ADVERTISEMENT

ಪ್ಯಾಕ್ಸ್‌: 15ಕ್ಕೆ ಗಣಕೀಕೃತ ವಹಿವಾಟು ಆರಂಭ

ಗಣಕೀಕರಣ ಮಹತ್ವಕಾಂಕ್ಷೆ ಯೋಜನೆ: ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಗೋವಿಂದಗೌಡ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2021, 14:05 IST
Last Updated 4 ಆಗಸ್ಟ್ 2021, 14:05 IST
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಗೋವಿಂದಗೌಡ ಬ್ಯಾಂಕ್‌ ವ್ಯಾಪ್ತಿಯ ಪ್ಯಾಕ್ಸ್‌ಗಳ ಗಣಕೀಕರಣ ಪ್ರಕ್ರಿಯೆ ಸಂಬಂಧ ಕೋಲಾರದಲ್ಲಿ ಬುಧವಾರ ಪ್ರಗತಿ ಪರಿಶೀಲನೆ ಸಭೆ ನಡೆಸಿದರು
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಗೋವಿಂದಗೌಡ ಬ್ಯಾಂಕ್‌ ವ್ಯಾಪ್ತಿಯ ಪ್ಯಾಕ್ಸ್‌ಗಳ ಗಣಕೀಕರಣ ಪ್ರಕ್ರಿಯೆ ಸಂಬಂಧ ಕೋಲಾರದಲ್ಲಿ ಬುಧವಾರ ಪ್ರಗತಿ ಪರಿಶೀಲನೆ ಸಭೆ ನಡೆಸಿದರು   

ಕೋಲಾರ: ‘ಬ್ಯಾಂಕ್‌ನ ಮಹತ್ವಕಾಂಕ್ಷೆಯ ಯೋಜನೆಯಾದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ (ಪ್ಯಾಕ್ಸ್‌) ಗಣಕೀಕರಣ ಪ್ರಕ್ರಿಯೆ ಮುಕ್ತಾಯದ ಹಂತದಲ್ಲಿದೆ. ಆ.15ರಂದು ಅವಿಭಜಿತ ಕೋಲಾರ ಜಿಲ್ಲೆಯ 122 ಸೊಸೈಟಿಗಳಲ್ಲಿ ಗಣಕೀಕೃತ ವಹಿವಾಟು ಆರಂಭವಾಗಲಿದೆ’ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿಂದಗೌಡ ಹೇಳಿದರು.

ಬ್ಯಾಂಕ್ ವ್ಯಾಪ್ತಿಯ 188 ಪ್ಯಾಕ್ಸ್‌ಗಳ ಗಣಕೀಕರಣ ಪ್ರಕ್ರಿಯೆ ಸಂಬಂಧ ಇಲ್ಲಿ ಬುಧವಾರ ನಡೆದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿ, ‘ವಿ-ಸಾಫ್ಟ್ ಸಿಬ್ಬಂದಿ ಹಾಗೂ ಬ್ಯಾಂಕ್‌ನ ಪ್ರತಿ ಶಾಖೆಗೆ ನೇಮಕಗೊಂಡಿರುವ ನೋಡಲ್ ಅಧಿಕಾರಿಗಳು ಶೀಘ್ರವೇ ಗಣಕೀಕರಣ ಪ್ರಕ್ರಿಯೆ ಪೂರ್ಣಗೊಳಿಸಿ’ ಎಂದು ತಾಕೀತು ಮಾಡಿದರು.

‘ಸೊಸೈಟಿಗಳ ಗಣಕೀಕರಣ ಸವಾಲಾಗಿ ಸ್ವೀಕರಿಸಿದ್ದೇವೆ. ಪ್ಯಾಕ್ಸ್‌ಗಳಲ್ಲಿ ಪಾರದರ್ಶಕ ವಹಿವಾಟು ನಡೆಯಬೇಕು ಮತ್ತು ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ದೂರದೃಷ್ಟಿಯಿಂದ ಬ್ಯಾಂಕ್ ಆಡಳಿತ ಮಂಡಳಿ ಗಣಕೀಕೃತ ವಹಿವಾಟಿಗೆ ಒತ್ತು ನೀಡುತ್ತಿದೆ. ರೈತರು, ಮಹಿಳಾ ಸಂಘಗಳ ಸದಸ್ಯರಿಗೆ ಹಣ ಸಂದಾಯ ಮತ್ತು ಡ್ರಾ ಬಗ್ಗೆ ತಕ್ಷಣ ಮಾಹಿತಿ ಲಭ್ಯವಾಗುವುದರಿಂದ ದಲ್ಲಾಳಿಗಳ ಹಾವಳಿಗೆ ಕಡಿವಾಣ ಬೀಳಲಿದೆ’ ಎಂದರು.

