ADVERTISEMENT

ಬ್ಲ್ಯಾಕ್‌ಮೇಲ್‌ನಿಂದ ಗೆಲ್ಲಲು ಸಾಧ್ಯವಿಲ್ಲ: ಸಂಸದ ಮುನಿಸ್ವಾಮಿ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2021, 5:08 IST
Last Updated 3 ಡಿಸೆಂಬರ್ 2021, 5:08 IST
ಬಂಗಾರಪೇಟೆ-ಕೆಜಿಎಫ್ ಮುಖ್ಯರಸ್ತೆಯಲ್ಲಿ ಆಯೋಜಿಸಿದ್ದ ಪ್ರಚಾರ ಸಭೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ಅವರು ಉದ್ಘಾಟಿಸಿದರು. ಸಂಸದ ಎಸ್. ಮುನಿಸ್ವಾಮಿ, ಅಭ್ಯರ್ಥಿ ಡಾ.ವೇಣುಗೋಪಾಲ್, ಮಾಜಿ ಶಾಸಕರಾದ ಬಿ.ಪಿ.ವೆಂಕಟಮುನಿಯಪ್ಪ, ವರ್ತೂರು ಪ್ರಕಾಶ್, ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ಇದ್ದರು
ಬಂಗಾರಪೇಟೆ-ಕೆಜಿಎಫ್ ಮುಖ್ಯರಸ್ತೆಯಲ್ಲಿ ಆಯೋಜಿಸಿದ್ದ ಪ್ರಚಾರ ಸಭೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ಅವರು ಉದ್ಘಾಟಿಸಿದರು. ಸಂಸದ ಎಸ್. ಮುನಿಸ್ವಾಮಿ, ಅಭ್ಯರ್ಥಿ ಡಾ.ವೇಣುಗೋಪಾಲ್, ಮಾಜಿ ಶಾಸಕರಾದ ಬಿ.ಪಿ.ವೆಂಕಟಮುನಿಯಪ್ಪ, ವರ್ತೂರು ಪ್ರಕಾಶ್, ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ಇದ್ದರು   

ಬಂಗಾರಪೇಟೆ: ‘ಶಾಸಕ ಎಸ್.ಎನ್.ನಾರಾಯಣಸ್ವಾಮಿ ಅವರಿಗೆ ಚಂದ್ರಾರೆಡ್ಡಿ ದೊಡ್ಡ ಶಕ್ತಿಯಾಗಿದ್ದರು. ಈಗ ಚಂದ್ರಾರೆಡ್ಡಿ ಇಲ್ಲದೆ ಶಾಸಕರು ಹತಾಶರಾಗಿದ್ದಾರೆ. ಗ್ರಾಮ ಪಂಚಾಯಿತಿ ಸದಸ್ಯರನ್ನು ಬ್ಲ್ಯಾಕ್‌ಮೇಲ್‌ ಮಾಡಿ ಕಾಂಗ್ರೆಸ್ ಅಭ್ಯರ್ಥಿಗೇ ಮತ ಹಾಕಬೇಕು ಎಂದು ಬೆದರಿಕೆ ಹಾಕುತ್ತಿದ್ದಾರೆ’ ಎಂದು ಸಂಸದ ಎಸ್.ಮುನಿಸ್ವಾಮಿ ಆರೋಪಿಸಿದರು.

ಬಂಗಾರಪೇಟೆ- ಕೆಜಿಎಫ್ ಮುಖ್ಯರಸ್ತೆಯ ಕೆಸಿಆರ್ ಕಲ್ಯಾಣ ಮಂಟಪದಲ್ಲಿ ವಿಧಾನಪರಿಷತ್ ಚುನಾವಣೆ ಪ್ರಚಾರ ಸಭೆಯಲ್ಲಿ ಬಿಜೆಪಿ ಅಭ್ಯರ್ಥಿ ಡಾ.ವೇಣುಗೋಪಾಲ್ ಪರ ಮತಯಾಚನೆ ಮಾಡಿ ಮಾತನಾಡಿದರು.

