
ಬಂಗಾರಪೇಟೆ: ವಿವಿಧತೆಯಲ್ಲಿ ಏಕತೆ ಕೇವಲ ಘೋಷಣೆಯಲ್ಲ, ಅದು ಭಾರತದ ಆತ್ಮ ಮತ್ತು ಸಾಮರಸ್ಯದ ಜೀವನ ಶೈಲಿಯನ್ನು ಪ್ರತಿಬಿಂಬಿಸುತ್ತದೆ ಎಂದು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ.ವಿ.ಮಹೇಶ್ ತಿಳಿಸಿದರು.
ನಗರದ ಕೋಲಾರ ಮುಖ್ಯ ರಸ್ತೆಯಲ್ಲಿರುವ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು, ಭಾರತದ ಸಂವಿಧಾನವು ಎಲ್ಲರಿಗೂ ಸಮಾನ ಹಕ್ಕು ಮತ್ತು ಅವಕಾಶಗಳನ್ನು ನೀಡುತ್ತದೆ. ಇದು ಜಾತಿ, ಧರ್ಮ, ಭಾಷೆ ಅಥವಾ ಲಿಂಗದ ಆಧಾರದ ಮೇಲೆ ತಾರತಮ್ಯವನ್ನು ನಿಷೇಧಿಸುತ್ತದೆ. ನಮ್ಮ ದೇಶದ ಚೈತನ್ಯವೇ ಸಂವಿಧಾನ. ಆ ದಿನದ ಅಂಗವಾಗಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಅವರನ್ನು ಸ್ಮರಿಸಬೇಕೆಂದು ತಿಳಿಸಿದರು.
ಸಂವಿಧಾನ ರಚನಾ ಸಭೆಯು 1949 ನವೆಂಬರ್ 26ರಂದು ಅಂಗೀಕರಿಸಿತು. ಈ ಐತಿಹಾಸಿಕ ದಿನವನ್ನು ಸ್ಮರಿಸುವ ಅಂಗವಾಗಿ 2015ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು 2015 ನವೆಂಬರ್ 26ರಿಂದ ‘ಸಂವಿಧಾನ ದಿನ’ವನ್ನಾಗಿ ಆಚರಿಸುವ ತೀರ್ಮಾನ ಕೈಗೊಳ್ಳಲಾಯಿತು ಎಂದರು.
ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವವೆಂಬ ರಾಷ್ಟ್ರೀಯ ಧ್ಯೇಯಗಳನ್ನು ಸಾಧಿಸುವ ಸಂಕಲ್ಪವನ್ನು ಸಂವಿಧಾನ ಪ್ರತಿಬಿಂಬಿಸುತ್ತದೆ. ದೇಶದ ಎಲ್ಲ ನಾಗರಿಕರಲ್ಲಿ ಸಹೋದರತ್ವ ಮತ್ತು ಬಂಧುತ್ವದ ಭಾವನೆಯನ್ನು ಉತ್ತೇಜಿಸುತ್ತದೆ. ಜೊತೆಗೆ ರಾಷ್ಟ್ರದ ಏಕತೆ ಮತ್ತು ಅಖಂಡತೆಯನ್ನು ಕಾಪಾಡಲು ಒತ್ತು ನೀಡುತ್ತದೆ. ಹಾಗಾಗಿ ಸಾಂವಿಧಾನಿಕ ಕರ್ತವ್ಯಗಳನ್ನು ನಿರ್ವಹಿಸುವ ಮೂಲಕ ನಮ್ಮ ಪ್ರಜಾಪ್ರಭುತ್ವದ ಬೇರುಗಳನ್ನು ಗಟ್ಟಿಗೊಳಿಸೋಣ ಎಂದು ತಿಳಿಸಿದರು.
ಈ ವೇಳೆ ಟಿಎಪಿಸಿಎಂಎಸ್ ನಿರ್ದೇಶಕರಾದ ಎಚ್.ಆರ್.ಶ್ರೀನಿವಾಸ್, ಸೀತಾರಾಮಪ್ಪ, ಗ್ರಾ,ಪಂ ಸದಸ್ಯರಾದ ಚೌಡಪ್ಪ, ಮಂಜುನಾಥ, ಮಂಡಲ ಅಧ್ಯಕ್ಷ ಸಂಪಂಗಿರೆಡ್ಡಿ, ರೈಲ್ವೆ ಮುನಿಸ್ವಾಮಿ, ಬಿಂದು ಮಾಧವ, ಬಿ.ಪಿ.ಮಹೇಶ್, ಗೌತಮ್, ಸುರೇಶ್, ಸುರೇಂದ್ರ, ಮನೋಜ್, ಮಂಜುನಾಥ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.