ADVERTISEMENT

ಹಿರಿಯ ನಾಗರಿಕರ ಸಮೀಕ್ಷೆ ನಡೆಸಿ

ಸಂಸದ ಎಸ್‌. ಮುನಿಸ್ವಾಮಿ ಸೂಚನೆ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2022, 5:12 IST
Last Updated 2 ಅಕ್ಟೋಬರ್ 2022, 5:12 IST
ಕೋಲಾರ ನಗರದಲ್ಲಿ ಶನಿವಾರ ನಡೆದ ವಿಶ್ವ ಹಿರಿಯ ನಾಗರಿಕರ ದಿನಾಚರಣೆಯಲ್ಲಿ ಹಿರಿಯ ನಾಗರಿಕರನ್ನು ಸಂಸದ ಎಸ್‌.ಮುನಿಸ್ವಾಮಿ ಸನ್ಮಾನಿಸಿದರು. ವಿಧಾನ ಪರಿಷತ್‌ ಸದಸ್ಯ ಎಂ.ಎಲ್‌.ಅನಿಲ್‌ ಕುಮಾರ್‌, ಅಧಿಕಾರಿಗಳಾದ ಎಂ.ಮುದ್ದಣ್ಣ, ಮನಿರಾಜಪ್ಪ, ವಕೀಲ ಧನರಾಜ್ ಇದ್ದಾರೆ
ಕೋಲಾರ ನಗರದಲ್ಲಿ ಶನಿವಾರ ನಡೆದ ವಿಶ್ವ ಹಿರಿಯ ನಾಗರಿಕರ ದಿನಾಚರಣೆಯಲ್ಲಿ ಹಿರಿಯ ನಾಗರಿಕರನ್ನು ಸಂಸದ ಎಸ್‌.ಮುನಿಸ್ವಾಮಿ ಸನ್ಮಾನಿಸಿದರು. ವಿಧಾನ ಪರಿಷತ್‌ ಸದಸ್ಯ ಎಂ.ಎಲ್‌.ಅನಿಲ್‌ ಕುಮಾರ್‌, ಅಧಿಕಾರಿಗಳಾದ ಎಂ.ಮುದ್ದಣ್ಣ, ಮನಿರಾಜಪ್ಪ, ವಕೀಲ ಧನರಾಜ್ ಇದ್ದಾರೆ   

ಕೋಲಾರ: ‘ಜಿಲ್ಲೆಯಾದ್ಯಂತ ಹಿರಿಯ ನಾಗರಿಕರ ಪರಿಸ್ಥಿತಿ ಹಾಗೂ ಸಮಸ್ಯೆ ಕುರಿತಂತೆ ಅಧಿಕಾರಿಗಳು ಕಚೇರಿ ಬಿಟ್ಟು ಕ್ಷೇತ್ರಕ್ಕೆ ಹೋಗಿ ಸಮೀಕ್ಷೆ ನಡೆಸಬೇಕು’ ಎಂದು ಸಂಸದ ಎಸ್‌. ಮುನಿಸ್ವಾಮಿ ಅಧಿಕಾರಿಗಳಿಗೆ ತಿಳಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಶನಿವಾರ ಜಿಲ್ಲಾಡಳಿತ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಆಯೋಜಿಸಿದ್ದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

‘ಹಿರಿಯ ನಾಗರಿಕರು ವೃದ್ಧಾಶ್ರಮ, ಅನಾಥಾಶ್ರಮ ರಸ್ತೆಗಳಲ್ಲಿ ಏಕೆ ಇದ್ದಾರೆ ಎಂಬುದರ ಹಿಂದಿನ ಘಟನೆಗಳ ಬಗ್ಗೆ ಮಾಹಿತಿ ಪಡೆದು ಅವರ ರಕ್ಷಣೆ, ಪೋಷಣೆಗೆ ಕೈಜೋಡಿಸಬೇಕು. ಜೊತೆಗೆ ತಂದೆ ತಾಯಿಗೆ ಅಗೌರವ ಕೊಡುವವರಿಗೆ ಅರಿವು ಜಾಗೃತಿ ಮೂಡಿಸಬೇಕಾಗಿದೆ’ ಎಂದು
ಹೇಳಿದರು

