ADVERTISEMENT

ದೇಗುಲ ಜಾಗ ಕಬಳಿಕೆಗೆ ಷಡ್ಯಂತ್ರ: ಪ್ರತಿಭಟನೆ

ಬಂಗಾರಪೇಟೆ ತಾಲ್ಲೂಕು ಕಚೇರಿ ಮುಂದೆ ಕರ್ನಾಟಕ ದಲಿತ ಸೇನೆ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2022, 4:22 IST
Last Updated 22 ಸೆಪ್ಟೆಂಬರ್ 2022, 4:22 IST
ಕೊಪ್ಪ ಗ್ರಾಮದ ದೇಗುಲದ ಜಾಗ ಉಳಿಸಬೇಕು ಎಂದು ಆಗ್ರಹಿಸಿ ಬಂಗಾರಪೇಟೆ ತಾಲ್ಲೂಕು ಕಚೇರಿ ಮುಂಭಾಗ ಬುಧವಾರ ಕರ್ನಾಟಕ ದಲಿತ ಸೇನೆಯ ಸದಸ್ಯರು ಪ್ರತಿಭಟನೆ ನಡೆಸಿದರು
ಕೊಪ್ಪ ಗ್ರಾಮದ ದೇಗುಲದ ಜಾಗ ಉಳಿಸಬೇಕು ಎಂದು ಆಗ್ರಹಿಸಿ ಬಂಗಾರಪೇಟೆ ತಾಲ್ಲೂಕು ಕಚೇರಿ ಮುಂಭಾಗ ಬುಧವಾರ ಕರ್ನಾಟಕ ದಲಿತ ಸೇನೆಯ ಸದಸ್ಯರು ಪ್ರತಿಭಟನೆ ನಡೆಸಿದರು   

ಬಂಗಾರಪೇಟೆ: ತಾಲ್ಲೂಕಿನ ಕಸಬಾ ಹೋಬಳಿಯ ಕೊಪ್ಪ ಗ್ರಾಮದ ಸರ್ವೆ ನಂ. 189ರಲ್ಲಿ ಆಂಜನೇಯ ದೇಗುಲದ ಹೆಸರಿನಲ್ಲಿ ಇರುವ 5 ಎಕರೆ 11 ಗುಂಟೆ ಜಮೀನನ್ನು ವ್ಯಕ್ತಿಯೊಬ್ಬರು ಕಬಳಿಸಲು ಯತ್ನಿಸುತ್ತಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಕರ್ನಾಟಕ ದಲಿತ ಸೇನೆ ಸದಸ್ಯರು ತಾಲ್ಲೂಕು ಕಚೇರಿ ಮುಂಭಾಗ ಬುಧವಾರ ಪ್ರತಿಭಟನೆ ನಡೆಸಿದರು.

ಆಂಜನೇಯ ದೇಗುಲದ ಹೆಸರಿನಲ್ಲಿ ಹಲವು ವರ್ಷದಿಂದ ಪಹಣಿ ಬರುತ್ತಿದೆ. ಗ್ರಾಮಸ್ಥರು ಆ ಜಾಗದಲ್ಲಿ ದೇಗುಲ ನಿರ್ಮಿಸಿ ಜೀರ್ಣೋದ್ಧಾರ ಮಾಡಲು ಪರಿಶೀಲಿಸಿದಾಗ ಖಾಸಗಿ ವ್ಯಕ್ತಿಯೊಬ್ಬರ ಹೆಸರು ಪಹಣಿಯಲ್ಲಿ ಜಂಟಿಯಾಗಿ ನಮೂದಾಗಿರುವುದು ಕಂಡುಬಂದಿದೆ ಎಂದು ದೂರಿದರು.

ದಾಖಲೆ ಪರಿಶೀಲಿಸಿದಾಗ ಬೆಂಗಳೂರಿನ ಇನಾಂ ಡೆಪ್ಯುಟಿ ಕಮಿಷನರ್ ಕೊಟ್ಟಿರುವ ಇಂಟಿಮೇಷನ್ ಪತ್ರದ ಪ್ರಕಾರ ಖಾಸಗಿ ವ್ಯಕ್ತಿ ಹೆಸರಿಗೆ ಖಾತೆ ಮಾಡಲು ಚಿತ್ತವೆಂದು ಹಕ್ಕು ಬದಲಾವಣೆ ಪುಸ್ತಕದಲ್ಲಿ ನಮೂದಾಗಿದೆ ಎಂದು ಟೀಕಿಸಿದರು.

