ADVERTISEMENT

ಜಿಲ್ಲೆಯಲ್ಲಿ ನರೇಗಾ ಕಾಮಗಾರಿ ಮುಂದುವರಿಕೆ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2019, 14:21 IST
Last Updated 3 ಸೆಪ್ಟೆಂಬರ್ 2019, 14:21 IST

ಕೋಲಾರ: ‘ಜಿಲ್ಲೆಯಲ್ಲಿ ವಾಡಿಕೆ ಮಳೆಯಾಗದ ಕಾರಣ ನರೇಗಾ ಯೋಜನೆ ಕಾಮಗಾರಿಗಳನ್ನು ಮುಂದುವರಿಸಿದ್ದು, ರೈತರು ಇದರ ಸದುಪಯೋಗ ಪಡೆಯಬೇಕು’ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ಮನವಿ ಮಾಡಿದರು.

ಇಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ರಾಜ್ಯದ ಕೆಲ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಿರುವ ಹಿನ್ನೆಲೆಯಲ್ಲಿ ಸರ್ಕಾರದ ಆದೇಶದನ್ವಯ ನರೇಗಾ ಕಾಮಗಾರಿಗಳನ್ನು ಸ್ಥಗಿತಗೊಳಿಸಲಾಗಿದೆ. ಆದರೆ, ಜಿಲ್ಲೆಯಲ್ಲಿ ಬರಗಾಲ ಇರುವುದರಿಂದ ನರೇಗಾ ಕಾಮಗಾರಿಗಳಿಗೆ ಯಾವುದೇ ನಿರ್ಬಂಧವಿಲ್ಲ’ ಎಂದರು.

‘ಯಾವುದೇ ಗ್ರಾಮದಲ್ಲಿ ನೀರಿನ ಸಮಸ್ಯೆ ಎದುರಾದರೆ 48 ಗಂಟೆಯಲ್ಲಿ ಬಗೆಹರಿಸಲಾಗುವುದು. ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲು ಅವಕಾಶವಿದ್ದರೆ ಕೊಳವೆ ಬಾವಿ ಕೊರೆಸಲಾಗುವುದು. ನೀರು ಸಿಗುವ ಖಾತರಿ ಇಲ್ಲದಿದ್ದರೆ ಖಾಸಗಿ ಕೊಳವೆ ಬಾವಿ ಬಾಡಿಗೆಗೆ ಪಡೆಯಲಾಗುತ್ತಿದೆ. ಮತ್ತೆ ಕೆಲವೆಡೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ’ ಎಂದು ವಿವರಿಸಿದರು.

ADVERTISEMENT

‘ಜಲಶಕ್ತಿ ಅಭಿಯಾನದಡಿ ಕೇಂದ್ರ ನೋಡಲ್ ಅಧಿಕಾರಿ, ರಾಜ್ಯ ನೋಡಲ್ ಅಧಿಕಾರಿ, ತಾಂತ್ರಿಕ ಅಧಿಕಾರಿ ಹಾಗೂ ಜಿಲ್ಲಾಧಿಕಾರಿ ನೇತೃತ್ವದಲ್ಲಿ ತಲಾ 5 ಕಾಮಗಾರಿ ನಡೆಸಲು ಕ್ರಿಯಾಯೋಜನೆ ಸಿದ್ಧಪಡಿಸಲಾಗಿದೆ. ಮುಳಬಾಗಿಲು ನ್ಯಾಯಾಲಯ ನೂತನ ಕಟ್ಟಡದಲ್ಲಿ ಮಳೆ ಕೊಯ್ಲು ವ್ಯವಸ್ಥೆ ಅಳವಡಿಸಲಾಗುವುದು. ಇದೇ ರೀತಿ ಉಳಿದ ಅಧಿಕಾರಿಗಳೂ ಕಾಮಗಾರಿ ಕೈಗೆತ್ತಿಕೊಂಡು ಜಲ ಮೂಲ ಸಂರಕ್ಷಣೆ ಮಾಡಬೇಕು’ ಎಂದು ಸಲಹೆ ನೀಡಿದರು.

‘ಅಂತರ್ಜಲ ಮಟ್ಟ ಹೆಚ್ಚಿಸುವುದು ಜಲಶಕ್ತಿ ಅಭಿಯಾನದ ಮುಖ್ಯ ಉದ್ದೇಶ. ಈ ಅಭಿಯಾನದಲ್ಲಿ ಕೆರೆ ಒತ್ತುವರಿ ತೆರವು, ಹೂಳು ತೆಗೆಯುವುದು, ರಾಜಕಾಲುವೆ ಪುನಶ್ಚೇತನ ಕಾಮಗಾರಿ ನಡೆಸಲಾಗುವುದು. ಜಾನುವಾರುಗಳಿಗೆ ಮೇವಿನ ಸಮಸ್ಯೆ ಎದುರಾಗಬಾರದೆಂದು ಕೆ.ಸಿ ವ್ಯಾಲಿ ಯೋಜನೆ ನೀರು ಹರಿದಿರುವ ಕೆರೆಗಳ ಸುತ್ತಮುತ್ತ ಹಸಿರು ಮೇವು ಬೆಳೆಯಲು ರೈತರಿಗೆ ಮೇವಿನ ಕಿಟ್‌ ವಿತರಿಸಲಾಗಿದೆ. ಈ ಮೇವನ್ನು ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತದೆ’ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.