‘ಚುನಾವಣೆಯಲ್ಲಿ ಬೂತ್‌ಗಳಲ್ಲಿ ಸಿ.ಸಿ ಟಿ.ವಿ ಕ್ಯಾಮೆರಾ ಅಳವಡಿಸಲಿದ್ದು, ಯಾರಿಗೆ ಮತ ಹಾಕುವಿರಿ ಎನ್ನುವುದು ತಿಳಿಯಲಿದೆ. ವಂಚನೆ ಮಾಡದೆ ಮತ ಚಲಾಯಿಸಿ. ಇಲ್ಲವಾದರೆ ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ ಎಂದು ಶಾಸಕರು ಬೆದರಿಕೆ ಹಾಕುತ್ತಿದ್ದಾರೆ. ಪ್ರಜಾ
ಪ್ರಭುತ್ವದಲ್ಲಿ ಇಂತಹ ಬೆದರಿಕೆಗೆ ಯಾರೂ ಹೆದರುವುದಿಲ್ಲ. ಮತದಾರರನ್ನು ಪ್ರೀತಿಯಿಂದ ಗೆಲ್ಲಬೇಕೆ ವಿನಃ ಬೆದರಿಸಿ ಗೆಲ್ಲಲು ಸಾಧ್ಯವಿಲ್ಲ’ ಎಂದರು.

ADVERTISEMENT

‘ಶಾಸಕರು ಕೆಲಸ ಮಾಡಿಲ್ಲ. ಬಿಜೆಪಿ ಅವಧಿಯಲ್ಲಿ ಅನುಮೋದನೆಯಾಗಿದ್ದ ಕಾಮಗಾರಿಗಳಿಗೆ ನಾಮಫಲಕ ಹಾಕಿಕೊಂಡಿರುವುದಷ್ಟೇ ಅವರ ಕೆಲಸ. ಅಕ್ರಮ ಆಸ್ತಿ ಸಂಪಾದನೆ ಮಾಡಿರುವುದೇ ಅವರ ಸಾಧನೆ’ ಎಂದರು.

‘ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಗೆಲವು ನಿಶ್ಚಿತ. ಶಾಸಕರ ದಬ್ಬಾಳಿಕೆ, ದೌರ್ಜನ್ಯಕ್ಕೆ ತಡೆಯೊಡ್ಡಲು ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿ’ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ಮಾತನಾಡಿ, ‘ಕ್ಷೇತ್ರದಲ್ಲಿನ ಹೊಂದಾಣಿಕೆ ರಾಜಕಾರಣ ಕೊನೆಯಾಗಲಿದೆ. ಮುಂದೆ ಕ್ಷೇತ್ರದಲ್ಲಿ ಬಿಜೆಪಿಬಾವುಟ ಹಾರುವುದು ಖಚಿತ. ಜನರು ಆಡಳಿತ ಸರ್ಕಾರದ ಪರವಿದ್ದರೆ ಮಾತ್ರಅಭಿವೃದ್ಧಿ ಕಾರ್ಯಗಳು ಸುಗಮವಾಗಿ ನಡೆಯಲಿದೆ. ಚುನಾವಣೆ ಬಳಿಕ ಪ್ರತಿ ಪಂಚಾಯಿತಿಗೆ ಖುದ್ದಾಗಿ ಭೇಟಿ ನೀಡಿ ಗ್ರಾಮಗಳ ಸಮಸ್ಯೆ ಆಲಿಸುವೆ. ಉತ್ತಮ ಆಡಳಿತ ಬರಬೇಕಾದರೆ ಬದಲಾವಣೆ ಅಗತ್ಯ’ ಎಂದರು.

ಮಾಜಿ ಶಾಸಕರಾದ ಬಿ.ಪಿ.ವೆಂಕಟಮುನಿಯಪ್ಪ, ವರ್ತೂರು ಪ್ರಕಾಶ್, ವಿಧಾನ ಪರಿಷತ್‌ ಸದಸ್ಯ ವೈ.ಎ.ನಾರಾಯಣಸ್ವಾಮಿ, ಕೆ. ಚಂದ್ರಾರೆಡ್ಡಿ, ಬಿ.ವಿ.ಮಹೇಶ್, ಪುರಸಭೆ ಸದಸ್ಯ ಕಪಾಲಿ ಶಂಕರ್, ಮಹೇಶ್, ಕಮಲ್‌ನಾಥ್, ಶ್ರೀನಿವಾಸ್, ಬೆಗ್ಲಿ ಪ್ರಕಾಶ್, ಹೊಸರಾಯಪ್ಪ, ಅಮರೇಶ್, ನಾಗೇಶ್, ಶಶಿಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.