ADVERTISEMENT

ಹೈಕಮಾಂಡ್‌ ಮಾತನಾಡಿಸಲು ಶಾಸಕರು ದೆಹಲಿಗೆ ಹೋಗಿರಬಹುದು: ಬೈರತಿ ಸುರೇಶ್‌

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2025, 13:33 IST
Last Updated 21 ನವೆಂಬರ್ 2025, 13:33 IST
<div class="paragraphs"><p>ಬೈರತಿ ಸುರೇಶ್‌</p></div>

ಬೈರತಿ ಸುರೇಶ್‌

   

ಕೋಲಾರ: ಹೈಕಮಾಂಡ್‌ ಮಾತನಾಡಿಸಲು ಕೆಲ ಶಾಸಕರು ದೆಹಲಿಗೆ ಹೋಗಿರಬಹುದು. ನಮ್ಮ ಪಕ್ಷದಲ್ಲಿ ಯಾವುದೇ ತೀರ್ಮಾನ ಕೈಗೊಳ್ಳುವುದು ಹೈಕಮಾಂಡ್‌ ಮಾತ್ರ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್‌ ಹೇಳಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಮುಖ್ಯಮಂತ್ರಿಯಾಗಿ ಯಾರಿರಬೇಕು, ಯಾರನ್ನು ಇಳಿಸಬೇಕು ಎಂಬುದನ್ನು ನಿರ್ಧಾರ ಮಾಡುವವರು ದೊಡ್ಡವರು. ನಾನು, ಕೊತ್ತೂರು ಮಂಜುನಾಥ್‌, ರೂಪಕಲಾ ಶಶಿಧರ್‌ ಹೇಳಲು ಆಗುತ್ತದೆಯೇ?’ ಎಂದರು.

ADVERTISEMENT

‘ದೆಹಲಿಗೆ ಹೋಗಿರುವವರನ್ನು ನೀವು (ಮಾಧ್ಯಮದವರು) ಪ್ರಶ್ನಿಸಬೇಕು. ನಾವು ಕೂಡ ಅವರ ರೀತಿ ಶಾಸಕರು ಅಷ್ಟೆ. ಕೆಲಸವಿದ್ದಾಗಲೆಲ್ಲಾ ನಾನೂ ದೆಹಲಿಗೆ ಹೋಗುತ್ತಿರುತ್ತೇನೆ. ಅಲ್ಲದೇ, ಅಭಿವೃದ್ಧಿ ಕೆಲಸ ಮಾಡಿಸಿಕೊಳ್ಳಲು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಬಳಿಯೂ ಹೋಗುತ್ತಿರುತ್ತೇನೆ. ಅದರಲ್ಲಿ ತಪ್ಪೇನಿದೆ’ ಎಂದು ಪ್ರಶ್ನಿಸಿದರು.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಡಿ.ಕೆ.ಶಿವಕುಮಾರ್‌ ಭೇಟಿ ಮಾಡುತ್ತಿರುವ ಕುರಿತ ಪ್ರಶ್ನೆಗೆ, ‘ಖರ್ಗೆ ಅವರ ಭೇಟಿ ವಿಚಾರ ನನಗೆ ಆ ವಿಚಾರ ಗೊತ್ತಿಲ್ಲ. ಸಮಯ ಸಿಕ್ಕಿದರೆ ನಾನು ಕೂಡ ಭೇಟಿ ಮಾಡುತ್ತೇನೆ’ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಕಡೆಯವರು ಹೋಟೆಲೊಂದರಲ್ಲಿ 100 ಕೊಠಡಿ ಕಾಯ್ದಿರಿಸಿರುವ ಮಾಹಿತಿ ಇದೆಯಲ್ಲಾ ಎಂಬ ಪ್ರಶ್ನೆಗೆ, ‘ಅದಕ್ಕೆ ಸಾಕ್ಷಿ ಏನಿದೆ? ನೂರು ಕೊಠಡಿಗಳು ಆ ಹೋಟೆಲ್‌ನಲ್ಲಿ ಇವೆಯೇ? ಇಡೀ ಹೋಟೆಲ್‌ ಅನ್ನೇ ಕಾಯ್ದಿರಿಸಬೇಕಾಗುತ್ತದೆ’ ಎಂದು ಹೇಳಿದರು.

ಸಚಿವ ಸತೀಶ ಜಾರಕಿಹೊಳಿ ನಿವಾಸದಲ್ಲಿ ನಡೆದಿರುವ ಸಭೆ ಕುರಿತು ಪ್ರತಿಕ್ರಿಯಿಸಿ, ‘ಯಾವಾಗ ಸಭೆ ನಡೆಸಿದರು? ನನಗೆ ಆ ವಿಚಾರ ಗೊತ್ತಿಲ್ಲ. ಪರಮೇಶ್ವರ, ಜಾರಕಿಹೊಳಿ ಹಿರಿಯ ಸಚಿವರು. ದೊಡ್ಡವರು ಆಗಾಗ್ಗೆ ಊಟಕ್ಕೆ ಸೇರುತ್ತಿರುತ್ತಾರೆ’ ಎಂದರು.

ನಮ್ಮಲ್ಲಿ ಯಾವುದೇ ಗುಟ್ಟು ಇಲ್ಲ. ನಾನು ಸುಮಾರು ನಾಲ್ಕು ಗಂಟೆಯಿಂದ ಇಲ್ಲಿಯೇ ಕೆಡಿಪಿ ಸಭೆಯಲ್ಲಿಯೇ ಇದ್ದೇನೆ. ಪತ್ನಿ ಹೊರತುಪಡಿಸಿ ಬೇರೆ ಯಾರ ಜೊತೆ ಮೊಬೈಲ್‌ನಲ್ಲಿ ನಾನು ಮಾತನಾಡಿಲ್ಲ. ಊಟ ಮಾಡಿದ್ದೀರಾ ಎಂದು ಕೇಳಲು ಪತ್ನಿ ಕರೆ ಮಾಡಿದ್ದರು ಅಷ್ಟೆ ಎಂದು ನುಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.