಅಲ್ಲದೇ, ಈ ಮಳಿಗೆಯಲ್ಲಿ ಹಲವು ವರ್ಷಗಳಿಂದ ಕಾಫಿ, ಟೀ ವಹಿವಾಟು ನಡೆಸುತ್ತಿದ್ದರು.

ಈ ಸಂಗತಿ ತಿಳಿದ ನಗರಸಭೆ ಆಯುಕ್ತ ಶ್ರೀಕಾಂತ್‌ ಅವರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದರು. ಆಯುಕ್ತರು ನಿವೇಶನದ ದಾಖಲೆಪತ್ರ ಕೊಡುವಂತೆ ಕೇಳಿದಾಗ ಮಳಿಗೆ ಮಾಲೀಕರು ದಾಖಲೆಪತ್ರ ಕೊಡಲು ಹಿಂದೇಟು ಹಾಕಿದರು. ಬಳಿಕ ಆಯುಕ್ತರು ನಗರಸಭೆ ಕಂದಾಯ ವಿಭಾಗದ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ ವಿಚಾರಿಸಿದಾಗ ಜಾಗವು ನಗರಸಭೆಗೆ ಸೇರಿರುವುದು ಖಚಿತವಾಯಿತು. ನಂತರ ಮಳಿಗೆ ತೆರವು ಮಾಡಲಾಯಿತು.

ADVERTISEMENT

ಪ್ರಕರಣದ ಎಚ್ಚರಿಕೆ: ‘ಅನಧಿಕೃತವಾಗಿ ಮಳಿಗೆ ನಿರ್ಮಿಸಲಾಗಿದ್ದ ಜಾಗವು ಮೂಲೆ ನಿವೇಶನವಾದ ಕಾರಣ ಲಕ್ಷಾಂತರ ರೂಪಾಯಿ ಮೌಲ್ಯದ ಆಸ್ತಿ ಉಳಿಸಿದಂತಾಗಿದೆ. ಜಾಗ ಮತ್ತೆ ಒತ್ತುವರಿ ಮಾಡಿದರೆ ಪೊಲೀಸ್‌ ಠಾಣೆಯಲ್ಲಿ ಕ್ರಿಮಿನಲ್‌ ಪ್ರಕರಣ ದಾಖಲಿಸುತ್ತೇವೆ ಎಂದು ಮಳಿಗೆ ಮಾಲೀಕರಿಗೆ ಎಚ್ಚರಿಕೆ ನೀಡಿದ್ದೇವೆ’ ಎಂದು ಶ್ರೀಕಾಂತ್‌ ತಿಳಿಸಿದರು.

‘ನಗರಸಭೆಗೆ ಸೇರಿದ ನೂರಾರು ಆಸ್ತಿಗಳು ಒತ್ತುವರಿಯಾಗಿದ್ದು, ಹಂತ ಹಂತವಾಗಿ ಒತ್ತುವರಿ ತೆರವು ಮಾಡುತ್ತೇವೆ. ನಂತರ ಜಾಗಗಳ ಸುತ್ತ ತಂತಿ ಬೇಲಿ ಅಳವಡಿಸಿ ಸಂರಕ್ಷಣೆ ಮಾಡುತ್ತೇವೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.