ADVERTISEMENT

27 ಪ್ರೌಢ ಶಾಲೆಗೆ ಕಂಪ್ಯೂಟರ್‌ ಲ್ಯಾಬ್‌

ಕಾಮಗಾರಿ ಗುಣಮಟ್ಟದಲ್ಲಿ ರಾಜಿಯಿಲ್ಲ: ಡಯಟ್ ಪ್ರಾಂಶುಪಾಲ ಜಯರಾಮರೆಡ್ಡಿ

​ಪ್ರಜಾವಾಣಿ ವಾರ್ತೆ
Published 5 ಜನವರಿ 2021, 12:32 IST
Last Updated 5 ಜನವರಿ 2021, 12:32 IST
ತಂತ್ರಜ್ಞಾನ ಬೆಂಬಲಿತ ಕಲಿಕಾ ಕಾರ್ಯಕ್ರಮದಡಿ ಸರ್ಕಾರಿ ಪ್ರೌಢ ಶಾಲೆಗಳಲ್ಲಿನ ಕಂಪ್ಯೂಟರ್ ಲ್ಯಾಬ್‌ ಸಿದ್ಧತೆಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಡಯಟ್ ಪ್ರಾಂಶುಪಾಲ ಕೆ.ಎಂ.ಜಯರಾಮರೆಡ್ಡಿ ಕೋಲಾರದಲ್ಲಿ ಮಂಗಳವಾರ ಮುಖ್ಯ ಶಿಕ್ಷಕರ ಸಭೆ ನಡೆಸಿದರು.
ತಂತ್ರಜ್ಞಾನ ಬೆಂಬಲಿತ ಕಲಿಕಾ ಕಾರ್ಯಕ್ರಮದಡಿ ಸರ್ಕಾರಿ ಪ್ರೌಢ ಶಾಲೆಗಳಲ್ಲಿನ ಕಂಪ್ಯೂಟರ್ ಲ್ಯಾಬ್‌ ಸಿದ್ಧತೆಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಡಯಟ್ ಪ್ರಾಂಶುಪಾಲ ಕೆ.ಎಂ.ಜಯರಾಮರೆಡ್ಡಿ ಕೋಲಾರದಲ್ಲಿ ಮಂಗಳವಾರ ಮುಖ್ಯ ಶಿಕ್ಷಕರ ಸಭೆ ನಡೆಸಿದರು.   

ಕೋಲಾರ: ‘ತಂತ್ರಜ್ಞಾನ ಬೆಂಬಲಿತ ಕಲಿಕಾ ಕಾರ್ಯಕ್ರಮದಡಿ ಜಿಲ್ಲೆಯ 27 ಸರ್ಕಾರಿ ಪ್ರೌಢ ಶಾಲೆಗಳ ಕಂಪ್ಯೂಟರ್‌ ಲ್ಯಾಬ್‌ಗೆ ಅಗತ್ಯವಿರುವ ಸೌಲಭ್ಯಕ್ಕಾಗಿ ಪ್ರತಿ ಶಾಲೆಗೆ ₹ 1 ಲಕ್ಷ ಬಿಡುಗಡೆಯಾಗಿದ್ದು, ಸಲಕರಣೆ ಖರೀದಿ ಹಾಗೂ ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳಿ’ ಎಂದು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್) ಪ್ರಾಂಶುಪಾಲ ಕೆ.ಎಂ.ಜಯರಾಮರೆಡ್ಡಿ ಸೂಚಿಸಿದರು.

ಜಿಲ್ಲೆಯ 27 ಸರ್ಕಾರಿ ಪ್ರೌಢ ಶಾಲೆಗಳ ಕಂಪ್ಯೂಟರ್ ಲ್ಯಾಬ್‌ ಸಿದ್ಧತೆಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಇಲ್ಲಿ ಮಂಗಳವಾರ ನಡೆದ ಮುಖ್ಯ ಶಿಕ್ಷಕರ ಸಭೆಯಲ್ಲಿ ಮಾತನಾಡಿ, ‘ಪರಿಶಿಷ್ಟ ಜಾತಿ ಉಪ ಯೋಜನೆ ಹಾಗೂ ಗಿರಿಜನ ಉಪಯೋಜನೆಗಳಡಿ 19 ಸರ್ಕಾರಿ ಪ್ರೌಢ ಶಾಲೆ, ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ನಿಧಿಯಡಿ 8 ಶಾಲೆಗಳು ಕಂಪ್ಯೂಟರ್ ಲ್ಯಾಬ್ ಸೌಲಭ್ಯ ಪಡೆಯಲಿವೆ’ ಎಂದು ವಿವರಿಸಿದರು.