ADVERTISEMENT

ಆದರೆ, ಖಾಸಗಿ ವ್ಯಕ್ತಿಗೆ ಹುಕ್ಕುಂನಲ್ಲಿ ಮಂಜೂರಾಗಿದ್ದರೆ ಅಂದಿನಿಂದ ಇಂದಿನವರೆಗೂ ಸ್ವಾಧೀನಾನುಭವದಲ್ಲಿ ಯಾರೂ ಇರುವುದಿಲ್ಲ ಏಕೆ ಎಂದು ಪ್ರಶ್ನಿಸಿದರು.

ಗ್ರಾಮಸ್ಥರು ಕಂದಾಯ ಇಲಾಖೆ, ಮುಖ್ಯಮಂತ್ರಿ, ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿ ಮತ್ತು ತಹಶೀಲ್ದಾರ್ ಅವರಿಗೆ ಖಾತೆ ಮಾಡದಂತೆ ಅರ್ಜಿ ಸಲ್ಲಿಸಿರುತ್ತಾರೆ. ಆದರೆ, ಗ್ರಾಮಸ್ಥರ ದೂರನ್ನು ಗಣನೆಗೆ ಪಡೆಯದೆ ಖಾತೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ ಎಂದು ದೂರಿದರು.

ಸದರಿ ಜಮೀನನ್ನು ಸರ್ವೆ ಮಾಡಿ ಸುತ್ತು ಬೇಲಿ ನಿರ್ಮಿಸಬೇಕು. ಸರ್ಕಾರಿ ಜಮೀನನ್ನು ಗ್ರಾಮಕ್ಕೆ ಉಳಿಸಿ ಕೊಡಬೇಕು. ಖಾಸಗಿ ವ್ಯಕ್ತಿ ಖಾತೆ ಮಾಡಿಸಲು ಸಲ್ಲಿಸಿರುವ ಅರ್ಜಿಯನ್ನು ವಜಾ ಮಾಡಬೇಕು. ಗ್ರಾಮದಲ್ಲಿ ಮಹಜರ್ ಮಾಡಿ, ಸಾರ್ವಜನಿಕರ ಹಿತದೃಷ್ಟಿಯನ್ನು ಪರಿಗಣಿಸಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಸೇನೆಯ ಸಂಸ್ಥಾಪಕ ಅಧ್ಯಕ್ಷ ಹುಣಸನಹಳ್ಳಿ ಎನ್. ವೆಂಕಟೇಶ್ ಅವರು, ಉಪ ತಹಶೀಲ್ದಾರ್ ಚಂದ್ರಶೇಖರ್ ಅವರಿಗೆ ಮನವಿ ಸಲ್ಲಿಸಿದರು.

ಸೇನೆಯ ಗೌರವಾಧ್ಯಕ್ಷ ಹುಳದೇನ ಹಳ್ಳಿ ವೆಂಕಟೇಶ್, ಸೇಟ್ಕಾಂಪೌಂಡ್ ಮಾರಿ, ಕೊಂಡೇನಹಳ್ಳಿ ರವಿಕುಮಾರ್, ಕಾರಮಾನಹಳ್ಳಿ ಅಶೋಕ್, ನಾರಾಯಣಸ್ವಾಮಿ, ಗ್ರಾ.ಪಂ. ಸದಸ್ಯ ಶಿವಕುಮಾರ್, ಮುಖಂಡರಾದ ಮುನಿಯಪ್ಪ, ಜಯರಾಮ್, ಕರ್ಣ, ಕುಟ್ಟಿ, ಬಾಬು, ವಟ್ರಕುಪ್ಪ ಅರುಣ್‌ ಕುಮಾರ್, ಅರವಿಂದ ಮಾರ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.