ADVERTISEMENT

ಕೋಲಾರ: ಗ್ರಾಮೀಣ ಆರೋಗ್ಯಕ್ಕೆ ಅನಾರೋಗ್ಯ!

ಹಳ್ಳಿ ಹಳ್ಳಿಗೂ ಕಾಲಿಟ್ಟ ಕೊರೊನಾ ವೈರಾಣು: ಜನರು ಹೈರಾಣು

ಜೆ.ಆರ್.ಗಿರೀಶ್
Published 4 ಜೂನ್ 2021, 1:43 IST
Last Updated 4 ಜೂನ್ 2021, 1:43 IST
ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕಿನ ಲಕ್ಕೂರು ಗ್ರಾಮದಲ್ಲಿ ಜನರು ಕೋವಿಡ್‌ ಲಸಿಕೆಗಾಗಿ ಆಸ್ಪತ್ರೆ ಎದುರು ಕಾದು ಕುಳಿತಿರುವುದು
ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕಿನ ಲಕ್ಕೂರು ಗ್ರಾಮದಲ್ಲಿ ಜನರು ಕೋವಿಡ್‌ ಲಸಿಕೆಗಾಗಿ ಆಸ್ಪತ್ರೆ ಎದುರು ಕಾದು ಕುಳಿತಿರುವುದು   

ಕೋಲಾರ: ಜಿಲ್ಲೆಯ ಗ್ರಾಮೀಣ ಭಾಗಕ್ಕೆ ನುಸುಳಿರುವ ‘ಕೋವಿಡ್‌’ ಮಹಾಮಾರಿ ಜನರ ಬದುಕನ್ನು ನರಕ ಸದೃಶವಾಗಿದೆ. ಹಳ್ಳಿ ಹಳ್ಳಿಗೂ ಕಾಲಿಟ್ಟಿರುವ ಕೊರೊನಾ ವೈರಾಣು ರೋಗಗ್ರಸ್ತ ಗ್ರಾಮೀಣ ಆರೋಗ್ಯ ವ್ಯವಸ್ಥೆಯ ಸತ್ಯ ದರ್ಶನ ಮಾಡಿಸುತ್ತಿದೆ.

ಜಿಲ್ಲೆಯಲ್ಲಿ ನಗರ ಪ್ರದೇಶಕ್ಕೆ ಹೋಲಿಸಿದರೆ ಹಳ್ಳಿಗಳಲ್ಲೇ ಕೊರೊನಾ ಸೋಂಕು ಹರಡುವಿಕೆ ಪ್ರಮಾಣ ಹೆಚ್ಚಿದ್ದು, ಗ್ರಾಮೀಣ ಭಾಗದ ಯಾವುದೇ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೋದರೂ ಕೋವಿಡ್‌ ಲಸಿಕೆಗಾಗಿ ಜನರು ಸಾಲುಗಟ್ಟಿ ನಿಂತಿರುವ ದೃಶ್ಯವೇ ಎದುರಾಗುತ್ತದೆ. ಜನರು ಕೋವಿಡ್‌ ಪರೀಕ್ಷೆಗೆ ದಿನಗಟ್ಟಲೇ ಕಾಯುವ ಪರಿಸ್ಥಿತಿಯಿದೆ.

ಗ್ರಾಮೀಣ ಭಾಗದಲ್ಲಿ ಆರೋಗ್ಯ ಸೇವೆಯ ವಸ್ತುಸ್ಥಿತಿ ತಿಳಿಯಲು ಹೊರಟ ‘ಪ್ರಜಾವಾಣಿ’ಗೆ ಆಸ್ಪತ್ರೆಗಳ ಅವ್ಯವಸ್ಥೆಯ ದಿಗ್ದದರ್ಶನವಾಯಿತು. ಸೋಂಕಿನ ಪ್ರಮಾಣ ಇಳಿಕೆಯಾಗಿದೆ ಎಂದು ತೋರಿಸಲು ಆರೋಗ್ಯ ಇಲಾಖೆಯು ಕೋವಿಡ್‌ ಪರೀಕ್ಷೆ ಪ್ರಮಾಣವನ್ನೇ ಕಡಿಮೆ ಮಾಡಿ ‘ಕಳ್ಳಾಟ’ವಾಡುತ್ತಿರುವ ಸಂಗತಿ ಬಯಲಾಯಿತು.

