ADVERTISEMENT

ಶಾಂತಿ ಸುವ್ಯವಸ್ಥೆ ಕಾಪಾಡಲು ಸಹಕರಿಸಿ- ವೇಮಗಲ್‌ ಠಾಣೆ ಇನ್‌ಸ್ಪೆಕ್ಟರ್‌ ಶಿವರಾಜ್‌

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2021, 14:11 IST
Last Updated 21 ಡಿಸೆಂಬರ್ 2021, 14:11 IST
ಕ್ಯಾಲನೂರು ಕ್ರಾಸ್‌ ಬಳಿಯ ಸಾಯಿ ಗಾರ್ಮೆಂಟ್ಸ್ ಕಾರ್ಖಾನೆಯಲ್ಲಿ ಮಂಗಳವಾರ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮ ನಡೆಯಿತು
ಕ್ಯಾಲನೂರು ಕ್ರಾಸ್‌ ಬಳಿಯ ಸಾಯಿ ಗಾರ್ಮೆಂಟ್ಸ್ ಕಾರ್ಖಾನೆಯಲ್ಲಿ ಮಂಗಳವಾರ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮ ನಡೆಯಿತು   

ಕ್ಯಾಲನೂರು: ‘ಪ್ರತಿಯೊಬ್ಬರು ದೇಶದ ಕಾನೂನು ಗೌರವಿಸಬೇಕು. ಜತೆಗೆ ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಸಹಕಾರ ನೀಡಬೇಕು’ ಎಂದು ವೇಮಗಲ್‌ ಠಾಣೆ ಇನ್‌ಸ್ಪೆಕ್ಟರ್‌ ಶಿವರಾಜ್‌ ಹೇಳಿದರು.

ಕ್ಯಾಲನೂರು ಕ್ರಾಸ್‌ ಬಳಿಯಿರುವ ಸಾಯಿ ಗಾರ್ಮೆಂಟ್ಸ್ ಕಾರ್ಖಾನೆಯಲ್ಲಿ ಮಂಗಳವಾರ ನಡೆದ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ‘ಸಮಾಜದಲ್ಲಿ ಅಪರಾಧ ಪ್ರಕರಣಗಳನ್ನು ತಡೆಯುವಲ್ಲಿ ಸಾರ್ವಜನಿಕರ ಪಾತ್ರ ಮಹತ್ವವಾದದ್ದು. ಜನರು ಸಹ ಪೊಲೀಸರ ಸ್ನೇಹಿತರಾಗಿರಬೇಕು’ ಎಂದು ತಿಳಿಸಿದರು.

‘ಇತ್ತೀಚೆಗೆ ಅಪರಾಧ ಕೃತ್ಯಗಳು ಹೆಚ್ಚುತ್ತಿದೆ. ಗ್ರಾಮಗಳಿಗೆ ಯಾರೇ ಹೊರಗಿನವರು ಬಂದರೆ ಸ್ಥಳೀಯರಿಗೆ ತಕ್ಷಣ ತಿಳಿಯುತ್ತದೆ. ಅನುಮಾನಾಸ್ಪದ ವ್ಯಕ್ತಿಗಳ ಚಲನವಲನದ ಬಗ್ಗೆ ಮಾಹಿತಿ ನೀಡಿದರೆ ಅಪರಾಧಗಳನ್ನು ತಡೆಗಟ್ಟಲು ಸಹಕಾರಿಯಾಗುತ್ತದೆ. ಅಪರಾಧ ನಡೆಯುವ ಮುನ್ನವೇ ಜಾಗೃತಿ ಮೂಡಿಸುವ ಕಾರ್ಯಕ್ರಮವೇ ಅಪರಾಧ ತಡೆ ಮಾಸಾಚರಣೆಯ ಮುಖ್ಯ ಉದ್ದೇಶ’ ಎಂದರು.

ADVERTISEMENT

‘ಕೊಲೆ, ಅತ್ಯಾಚಾರ ಪ್ರಕರಣ ಅಥವಾ ಹೆಣ್ಣು ಮಕ್ಕಳ ಮೇಲಿನ ಯಾವುದೇ ರೀತಿಯ ದೌರ್ಜನ್ಯ ನಡೆದರೆ ಸಮೀಪದ ಪೊಲೀಸ್ ಠಾಣೆಗೆ ದೂರು ನೀಡಬೇಕು. ಮನೆಯಿಂದ ಹೊರಗೆ ಹೋಗುವಾಗ ಬಾಗಿಲು ಭದ್ರಪಡಿಸಿ ಬೀಗ ಹಾಕಬೇಕು. ಗ್ರಾಮದಲ್ಲಿ ಅನುಮಾನಾಸ್ಪದ ವ್ಯಕ್ತಿಗಳು ಕಂಡುಬಂದರೆ ಪೊಲೀಸರಿಗೆ ಮಾಹಿತಿ ನೀಡಬೇಕು’ ಎಂದು ಕೋರಿದರು.

‘ಪೋಷಕರು ಮಕ್ಕಳ ಕೈಗೆ ಮೊಬೈಲ್ ಕೊಡುವ ಮುನ್ನ ಅವರ ಮೇಲೆ ಹೆಚ್ಚು ನಿಗಾ ವಹಿಸಬೇಕು. ಮಕ್ಕಳು ದುಷ್ಕರ್ಮಿಗಳ ಸಂಪರ್ಕಕ್ಕೆ ಬಾರದಂತೆ ಎಚ್ಚರ ವಹಿಸಬೇಕು. ಮೊಬೈಲ್ ಸಂಖ್ಯೆಗೆ ಬಹು ಮೊತ್ತದ ಲಾಟರಿ ಬಂದಿರುವ ಆಮಿಷಕ್ಕೆ ಬಲಿಯಾಗಬೇಡಿ. ವಂಚಕರು ನಗದು ಬಹುಮಾನ ಬಂದಿರುವುದಾಗಿ ಅಥವಾ ತೆರಿಗೆ ಪಾವತಿಸಲು ಸೂಚಿಸಿ ಮೋಸ ಮಾಡುತ್ತಾರೆ’ ಎಂದು ಎಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.