‘ಸರ್ಕಾರ ಕಂಪ್ಯೂಟರ್‌ ಸರಬರಾಜು ಮಾಡಲಿದೆ. ಅದಕ್ಕೂ ಮುನ್ನ ವಿದ್ಯುತ್ ಸಂಪರ್ಕ, ನೆಲಹಾಸು, ಕಿಟಕಿ, ಬಾಗಿಲುಗಳ ಭದ್ರತಾ ವ್ಯವಸ್ಥೆ, ಪೀಠೋಪಕರಣ, ಗಾಳಿ, ಬೆಳಕು ವ್ಯವಸ್ಥೆ ಒದಗಿಸಲು ಪ್ರತಿ ಶಾಲೆಗೆ ಅನುದಾನ ಬಿಡುಗಡೆ ಮಾಡಲಾಗಿದೆ’ ಎಂದು ತಿಳಿಸಿದರು.

ADVERTISEMENT

‘ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಆಗುತ್ತಿರುವುದರಿಂದ ಗಣಕಯಂತ್ರ ಶಿಕ್ಷಣ ಅತಿ ಮುಖ್ಯವೆನಿಸಲಿದೆ. ಹೀಗಾಗಿ ಶಾಲೆಗಳನ್ನು ಸಜ್ಜುಗೊಳಿಸಲು ಸರ್ಕಾರ ಮುಂದಾಗಿದೆ. ಲ್ಯಾಬ್‌ ಸಿದ್ಧತೆ ಗುಣಮಟ್ಟದಲ್ಲಿ ರಾಜಿಯಿಲ್ಲ’ ಎಂದು ಎಚ್ಚರಿಕೆ ನೀಡಿದರು.

‘ಬಿಡುಗಡೆಯಾಗಿರುವ ಅನುದಾನ ಬಳಕೆಗೆ ಎಸ್‌ಡಿಎಂಸಿ ಅಧ್ಯಕ್ಷರು, ಮುಖ್ಯ ಶಿಕ್ಷಕರು, ಸದಸ್ಯ ಕಾರ್ಯದರ್ಶಿ, ಬಿಇಒ, ಎಸ್‌ಡಿಎಂಸಿ ಇಬ್ಬರು ಸದಸ್ಯರು, ಒಬ್ಬರು ಹಿರಿಯ ಶಿಕ್ಷಕರು, ಇಬ್ಬರು ಶಿಕ್ಷಕರು, ಇಬ್ಬರು ವಿದ್ಯಾರ್ಥಿಗಳನ್ನು ಒಳಗೊಂಡ ಸಮಿತಿ ರಚಿಸಬೇಕು. ಬಳಿಕ ಕ್ರಿಯಾಯೋಜನೆ ರೂಪಿಸಿ ಅನುಮೋದನೆ ಪಡೆದು ಕೆಲಸ ಆರಂಭಿಸಿ’ ಎಂದು ಹೇಳಿದರು.

‘ಪ್ರತಿ ಲ್ಯಾಬ್‌ಗೆ 10 ಕಂಪ್ಯೂಟರ್, 1 ಪ್ರೊಜೆಕ್ಟರ್ ಅಳವಡಿಸಲು ಸ್ಥಳಾವಕಾಶ ಇರುವ ಧೂಳುರಹಿತ, ಮಳೆ ನೀರು ಸೋರುವಿಕೆಯಿಂದ ಮುಕ್ತವಾದ ಕೊಠಡಿ ಸಿದ್ಧತೆ ಮಾಡಿಕೊಳ್ಳಿ. ನೆಲಹಾಸು ಗುಣಮಟ್ಟದಿಂದ ಕೂಡಿರಬೇಕು. ಕಂಪ್ಯೂಟರ್ ಟೇಬಲ್‌, ಚೇರ್‌, ವಿದ್ಯುತ್ ಸಂಪರ್ಕದಲ್ಲೂ ಗುಣಮಟ್ಟ ಕಾಯ್ದುಕೊಳ್ಳಬೇಕು’ ಎಂದು ಕಿವಿಮಾತು ಹೇಳಿದರು.