ADVERTISEMENT

ವೈದ್ಯಕೀಯ ಸಿಬ್ಬಂದಿ ಕೊರತೆ, ವಿದ್ಯುತ್‌, ಸ್ವಚ್ಛತೆ, ಕುಡಿಯುವ ನೀರು, ಶೌಚಾಲಯ, ಔಷಧ, ಮಾತ್ರೆ ಕೊರತೆ ಸೇರಿದಂತೆ ಆಸ್ಪತ್ರೆಗಳಲ್ಲಿ ಸಮಸ್ಯೆಗಳ ಸರಮಾಲೆಯೇ ಕಂಡುಬಂತು. ಶಿಥಿಲಾವಸ್ಥೆಯ ಕಟ್ಟಡಗಳಲ್ಲಿ ವೈದ್ಯಕೀಯ ಸಿಬ್ಬಂದಿ ಪ್ರತಿನಿತ್ಯ ಜೀವ ಭಯದಲ್ಲೇ ಕರ್ತವ್ಯ ನಿರ್ವಹಿಸುತ್ತಿರುವುದು ಗೋಚರಿಸಿತು.

‘ತಾಯಿಗೆ 2ನೇ ಡೋಸ್‌ ಕೋವಿಡ್‌ ಲಸಿಕೆ ಹಾಕಿಸಲು ಬಂದಿದ್ದೇನೆ. ಆಸ್ಪತ್ರೆ ಸಿಬ್ಬಂದಿ ಲಸಿಕೆ ನೀಡಿಕೆ ಬಗ್ಗೆ ಸರಿಯಾಗಿ ಮಾಹಿತಿ ಕೊಡುತ್ತಿಲ್ಲ. ಲಸಿಕೆ ಬಂದರೆ ಮಧ್ಯಾಹ್ನ ಕೊಡುತ್ತೇವೆ ಎಂದು ವೈದ್ಯರು ಹೇಳುತ್ತಾರೆ. ಜನ ಸುಮ್ಮನೆ ಆಸ್ಪತ್ರೆ ಬಳಿ ಬಂದು ಲಸಿಕೆಗಾಗಿ ದಿನವಿಡೀ ಕಾಯುವಂತಾಗಿದೆ’ ಎಂದು ಮಾಲೂರು ತಾಲ್ಲೂಕಿನ ಇರಬನಹಳ್ಳಿಯ ವಸಂತರೆಡ್ಡಿ ಅಸಹನೆ ವ್ಯಕ್ತಪಡಿಸಿದರು.

ಲಸಿಕೆ ಪೂರೈಕೆಯಾಗುತ್ತಿಲ್ಲ: ‘ತಾಲ್ಲೂಕಿನಲ್ಲಿ ನರಸಾಪುರ ಮತ್ತು ಮಾಲೂರು ಕೈಗಾರಿಕಾ ಪ್ರದೇಶ ಇರುವುದರಿಂದ ಜನರ ಓಡಾಟ ಹೆಚ್ಚಿದೆ. ಕಾರ್ಮಿಕರು ಕೆಲಸಕ್ಕಾಗಿ ಪ್ರತಿನಿತ್ಯ ಬೆಂಗಳೂರಿನಿಂದ ಕೈಗಾರಿಕೆಗಳಿಗೆ ಬಂದು ಹೋಗುತ್ತಾರೆ. ಇದರಿಂದ ಕೈಗಾರಿಕಾ ಪ್ರದೇಶ ಮತ್ತು ಅಕ್ಕಪಕ್ಕದ ಗ್ರಾಮಗಳಲ್ಲಿ ಸೋಂಕು ಹರಡುವಿಕೆ ಹೆಚ್ಚಿದೆ’ ಎಂದು ದೊಡ್ಡಶಿವಾರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದಾಧಿಕಾರಿ ಡಾ.ಮಂಜುಳಾ ವಸ್ತುಸ್ಥಿತಿ ವಿವರಿಸಿದರು.

