ADVERTISEMENT

ಕೋಲಾರ: ಜಿಲ್ಲೆಯಲ್ಲಿ ಕೊರೊನಾ ಸೋಂಕಿತನ ಓಡಾಟ

ಧರ್ಮ ಪ್ರಚಾರಕ್ಕೆ ಬಂದಿದ್ದ ಬಯಲು ನರಸಾಪುರದ ವ್ಯಕ್ತಿ: ಆಘಾತಕಾರಿ ಸಂಗತಿ ಬಯಲು

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2020, 15:27 IST
Last Updated 7 ಏಪ್ರಿಲ್ 2020, 15:27 IST

ಕೋಲಾರ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಬಯಲು ನರಸಾಪುರದಲ್ಲಿ ಪತ್ತೆಯಾಗಿರುವ ಕೊರೊನಾ ಸೋಂಕಿತ ವ್ಯಕ್ತಿಯೊಬ್ಬ ಕೋಲಾರ ತಾಲ್ಲೂಕಿನ ವಿವಿಧೆಡೆ ಸಂಚರಿಸಿರುವ ಆಘಾತಕಾರಿ ಸಂಗತಿ ಬಯಲಾಗಿದ್ದು, ಜಿಲ್ಲೆಯ ಜನ ಆತಂಕಗೊಂಡಿದ್ದಾರೆ.

ಬಯಲು ನರಸಾಪುರದ ಆ ವ್ಯಕ್ತಿ ದೆಹಲಿಯ ನಿಜಾಮುದ್ದೀನ್‌ ಪ್ರದೇಶದಲ್ಲಿನ ತಬ್ಲೀಗ್‌ ಜಮಾತ್‌ ಕೇಂದ್ರದಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡಿದ್ದರು. ನಂತರ ದೆಹಲಿಯಿಂದ ಹಿಂದಿರುಗಿದ್ದ ಅವರನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆ ಆರೋಗ್ಯ ಇಲಾಖೆ ಅಧಿಕಾರಿಗಳು ಪತ್ತೆ ಹಚ್ಚಿ ಕಫಾ ಮತ್ತು ರಕ್ತ ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಿದ್ದರು.

ಆ ವ್ಯಕ್ತಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಅವರನ್ನು ಸದ್ಯ ಬೆಂಗಳೂರಿನ ರಾಜೀವ್‌ಗಾಂಧಿ ಎದೆ ರೋಗಿಗಳ ಆಸ್ಪತ್ರೆಯ ಪ್ರತ್ಯೇಕ ನಿಗಾ ಘಟಕದಲ್ಲಿ (ಕ್ವಾರಂಟೈನ್) ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ADVERTISEMENT

ಬಯಲು ನರಸಾಪುರ ಗ್ರಾಮವು ಜಿಲ್ಲೆಯ ಗಡಿಯಂಚಿನಲ್ಲಿದ್ದು, ಕೊರೊನಾ ಸೋಂಕಿತನಾಗಿರುವ ಆ ವ್ಯಕ್ತಿ ದೆಹಲಿಯಿಂದ ಹಿಂದಿರುಗಿದ ಬಳಿಕ ಧರ್ಮ ಪ್ರಚಾರಕ್ಕಾಗಿ ಕೋಲಾರ ತಾಲ್ಲೂಕಿನ ವೇಮಗಲ್‌, ನರಸಾಪುರ, ಕ್ಯಾಲನೂರು ಹಾಗೂ ಸುತ್ತಮುತ್ತಲ ಗ್ರಾಮಗಳ ಮಸೀದಿಗೆ ಭೇಟಿ ಕೊಟ್ಟಿರುವ ಸಂಗತಿ ಪೊಲೀಸರ ತನಿಖೆಯಿಂದ ಖಚಿತವಾಗಿದೆ.