ನೋಡಲ್ ಅಧಿಕಾರಿ: ‘ಪಾರದರ್ಶಕತೆ ಇದ್ದರೆ ಹೆದರಬೇಕಿಲ್ಲ. ಗೊಂದಲಗಳಿದ್ದರೆ ಪರಿಹರಿಸಿಕೊಳ್ಳಿ. ಪ್ರತಿ ಶಾಲೆಗೂ ಕಂಪ್ಯೂಟರ್ ಲ್ಯಾಬ್ ಸಿದ್ಧತೆ ಕುರಿತು ಉಸ್ತುವಾರಿ ವಹಿಸಲು ನೋಡಲ್ ಅಧಿಕಾರಿ ನೇಮಿಸಲಾಗುತ್ತದೆ. ವಿದ್ಯಾಗಮ ಹಾಗೂ ಎಸ್ಸೆಸ್ಸೆಲ್ಸಿ ತರಗತಿ ನಡೆಯುತ್ತಿದ್ದು, ಹಾಜರಾತಿ ಹೆಚ್ಚಳಕ್ಕೆ ಕ್ರಮ ವಹಿಸಿ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕೃಷ್ಣಮೂರ್ತಿ ಸೂಚನೆ ನೀಡಿದರು.

‘ಕೋವಿಡ್‌ ಆತಂಕದ ಹಿನ್ನೆಲೆಯಲ್ಲಿ ಶಾಲೆಗಳಲ್ಲಿ ಕಡ್ಡಾಯವಾಗಿ ಸುರಕ್ಷತಾ ಮಾರ್ಗಸೂಚಿ ಪಾಲಿಸಬೇಕು. ಜತಗೆ ಸಲಹಾತ್ಮಕ ವೇಳಾಪಟ್ಟಿಯಂತೆ ಕಾರ್ಯ ನಿರ್ವಹಿಸಬೇಕು. ಪ್ರತಿನಿತ್ಯ ಮಕ್ಕಳ ಹಾಜರಾತಿಯನ್ನು ಕಡ್ಡಾಯವಾಗಿ ಸ್ಯಾಟ್ಸ್‌ನಲ್ಲಿ (ಸ್ಟೂಡೆಂಟ್ ಟ್ರ್ಯಾಕಿಂಗ್ ಸಿಸ್ಟಂ) ದಾಖಲಿಸಿ. ಪೋಷಕರಲ್ಲಿ ನಂಬಿಕೆ ಮೂಡಿಸಿ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಶಾಲೆಗೆ ಬರುವಂತೆ ಮಾಡಿ’ ಎಂದರು.

ಇ–ತ್ಯಾಜ್ಯ: ‘ಶಾಲೆಗಳಲ್ಲಿನ ಇ–ತ್ಯಾಜ್ಯದ ಪಟ್ಟಿ ಮಾಡಿ ಕೂಡಲೇ ಬಿಇಒ ಕಚೇರಿಗೆ ಸಲ್ಲಿಸಿ. ಇಲಾಖೆಯಿಂದಲೇ ಬಂದು ಇ–ತ್ಯಾಜ್ಯ ಪಡೆದು ವಿಲೇವಾರಿ ಮಾಡಲಾಗುತ್ತದೆ’ ಎಂದು ಡಯಟ್ ಹಿರಿಯ ಉಪನ್ಯಾಸಕ ರಾಘವೇಂದ್ರ ಹೇಳಿದರು.

ಹಿರಿಯ ಉಪನ್ಯಾಸಕಿ ಉಮಾದೇವಿ, ವಿವಿಧ ಪ್ರೌಢ ಶಾಲೆಗಳ ಮುಖ್ಯ ಶಿಕ್ಷಕರು ಪಾಲ್ಗೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.