‘ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆಯಿದ್ದು, ಹಳ್ಳಿಗಳಲ್ಲಿ ಮನೆ ಮನೆ ಸರ್ವೆಗೆ ಸಮಸ್ಯೆಯಾಗಿದೆ. ಸಿಬ್ಬಂದಿ ರಜೆ ಪಡೆಯದೆ ಕಾರ್ಯ ನಿರ್ವಹಿಸುತ್ತಿದ್ದು, ಕೆಲಸದ ಒತ್ತಡ ಹೆಚ್ಚಿದೆ. ಆಸ್ಪತ್ರೆಯ ಬೇಡಿಕೆಗೆ ತಕ್ಕಂತೆ ಕೋವಿಡ್‌ ಲಸಿಕೆ ಪೂರೈಕೆಯಾಗುತ್ತಿಲ್ಲ. ಇದರಿಂದ ಜನರು ಆಕ್ರೋಶಗೊಳ್ಳುತ್ತಿದ್ದು, ಗೊಂದಲ ಸೃಷ್ಟಿಯಾಗುತ್ತಿದೆ’ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ಸೋಂಕಿತರ ಓಡಾಟ: ‘ಕೋವಿಡ್‌ ಮೊದಲ ಅಲೆಯಲ್ಲಿ ಸೋಂಕಿತರ ಮನೆ ಮುಂದೆ ನೋಟಿಸ್‌ ಅಂಟಿಸಿ, ಸೋಂಕಿತರ ಕೈಗೆ ಸೀಲ್‌ ಹಾಕಲಾಗುತ್ತಿತ್ತು. ಸೋಂಕಿತರು ಹೆಚ್ಚಿರುವ ಪ್ರದೇಶವನ್ನು ಕಂಟೈನ್‌ಮೆಂಟ್‌ ವಲಯವಾಗಿ ಮಾಡಲಾಗುತ್ತಿತ್ತು. ಆದರೆ, ಈಗ ಆರೋಗ್ಯ ಇಲಾಖೆ ಈ ಕೆಲಸ ಮಾಡುತ್ತಿಲ್ಲ. ಸೋಂಕಿತರು ಮನೆಯಿಂದ ಹೊರ ಬಂದು ಗ್ರಾಮದಲ್ಲೆಲ್ಲಾ ಮನಸೋಇಚ್ಛೆ ಓಡಾಡುತ್ತಿದ್ದಾರೆ. ಇದು ಸೋಂಕು ಹೆಚ್ಚಳಕ್ಕೆ ದಾರಿ ಮಾಡಿಕೊಡುತ್ತಿದೆ’ ಎಂದು ಲಕ್ಕೂರು ಗ್ರಾಮಸ್ಥ ಸಂತೋಷ್‌ ಬಾಬು ಅಸಮಾಧಾನ ಹೊರಹಾಕಿದರು.

‘ಲಸಿಕೆಗೆ ಸರ್ಕಾರ ವಿಧಿಸಿರುವ ಕೆಲ ಷರತ್ತು ಅಸಂಬದ್ಧವಾಗಿವೆ. ಕೂಲಿ ಕಾರ್ಮಿಕರಿಗೆ ಮೊದಲ ಆದ್ಯತೆಯಾಗಿ ಲಸಿಕೆ ನೀಡಬೇಕೆಂದು ಸರ್ಕಾರ ಹೇಳಿದೆ. ಕೂಲಿ ಕಾರ್ಮಿಕರು ಲಸಿಕೆ ಪಡೆಯಲು ಹೋದರೆ ವೈದ್ಯರು ಗುರುತಿನ ಚೀಟಿ ಕೇಳುತ್ತಾರೆ. ಸರ್ಕಾರ ಕೂಲಿ ಕಾರ್ಮಿಕರಿಗೆ ಗುರುತಿನ ಚೀಟಿಯನ್ನೇ ಕೊಟ್ಟಿಲ್ಲ. ಪರಿಸ್ಥಿತಿ ಹೀಗಿರುವಾಗ ಅವರು ಲಸಿಕೆ ಪಡೆಯುವುದು ಹೇಗೆ?’ ಎಂದು ಲಕ್ಕೂರು ಗ್ರಾ.ಪಂ ಅಧ್ಯಕ್ಷ ಚೇತನ್‌ಗೌಡ ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.