ADVERTISEMENT

‘ಕೆಲ ಸೊಸೈಟಿ ಸಿಇಒಗಳು ಮೈಗಳ್ಳರಿದ್ದಾರೆ. ಪಡಿತರ ವಿತರಿಸಿ, ಸಾಲ ನೀಡಿದರೆ ತಮ್ಮ ಕೆಲಸ ಮುಗಿಯಿತೆಂದು ಅವರು ಭಾವಿಸಿದ್ದಾರೆ. ಸಾಲ ವಸೂಲಾತಿ, ಪಾವತಿ ವಿವರವನ್ನು ತಮಗೆ ಇಷ್ಟಬಂದಂತೆ ದಾಖಲಿಸುವ ಬಗ್ಗೆ ದೂರುಗಳಿವೆ. ಮುಂದೆ ಅವರ ಆಟ ನಡೆಯಲ್ಲ. ಗಣಕೀಕರಣದಿಂದ ಬುಕ್ ಅಡ್ಜಸ್ಟ್‌ಮೆಂಟ್‌ ವಹಿವಾಟಿಗೆ ಕಡಿವಾಣ ಬೀಳುತ್ತದೆ’ ಎಂದು ಅಭಿಪ್ರಾಯಪಟ್ಟರು.

ನಂಬಿಕೆ ಬಲಗೊಳ್ಳಲಿದೆ: ‘ಗಣಕೀಕರಣ ಪ್ರಕ್ರಿಯೆ ಕುಂಟುತ್ತಾ ಸಾಗಿದೆ. ಇದನ್ನು ಸಹಿಸುವುದಿಲ್ಲ. ಸಿಬ್ಬಂದಿ ಕೊರತೆ ಇದ್ದರೆ ತಿಳಿಸಿ. ಹೆಚ್ಚಿನ ಸಿಬ್ಬಂದಿ ನಿಯೋಜಿಸುತ್ತೇವೆ. ಸೊಸೈಟಿಗಳ ವಹಿವಾಟು ಪ್ರತಿನಿತ್ಯ ಆನ್‌ಲೈನ್‌ನಲ್ಲಿ ದಾಖಲಾದರೆ ಸಹಕಾರಿ ವ್ಯವಸ್ಥೆ ಮೇಲೆ ನಂಬಿಕೆ ಮತ್ತಷ್ಟು ಬಲಗೊಳ್ಳಲಿದೆ. ಗ್ರಾಹಕ ಸ್ನೇಹಿಯಾಗಿ ಸೊಸೈಟಿಗಳ ಆರ್ಥಿಕ ಸ್ಥಿತಿ ಸುಧಾರಿಸಲಿದೆ’ ಎಂದು ಕಿವಿಮಾತು ಹೇಳಿದರು.

‘ಸಹಕಾರಿ ವ್ಯವಸ್ಥೆಯಲ್ಲಿ ಉತ್ತಮ ಕೆಲಸ ಮಾಡಿದರೆ ಆರೋಪಗಳು ಸಹಜ. ಈ ಸವಾಲು ಮೆಟ್ಟಿನಿಂತು ಗಣಕೀಕರಣಕ್ಕೆ ಪ್ರಯತ್ನ ಮುಂದುವರಿಸಿದ್ದೇವೆ. ಉತ್ತಮ ಕೆಲಸದ ಮೂಲಕವೇ ಟೀಕಾಕಾರರಿಗೆ ಉತ್ತರ ಕೊಡುತ್ತೇವೆ’ ಎಂದು ಗುಡುಗಿದರು.

ಬ್ಯಾಂಕ್‌ನ ಸಹಾಯಕ ಪ್ರಧಾನ ವ್ಯವಸ್ಥಾಪಕರಾದ ಶಿವಕುಮಾರ್, ಖಲೀಮ್‌ ಉಲ್ಲಾ, ವಿವಿಧ ಶಾಖೆಗಳ ಪ್ಯಾಕ್ಸ್ ಗಣಕೀಕರಣ ನೋಡಲ್ ಅಧಿಕಾರಿಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.