ADVERTISEMENT

ಅವಕಾಶ ಸಿಕ್ಕರೆ ಚುನಾವಣೆಗೆ ಸ್ಪರ್ಧೆ: ಶ್ರೀಧರ್‌ರೆಡ್ಡಿ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2019, 14:03 IST
Last Updated 20 ಏಪ್ರಿಲ್ 2019, 14:03 IST
ಕೋಲಾರಕ್ಕೆ ಶನಿವಾರ ಭೇಟಿ ನೀಡಿದ ಬಿಬಿಎಂಪಿ ಮಾಜಿ ಸದಸ್ಯ ಹಾಗೂ ಜೆಡಿಎಸ್ ಮುಖಂಡ ಶ್ರೀಧರ್‌ರೆಡ್ಡಿ ಅವರನ್ನು ಪಕ್ಷದ ಕಾರ್ಯಕರ್ತರು ಸನ್ಮಾನಿಸಿದರು.
ಕೋಲಾರಕ್ಕೆ ಶನಿವಾರ ಭೇಟಿ ನೀಡಿದ ಬಿಬಿಎಂಪಿ ಮಾಜಿ ಸದಸ್ಯ ಹಾಗೂ ಜೆಡಿಎಸ್ ಮುಖಂಡ ಶ್ರೀಧರ್‌ರೆಡ್ಡಿ ಅವರನ್ನು ಪಕ್ಷದ ಕಾರ್ಯಕರ್ತರು ಸನ್ಮಾನಿಸಿದರು.   

ಕೋಲಾರ: ‘ಜನರ ಸೇವೆ ಮಾಡಲು ಕೋಲಾರ ಕ್ಷೇತ್ರಕ್ಕೆ ಬಂದಿದ್ದು, ಅವಕಾಶ ಸಿಕ್ಕಿದರೆ ಮುಂದೆ ಸಾರ್ವತ್ರಿಕ ಚುನಾವಣೆಗೆ ಸ್ಪರ್ಧಿಸುತ್ತೇನೆ’ ಎಂದು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮಾಜಿ ಸದಸ್ಯ ಶ್ರೀಧರ್‌ರೆಡ್ಡಿ ತಿಳಿಸಿದರು.

ಇಲ್ಲಿ ಶನಿವಾರ ಕೋಲಾರಮ್ಮ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಸುದ್ದಿಗಾರರೊಂದಿಗೆ ಮಾತನಾಡಿ, ‘ಬಿಬಿಎಂಬಿ ಸದಸ್ಯನಾಗಿ ಹಾಗೂ ನಗರಾಭಿವೃದ್ಧಿ ಯೋಜನೆ ಸಮಿತಿ ಅಧ್ಯಕ್ಷನಾಗಿ ಕೆಲಸ ಮಾಡಿದ್ದೇನೆ. ಭವಿಷ್ಯದಲ್ಲಿ ಜಿಲ್ಲೆಯ ಜನರ ಸೇವೆ ಮಾಡುವ ಆಸೆಯಿದೆ’ ಎಂದರು.

‘ಸಮಾಜ ಸೇವೆ ಮೂಲಕವೇ ರಾಜಕೀಯವಾಗಿ ಜೆಡಿಎಸ್‌ನಲ್ಲಿ ಗುರುತಿಸಿಕೊಂಡು ಪಕ್ಷ ಸಂಘಟನೆ ಮಾಡುತ್ತಿದ್ದೇನೆ. ರಾಜ್ಯದಲ್ಲಿ ಕಾಂಗ್ರೆಸ್–ಜೆಡಿಎಸ್ ಮೈತ್ರಿ ಸರ್ಕಾರ ಅಧಿಕಾರದಲ್ಲಿದ್ದು, ಸರ್ಕಾರದ ಜನಪರ ಕಾರ್ಯಕ್ರಮಗಳ ಬಗ್ಗೆ ಜನರಿಗೆ ಅರಿವು ಮೂಡಿಸುತ್ತೇನೆ’ ಎಂದು ಹೇಳಿದರು.

ADVERTISEMENT

‘ಕ್ಷೇತ್ರದಲ್ಲಿ ರಾಜಕೀಯ ಬದಲಾವಣೆ ಆಗುತ್ತಿದೆ. ಇಲ್ಲಿನ ಪಕ್ಷದ ಮುಖಂಡರು ಹಿಂದೆಯೇ ನನ್ನನ್ನು ಸಂಪರ್ಕಿಸಿ ಚುನಾವಣೆಗೆ ಸ್ಪರ್ಧಿಸುವಂತೆ ಒತ್ತಾಯಿಸಿದ್ದರು. ವರಿಷ್ಠರು ಹಾಗೂ ಪಕ್ಷದ ಹಿರಿಯ ನಾಯಕರು ಅನುಮತಿ ಕೊಟ್ಟರೆ ಖಂಡಿತ ಚುನಾವಣೆಗೆ ಸ್ಪರ್ಧಿಸುತ್ತೇನೆ’ ಎಂದು ವಿವರಿಸಿದರು.

‘ಕ್ಷೇತ್ರದಲ್ಲಿ ಸ್ಥಳೀಯವಾಗಿ ಸಾಕಷ್ಟು ಸಮಸ್ಯೆಗಳಿವೆ. ಕ್ಷೇತ್ರ ಪ್ರವಾಸ ಮಾಡಿ ಸಮಸ್ಯೆ ಬಗೆಹರಿಸುವಂತೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಮನವಿ ಮಾಡುತ್ತೇನೆ. ಜತೆಗೆ ಸ್ಥಳೀಯವಾಗಿ ಪಕ್ಷ ಸಂಘಟನೆಗೆ ಒತ್ತು ನೀಡುತ್ತೇನೆ’ ಎಂದು ಹೇಳಿದರು.

ಜೆಡಿಎಸ್‌ ಮುಖಂಡರಾದ ರಾಜಪ್ಪ, ವೆಂಕಟೇಶ್, ಲಕ್ಷ್ಮೀಪತಿ, ಪುನೀತ್‌ಗೌಡ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.