ADVERTISEMENT

ಪೌರ ಕಾರ್ಮಿಕರಿಗೆ ವಸತಿ ಕಾಲೊನಿ ನಿರ್ಮಾಣ: ಜಿಲ್ಲಾಧಿಕಾರಿ ಆರ್‌. ಸೆಲ್ವಮಣಿ ಭರವಸೆ

ಮೂರು ತಿಂಗಳೊಳಗೆ ಜಾಗ ಗುರುತಿಸಲು ಕ್ರಮ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2021, 6:46 IST
Last Updated 24 ಸೆಪ್ಟೆಂಬರ್ 2021, 6:46 IST
ಕೋಲಾರದಲ್ಲಿ ಗುರುವಾರ ನಡೆದ ಪೌರ ಕಾರ್ಮಿಕರ ದಿನಾಚರಣೆಯಲ್ಲಿ ಪೌರ ಕಾರ್ಮಿಕರನ್ನು ಸನ್ಮಾನಿಸಲಾಯಿತು. ಜಿಲ್ಲಾಧಿಕಾರಿ ಆರ್. ಸೆಲ್ವಮಣಿ, ನಗರಸಭೆ ಅಧ್ಯಕ್ಷೆ ಶ್ವೇತಾ ಶಬರೀಷ್‌, ಉಪಾಧ್ಯಕ್ಷ ಪ್ರವೀಣ್ ಗೌಡ, ಪೌರಾಯುಕ್ತ ಎಸ್‌. ಪ್ರಸಾದ್‌, ಸಿಎಂಆರ್ ಶ್ರೀನಾಥ್‌ ಇತರರು ಹಾಜರಿದ್ದರು
ಕೋಲಾರದಲ್ಲಿ ಗುರುವಾರ ನಡೆದ ಪೌರ ಕಾರ್ಮಿಕರ ದಿನಾಚರಣೆಯಲ್ಲಿ ಪೌರ ಕಾರ್ಮಿಕರನ್ನು ಸನ್ಮಾನಿಸಲಾಯಿತು. ಜಿಲ್ಲಾಧಿಕಾರಿ ಆರ್. ಸೆಲ್ವಮಣಿ, ನಗರಸಭೆ ಅಧ್ಯಕ್ಷೆ ಶ್ವೇತಾ ಶಬರೀಷ್‌, ಉಪಾಧ್ಯಕ್ಷ ಪ್ರವೀಣ್ ಗೌಡ, ಪೌರಾಯುಕ್ತ ಎಸ್‌. ಪ್ರಸಾದ್‌, ಸಿಎಂಆರ್ ಶ್ರೀನಾಥ್‌ ಇತರರು ಹಾಜರಿದ್ದರು   

ಕೋಲಾರ: ‘ಹಲವಾರು ವರ್ಷಗಳಿಂದ ಸೇವೆ ಸಲ್ಲಿಸಿರುವ ಪೌರ ಕಾರ್ಮಿಕರಿಗೆ ವಸತಿ ಸೌಲಭ್ಯ ಕಲ್ಪಿಸಿಕೊಡಲು ಜಿಲ್ಲಾಡಳಿತ ನಿರ್ಧರಿಸಿದ್ದು, ಮೂರು ತಿಂಗಳಲ್ಲಿ ಜಾಗ ಗುರ್ತಿಸಲಾಗುವುದು’ ಎಂದು ಜಿಲ್ಲಾಧಿಕಾರಿ ಆರ್‌. ಸೆಲ್ವಮಣಿ ಹೇಳಿದರು.

ನಗರದ ಟಿ. ಚೆನ್ನಯ್ಯ ರಂಗಮಂದಿರದಲ್ಲಿ ಗುರುವಾರ ನಡೆದ ಪೌರ ಕಾರ್ಮಿಕರ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

ಆಧುನಿಕ ತಂತ್ರಜ್ಞಾನ ಬೆಳೆದಂತೆ ಕಸ ವಿಲೇವಾರಿಯಲ್ಲಿ ಹಾಗೂ ವಿಂಗಡಣೆಯಲ್ಲಿ ಮುಂಚೂಣಿಯಲ್ಲಿ ಇರಬೇಕಾದ ನಗರಸಭೆಯು ನಿರೀಕ್ಷಿತ ಮಟ್ಟದಲ್ಲಿ ಸಾಧನೆ ಮಾಡಬೇಕಾಗಿದೆ. ಯಾವುದೇ ವಿಷಯದಲ್ಲಿ ಸೋಲನ್ನು ಸಹಜವಾಗಿ ಪರಿಗಣಿಸಿ ಪ್ರಯತ್ನ ಮುಂದುವರಿಸಿದರೆ ಗೆಲುವು ಖಚಿತವಾಗುತ್ತದೆ ಎಂದರು

ADVERTISEMENT

‘ಪೌರಕಾರ್ಮಿಕರು ಇರುವ ನಗರವು ರೋಗ ಮುಕ್ತವಾಗಿ ಆರೋಗ್ಯಕರವಾಗಿರಬೇಕು. ಕಾರ್ಮಿಕರ ಆರೋಗ್ಯದ ರಕ್ಷಣೆಗೆ ಅಗತ್ಯವಾದ ಪರಿಕರ ಒದಗಿಸುವುದು ನಮ್ಮ ಜವಾಬ್ದಾರಿ’ ಎಂದು ಹೇಳಿದರು.