ADVERTISEMENT

‘ತಂದೆ, ತಾಯಿಯನ್ನು ಪೋಷಣೆ ಮಾಡದ ಮಕ್ಕಳು ಜೀವನದಲ್ಲಿ ಉದ್ಧಾರವಾಗಿರುವ ಉದಾಹರಣೆ ಇಲ್ಲ. ಪೋಷಕರನ್ನು ಗೌರವದಿಂದ ನೋಡಿಕೊಂಡರೆ ಇಲ್ಲಿಯೇ ಸ್ವರ್ಗ ಕಾಣಬಹುದು. ಕೇಂದ್ರ ಹಾಗೂ ರಾಜ್ಯ ಸರ್ಕಾರ ಹಿರಿಯ ನಾಗರಿಕರ ಕಲ್ಯಾಣಕ್ಕಾಗಿ ಅನೇಕ ಸೌಲಭ್ಯ ಹಾಗೂ ಕಾನೂನು ರಚಿಸಿವೆ. ಅವುಗಳ ಸದುಪಯೋಗ‌ಪಡಿಸಿಕೊಳ್ಳಬೇಕು. ಹಿರಿಯ ನಾಗರಿಕರ ತಾಲ್ಲೂಕು, ಹೋಬಳಿ ಮಟ್ಟದ ಕ್ರೀಡಾಕೂಟ ಸಂಘಟಿಸುವ ಮೂಲಕ ಅವರಿಗೂ ಅತ್ಮಸ್ಥೈರ್ಯ ತುಂಬಬೇಕು’ ಎಂದು ಸಲಹೆ ನೀಡಿದರು.

ವಿಧಾನ ಪರಿಷತ್ ಸದಸ್ಯ ಎಂ.ಎಲ್‌. ಅನಿಲ್ ಕುಮಾರ್ ಮಾತನಾಡಿ, ‘ತಂದೆ, ತಾಯಿಗೆ ಬದುಕಿದ್ದಾಗ ತೋರಿಸದ ಪ್ರೀತಿಯನ್ನು ಸತ್ತಾಗ ತೋರಿಸಿದರೆ ಪ್ರಯೋಜವಿಲ್ಲ. ಹೆತ್ತವರರನ್ನು ನೋಡಿಕೊಳ್ಳಬೇಕು ಎಂಬ ಕಾನೂನು ರೂಪಿಸಿಕೊಳ್ಳುವ ಹಂತಕ್ಕೆ ತಲುಪಿದ್ದೇವೆ. ಹಿರಿಯ ನಾಗರಿಕರ ಅಭಿವೃದ್ಧಿಗೆ ಸರ್ಕಾರ ರೂಪಿಸಿರುವ ಯೋಜನೆಗಳನ್ನು ಪ್ರಾಮಾಣಿಕವಾಗಿ ತಲುಪಿಸಬೇಕು’ ಎಂದರು.

ನೂರು ವರ್ಷ ದಾಟಿರುವ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಹಿರಿಯ ನಾಗರಿಕರನ್ನು ಸನ್ಮಾನ ಮಾಡಲಾಯಿತು. ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಪ್ರಶಸ್ತಿ ನೀಡಿ ಸನ್ಮಾನಿಸ
ಲಾಯಿತು.ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಎಂ. ಮುದ್ದಣ್ಣ, ಜಿಲ್ಲಾ ಅಂಗವಿಕಲರ ಕಲ್ಯಾಣ ಅಧಿಕಾರಿ ಮುನಿರಾಜಪ್ಪ, ನಿವೃತ್ತ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ದ್ಯಾವೀರಪ್ಪ, ವಕೀಲ ಧನರಾಜ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.