ಆ ಸೋಂಕಿತನ ಸಂಪರ್ಕಕ್ಕೆ ಬಂದಿರುವ ವ್ಯಕ್ತಿಗಳ ಪತ್ತೆಗಾಗಿ ಪೊಲೀಸರು ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳು ನರಸಾಪುರ ಸುತ್ತಮುತ್ತಲ ಗ್ರಾಮಗಳಲ್ಲಿ ಹುಡುಕಾಟ ಆರಂಭಿಸಿದ್ದಾರೆ. ಈವರೆಗೆ ಜಿಲ್ಲೆಯಲ್ಲಿ ಕೊರೊನಾ ಸೋಂಕು ಪ್ರಕರಣ ಪತ್ತೆಯಾಗಿರಲಿಲ್ಲ. ಇದೀಗ ಬಯಲು ನರಸಾಪುರದ ವ್ಯಕ್ತಿಯಿಂದ ಜಿಲ್ಲೆಯ ಜನರಿಗೂ ಸೋಂಕು ಹರಡಿರುವ ಶಂಕೆ ವ್ಯಕ್ತವಾಗಿದೆ.

ಸೋಂಕು ತಗುಲಿಲ್ಲ: ಧರ್ಮ ಪ್ರಚಾರಕ್ಕಾಗಿ ಬಂಗಾರಪೇಟೆ ತಾಲ್ಲೂಕಿನ ಭೀಮಗಾನಹಳ್ಳಿ ಮತ್ತು ಗೊಲ್ಲಹಳ್ಳಿಗೆ ಬಂದಿದ್ದ 18 ಮಂದಿಗೆ ಕೊರೊನಾ ಸೋಂಕು ತಗುಲಿಲ್ಲವೆಂದು ಮಂಗಳವಾರ ವೈದ್ಯಕೀಯ ವರದಿ ಬಂದಿದೆ. ಮಹಾರಾಷ್ಟ್ರ, ದೆಹಲಿಯಿಂದ ಬಂದಿದ್ದ ಈ 18 ಮಂದಿ ಹಾಗೂ ಇವರ ಜತೆ ಸಂಪರ್ಕದಲ್ಲಿದ್ದ ಸ್ಥಳೀಯ ಇಬ್ಬರ ಕಫಾ ಮತ್ತು ರಕ್ತ ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಇದೀಗ ಈ 20 ಮಂದಿಗೆ ಸೋಂಕು ತಗುಲಿಲ್ಲ ಎಂಬುದು ವೈದ್ಯಕೀಯ ಪರೀಕ್ಷೆಯಿಂದ ದೃಢಪಟ್ಟಿದೆ.

ಇವರ ಜತೆಗೆ ಕೋಲಾರದ ಪ್ರಶಾಂತ್‌ನಗರ ಮಸೀದಿಗೆ ಬಂದಿದ್ದ ಜಮ್ಮು ಮತ್ತು ಕಾಶ್ಮೀರದ 10 ಮಂದಿ, ಮಾಲೂರಿನ ಮಸೀದಿಗೆ ಬಂದಿದ್ದ ಗುಜರಾತ್‌ನ 11 ಮಂದಿ ಹಾಗೂ ಮಂಡ್ಯದ ನಾಗಮಂಗಲಕ್ಕೆ ಹೋಗಿ ಬಂದಿದ್ದ ಬಂಗಾರಪೇಟೆ ತಾಲ್ಲೂಕಿನ ವಟ್ರಕುಂಟೆ ಗ್ರಾಮದ 6 ಮಂದಿಯ ವೈದ್ಯಕೀಯ ಪರೀಕ್ಷೆ ಪೂರ್ಣಗೊಂಡಿದ್ದು, ಇವರಿಗೆ ಕೊರೊನಾ ಸೋಂಕು ಇಲ್ಲ ಎಂಬುದು ಖಚಿತವಾಗಿದೆ. ಆದರೂ ಮುನ್ನೆಚ್ಚರಿಕೆ ಕ್ರಮವಾಗಿ ಈ 47 ಮಂದಿಯನ್ನು ಪ್ರತ್ಯೇಕ ನಿಗಾದಲ್ಲಿ (ಕ್ವಾರಂಟೈನ್‌) ಇರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.