ADVERTISEMENT

‘ಸಚಿವರು ಹೇಳಿಕೆ ವಾಪಸ್‌ ಪಡೆಯಲಿ’

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2019, 13:31 IST
Last Updated 5 ಸೆಪ್ಟೆಂಬರ್ 2019, 13:31 IST

ಕೋಲಾರ: ‘ಅಬಕಾರಿ ಸಚಿವ ನಾಗೇಶ್ ಅವರು ಮನೆ ಮನೆಗೆ ಮದ್ಯ ವಿತರಿಸುವುದಾಗಿ ಹೇಳಿಕೆ ನೀಡಿರುವುದನ್ನು ಖಂಡಿಸುತ್ತೇನೆ. ಅವರು ರಾಜಕಾರಣಕ್ಕೆ ಹೊಸಬರಾಗಿದ್ದು, ಆವೇಶದಲ್ಲಿ ತಪ್ಪಾಗಿ ಮಾತನಾಡಿದ್ದಾರೆ’ ಎಂದು ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ಹೇಳಿದರು.

ಇಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಭಾರತವನ್ನು ಮದ್ಯ ವ್ಯಸನ ಮುಕ್ತ ದೇಶವಾಗಿ ಮಾಡುವುದು ಮಹಾತ್ಮ ಗಾಂಧೀಜಿಯ ಕನಸಾಗಿತ್ತು. ಅವರ ಕನಸು ನನಸು ಮಾಡಬೇಕಿದೆ. ಸಚಿವ ನಾಗೇಶ್ ಅವರು ನೀಡಿರುವ ಹೇಳಿಕೆ ವಾಪಸ್‌ ಪಡೆಯಬೇಕು’ ಎಂದು ಒತ್ತಾಯಿಸಿದರು.

‘ಸಾರ್ವಜನಿಕವಾಗಿ ಯಾವುದೇ ಹೇಳಿಕೆ ನೀಡುವಾಗ ಪೂರ್ವಾಪರ ಯೋಚಿಸಿ ಮಾತನಾಡಬೇಕು. ಸಚಿವರಿಗೆ ನೀಡಿರುವ ಪ್ರಗತಿಯ ಗುರಿ ಸಾಧನೆ ಮುಖ್ಯವಲ್ಲ. ಸಮಾಜದ ಪ್ರಗತಿ, ಜನರಿಗೆ ಒಳ್ಳೆಯದು ಮಾಡುವುದು ಮುಖ್ಯ’ ಎಂದು ಅಭಿಪ್ರಾಯಪಟ್ಟರು.

ADVERTISEMENT

‘ಜ್ವಲಂತ ಸಮಸ್ಯೆಗಳ ನಡುವೆ ಸಂವಿಧಾನಬದ್ಧವಾಗಿ ಆಡಳಿತ ನಡೆಸಿ ಭಾರತವನ್ನು ಭ್ರಷ್ಟಾಚಾರ ಮುಕ್ತ ರಾಷ್ಟ್ರವಾಗಿಸುವುದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ಧ್ಯೇಯ. ಭ್ರಷ್ಟಾಚಾರಕ್ಕೆ ಯಾವುದೇ ಜಾತಿ, ಮತ, ಧರ್ಮವಿಲ್ಲ. ಭ್ರಷ್ಟ ರಾಜಕಾರಣಿಗಳು ಯಾವುದೇ ಪಕ್ಷದಲ್ಲಿದ್ದರೂ ಅವರ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲು ಬಿಜೆಪಿ ಸರ್ಕಾರ ಬದ್ಧವಾಗಿದೆ. ಇದಕ್ಕೆ ಅಡ್ಡಿಪಡಿಸಿ ವ್ಯವಸ್ಥೆ ಹಾಳು ಮಾಡಬಾರದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.