ADVERTISEMENT

ಅಭಿವೃದ್ಧಿಗೆ ಸಹಕಾರ ಕ್ಷೇತ್ರದ ಕೊಡುಗೆ ಅಪಾರ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2019, 11:49 IST
Last Updated 15 ಡಿಸೆಂಬರ್ 2019, 11:49 IST
ಕೋಲಾರದಲ್ಲಿ ರಾಜ್ಯ ಸಹಕಾರ ಮಹಾ ಮಂಡಳಿ, ಜಿಲ್ಲಾ ಸಹಕಾರ ಒಕ್ಕೂಟದ ಸಹಾಯೋದಲ್ಲಿ ಇತ್ತೀಚಿಗೆ ನಡೆದ ಪ್ರಬಂಧ ಹಾಗೂ ಚರ್ಚಾ ಸ್ವರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಕೋಲಾರದಲ್ಲಿ ರಾಜ್ಯ ಸಹಕಾರ ಮಹಾ ಮಂಡಳಿ, ಜಿಲ್ಲಾ ಸಹಕಾರ ಒಕ್ಕೂಟದ ಸಹಾಯೋದಲ್ಲಿ ಇತ್ತೀಚಿಗೆ ನಡೆದ ಪ್ರಬಂಧ ಹಾಗೂ ಚರ್ಚಾ ಸ್ವರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.   

ಕೋಲಾರ: ‘ರೈತರ ಅಭಿವೃದ್ಧಿಗೆ ಸಹಕಾರ ಕ್ಷೇತ್ರ ಅಪಾರ ಕೊಡುಗೆ ನೀಡಿದ್ದು, ಜಿಲ್ಲೆಯಲ್ಲಿ ರೈತರ ಆತ್ಮಹತ್ಯೆ ತಡೆಯಲು ಸಾಧ್ಯವಾಗಿದೆ’ ಎಂದು ರಾಜ್ಯ ಸಹಕಾರಿ ಕೃಷಿ ಗ್ರಾಮೀಣಾಭಿವೃದ್ದಿ ಬ್ಯಾಂಕ್ ನಿರ್ದೇಶಕ ಸೊಣ್ಣೇಗೌಡ ಅಭಿಪ್ರಾಯಪಟ್ಟರು.

ರಾಜ್ಯ ಸಹಕಾರ ಮಹಾ ಮಂಡಳಿ, ಜಿಲ್ಲಾ ಸಹಕಾರ ಒಕ್ಕೂಟದ ಸಹಾಯೋದಲ್ಲಿ ಇತ್ತೀಚಿಗೆ ಪ್ರೌಢಶಾಲಾ ಹಾಗೂ ಪದವಿ ಪೂರ್ವ ಕಾಲೇಜು ಹಂತದ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಸಹಕಾರ ಕುರಿತ ಪ್ರಬಂಧ ಹಾಗೂ ಚರ್ಚಾ ಸ್ವರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿ ಮಾತನಾಡಿದರು.

‘ಹಾಲು ಒಕ್ಕೂಟವೂ ಸಹಕಾರಿ ಸಂಸ್ಥೆಯಾಗಿದ್ದು, ರೈತರ ಬದುಕು ಹಸನಾಗಿಸಿದೆ. ಕೃಷಿ ಭೂಮಿ ಇಲ್ಲದವರು ಹೈನೋದ್ಯಮದಿಂದ ಬದುಕು ರೂಪಿಸಿಕೊಂಡಿದ್ದಾರೆ. ಆತ್ಮಹತ್ಯೆ ತಡೆಗೆ ಸಹಕಾರ ರಂಗ ನೀಡುತ್ತಿರುವ ಬಡ್ಡಿರಹಿತ ಸಾಲ ಸೌಲಭ್ಯವೂ ಒಂದು ಪ್ರಮುಖ ಕಾರಣವಾಗಿದೆ’ ಎಂದರು.