ನಗರಸಭೆ ಅಧ್ಯಕ್ಷೆ ಶ್ವೇತಾ ಶಬರೀಷ್ ಮಾತನಾಡಿ, 58 ಕಾರ್ಮಿಕರಿಗೆ ನಿವೇಶನದ ಇ-ಸ್ವತ್ತು ಪತ್ರ ವಿತರಿಸುವ ಜೂತೆಗೆ ಅವರಿಗೆ ವಸತಿ ನಿರ್ಮಿಸಿಕೊಳ್ಳಲು ಸರ್ಕಾರದ ಸೌಲಭ್ಯ ಒದಗಿಸಬೇಕು. ಕಾರ್ಮಿಕರ ಮಕ್ಕಳ ಉನ್ನತ ಶಿಕ್ಷಣ ಅಭ್ಯಾಸಕ್ಕೆ ಅಗತ್ಯವಾದ ಸೌಲಭ್ಯ ಕಲ್ಪಿಸಲಾಗುವುದು ಎಂದು ಹೇಳಿದರು.

‘ಕಳೆದ ಒಂದೂವರೆ ವರ್ಷಗಳ ಕೊರೊನಾ ಸಂಕಷ್ಟದಲ್ಲಿ ಪೌರ ಕಾರ್ಮಿಕರ ಸೇವೆ ಅನನ್ಯವಾಗಿದೆ. ನಗರದ ಜನತೆಯ ಆರೋಗ್ಯ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹಲವಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಕಾರ್ಮಿಕರಿಗೆ ಸೇವಾ ಭದ್ರತೆ ಇಲ್ಲದ ಕಾರಣ ನಿವೃತ್ತರಾದ ಸಂದರ್ಭದಲ್ಲಿ ಬರಿಗೈಯಲ್ಲಿ ಮನೆಗೆ ಹೋಗುವುದು ನೋವಿನ ಸಂಗತಿ. ಇಂಥವರಿಗೆ ಸಾಮಾಜಿಕ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಅವರ ಸೇವೆಯನ್ನು ಕಾಯಂಗೊಳಿಸಿ ಸೌಲಭ್ಯ ದೊರಕಿಸಿ ಕೊಡಬೇಕು’ ಎಂದು ಉಪಾಧ್ಯಕ್ಷ ಎನ್‌.ಎಸ್. ಪ್ರವೀಣ್ ಗೌಡ ಮನವಿ ಮಾಡಿದರು.

ಪೌರಾಯುಕ್ತ ಎಸ್. ಪ್ರಸಾದ್ ಪ್ರಾಸ್ತಾವಿಕ ಮಾತನಾಡಿದರು. ಪೌರ ಕಾರ್ಮಿಕರಿಂದ ಸಾಂಸ್ಕತಿಕ ಕಾರ್ಯಕ್ರಮ ನಡೆಯಿತು. ಪೌರ ಕಾರ್ಮಿಕರಿಗಾಗಿ ನಡೆಸಿದ ಕ್ರೀಡೆಗಳಲ್ಲಿ ವಿಜೇತರಿಗೆ ಬಹುಮಾನ, ಮಕ್ಕಳಿಗೆ ಪ್ರತಿಭಾ ಪುರಸ್ಕರ, ನಿವೃತ್ತ ಕಾರ್ಮಿಕರಿಗೆ ಸನ್ಮಾನ, ವಸತಿರಹಿತ ಕಾರ್ಮಿಕರಿಗೆ ನಿವೇಶನದ ಇ-ಖಾತೆ ಪ್ರಮಾಣ ಪತ್ರ ವಿತರಿಸಲಾಯಿತು. ಸಮಾಜ ಸೇವಕ ಸಿಎಂಆರ್ ಶ್ರೀನಾಥ್ ಕಾರ್ಮಿಕರಿಗೆ ಕುಕ್ಕರ್, ರಾಜೇಶ್ ಜುವಲರಿ ಅವರು ಹಾಟ್ ಬಾಕ್ಸ್ ವಿತರಿಸಿದರು.

ಸ್ಥಾಯಿಸಮಿತಿ ಅಧ್ಯಕ್ಷ ವಿ. ಮಂಜುನಾಥ್, ಸದಸ್ಯರಾದ ಅಂಬರೀಷ್, ಮಂಜುನಾಥ್, ರಾಕೇಶ್, ನಾರಾಯಮ್ಮ, ನಾಜೀಯ ಬೇಗಂ, ಅರುಣಮ್ಮ, ಅಪೂರ್ವ, ಪಾವನಾ, ಲಕ್ಷ್ಮಿದೇವಮ್ಮ, ರಾಜೇಶ್, ಯೋಜನಾ ನಿರ್ದೇಶಕ ಶರಣಪ್ಪ, ಕಂದಾಯ ಅಧಿಕಾರಿಗಳಾದ ಚಂದ್ರು, ತ್ಯಾಗರಾಜ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.