ADVERTISEMENT

ಕಲ್ಲು ತೂರಾಟಕ್ಕೆ ಸಂಚು: ಬಂಧನ

​ಪ್ರಜಾವಾಣಿ ವಾರ್ತೆ
Published 9 ಜನವರಿ 2020, 15:32 IST
Last Updated 9 ಜನವರಿ 2020, 15:32 IST

ಕೋಲಾರ: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಬೆಂಬಲಿಸಿ ಬಿಜೆಪಿ ಹಾಗೂ ಭಾರತೀಯ ಹಿತರಕ್ಷಣಾ ವೇದಿಕೆಯು ಇಲ್ಲಿ ಜ.4ರಂದು ಹಮ್ಮಿಕೊಂಡಿದ್ದ ಜನಾಂದೋಲನದ ವೇಳೆ ಕಲ್ಲು ತೂರಾಟ ನಡೆಸಿ ಶಾಂತಿ ಸುವ್ಯವಸ್ಥೆಗೆ ಧಕ್ಕೆ ತರಲು ಸಂಚು ರೂಪಿಸಿದ್ದ ಆರೋಪದ ಮೇಲೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ನಗರದ ನಿವಾಸಿಗಳಾದ ಜಾವಿದ್‌ ಹಾಗೂ ಶಾಹಿದ್‌ ಪಾಷಾ ಬಂಧಿತರು. ಆರೋಪಿಗಳು ಟೇಕಲ್ ರಸ್ತೆಯ ರೈಲು ಹಳಿ ಬಳಿ ಆಟೊಗೆ ಕಲ್ಲು ತುಂಬಿಸಿಕೊಂಡು ಸಿಎಎ ಬೆಂಬಲಿಸಿ ಬಿಜೆಪಿ ನಡೆಸಲು ಉದ್ದೇಶಿಸಿದ್ದ ಮೆರವಣಿಗೆ ಮೇಲೆ ತೂರಾಟ ನಡೆಸಲು ಸಂಚು ರೂಪಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳ ಸಂಚು ತಿಳಿದು ಸ್ಥಳಕ್ಕೆ ಹೋಗುತ್ತಿದ್ದಂತೆ ಅವರಿಬ್ಬರೂ ಆಟೊ ಬಿಟ್ಟು ಪರಾರಿಯಾಗಿದ್ದರು. ಆಟೊ ನೋಂದಣಿ ಸಂಖ್ಯೆ ಆಧರಿಸಿ ಜಾವಿದ್‌ ಮತ್ತು ಶಾಹಿದ್‌ನನ್ನು ಪತ್ತೆ ಮಾಡಿ ಬಂಧಿಸಲಾಯಿತು. ಅವರ ವಿರುದ್ಧ ಕಾನೂನುಬಾಹಿರವಾಗಿ ಗುಂಪುಗೂಡಿದ ಹಾಗೂ ಗಲಭೆ ಸಂಚಿನ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ADVERTISEMENT

ಬಿಜೆಪಿ ಕಾರ್ಯಕರ್ತರು ಹಾಗೂ ಭಾರತೀಯ ಹಿತರಕ್ಷಣಾ ವೇದಿಕೆ ಸದಸ್ಯರು ಸಿಎಎ ಬೆಂಬಲಿಸಿ ಕ್ಲಾಕ್‌ಟವರ್‌ ಮಾರ್ಗವಾಗಿ ಮೆರವಣಿಗೆ ಹೋಗುವ ವೇಳೆ ಮತ್ತೊಂದು ಕೋಮಿನ ಜನರು ಜಾವಿದ್‌ ಮತ್ತು ಶಾಹಿದ್‌ ಜತೆ ಸೇರಿ ಕಲ್ಲು ತೂರಾಟ ನಡೆಸಲು ಯೋಜಿಸಿದ್ದರು. ದೊಣ್ಣೆ ಸೇರಿದಂತೆ ಮಾರಕಾಸ್ತ್ರಗಳನ್ನು ಶೇಖರಿಸಿಕೊಂಡು ಮೆರವಣಿಗೆಯಲ್ಲಿ ಪಾಲ್ಗೊಂಡವರ ವಿರುದ್ಧ ಘೋಷಣೆ ಕೂಗಿ ಹಲ್ಲೆ ನಡೆಸಲು ಸಂಚು ರೂಪಿಸಿದ್ದರು. ನ್ಯಾಯಾಲಯವು ಬಂಧಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.