ADVERTISEMENT

‘ಸಹಕಾರ ಕ್ಷೇತ್ರಕ್ಕೆ ಸಂಬಂಧಿಸಿದ ವಿಷಯಗಳನ್ನು ಪಠ್ಯ ಪುಸ್ತಕದಲ್ಲಿ ಸರ್ಕಾರ ಅಳವಡಿಸುವ ಮೂಲಕ ಮಕ್ಕಳಿಗೆ ಅರಿವು ಮೂಡಿಸಬೇಕು. ಕಟ್ಟಕಡೆಯ ಕುಟುಂಬದ ಸದಸ್ಯರು ಸಹಕಾರಿ ಸಂಘದಲ್ಲಿ ಸದಸ್ಯತ್ವ ಪಡೆದುಕೊಳ್ಳಬೇಕು. ಇದರಿಂದ ಸ್ವಾವಲಂಬನೆ ಬದುಕಿಗೆ ಸಾಲ ಸೌಲಭ್ಯಗಳ ಕುರಿತು ಪೋಷಕರಿಗೆ ಮಾಹಿತಿ ನೀಡಬೇಕು’ ಎಂದು ಸಲಹೆ ನೀಡಿದರು.

ಸಹಕಾರಿ ಯೂನಿಯನ್ ನಿರ್ದೇಶಕ ರುದ್ರಸ್ವಾಮಿ ಮಾತನಾಡಿ, ‘ಸಹಕಾರಿ ಕ್ಷೇತ್ರದಿಂದ ಸಮಾಜದಲ್ಲಿ ಬದಲಾವಣೆಯಾಗಿದೆ. ಹಿಂದೆ ಡಿಸಿಸಿ ಬ್ಯಾಂಕ್ ಸಂಕಷ್ಟಕ್ಕೀಡಾದಾಗ ಜಿಲ್ಲೆಯ ರೈತರು, ಮಹಿಳೆಯರು ಸೌಕರ್ಯಗಳಿಂದ ವಂಚಿತರಾಗಿದ್ದರು’ ಎಂದರು.

ಪಿಯು ಹಂತದ ಚರ್ಚಾಸ್ವರ್ಧೆಯಲ್ಲಿ ನಗರದ ವಿದ್ಯಾಜ್ಯೋತಿ ಪಿಯು ಕಾಲೇಜಿನ ಅಮಿತ್ ಪ್ರಥಮ, ಇದೇ ಕಾಲೇಜಿನ ನಿದನೂರೀನ್ ದ್ವಿತೀಯ ಹಾಗೂ ಕೆಜಿಎಫ್‌ನ ಭಗವಾನ್ ಮಹಾವೀರಜೈನ್ ಕಾಲೇಜಿನ ಎ.ದರ್ಶನ್ ತೃತೀಯ ಸ್ಥಾನ ಪಡೆದುಕೊಂಡರು.

ಪ್ರೌಢಶಾಲಾ ಹಂತದ ಪ್ರಬಂಧ ಸ್ವರ್ಧೆಯಲ್ಲಿ ಮುಳಬಾಗಿಲು ತಾಲ್ಲೂಕು ಉತ್ತನೂರಿನ ಎಂ.ವಿ.ಕೃಷ್ಣಪ್ಪ ಪ್ರೌಢಶಾಲೆಯ ಬಿ.ಚಂದನಾ ಪ್ರಥಮ, ಬಂಗಾರಪೇಟೆ ಜೈನ್ ಶಾಲೆಯ ವಿ.ವಿಕಾಸ್ ದ್ವಿತೀಯ ಹಾಗೂ ಶ್ರೀನಿವಾಸಪುರ ಮೊರಾರ್ಜಿ ದೇಸಾಯಿ ಶಾಲೆಯ ವಿ.ಶ್ರೇಯಾ ತೃತೀಯ ಸ್ಥಾನ ಪಡೆದುಕೊಂಡರು.

ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ವೆಂಕಟಸ್ವಾಮಿ, ಯೂನಿಯನ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಎಂ.ಭಾರತಿ, ನಿರ್ದೇಶಕರಾದ ಕೆ.ಎಂ.ವೆಂಕಟೇಶಪ್ಪ, ಅಶ್ವಥ್, ಸಹಕಾರ ಶಿಕ್ಷಣಾಧಿಕಾರಿ ಕೆ.ಮಲ್ಲಯ್ಯ, ಲೆಕ್ಕಪರಿಶೋಧಕ ಮುನಿರಾಜು, ರವಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.