ADVERTISEMENT

ಹಣ ಹೊಡೆದವರಿಗೆ ನೆಮ್ಮದಿ ಇಲ್ಲ: ನ್ಯಾ. ಸಂತೋಷ ಹೆಗ್ಡೆ

ಭ್ರಷ್ಟರ ವಿರುದ್ಧ ಸಾರ್ವಜನಿಕರು ಹೋರಾಡಬೇಕು

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2025, 3:53 IST
Last Updated 28 ಡಿಸೆಂಬರ್ 2025, 3:53 IST
ಕೆಜಿಎಫ್‌ ಪಾರಾಂಡಹಳ್ಳಿಯಲ್ಲಿ ಶನಿವಾರ ನಡೆದ ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಸಂಸ್ಥಾಪನೆ ದಿನ ಕಾರ್ಯಕ್ರಮಕ್ಕೆ ನಿವೃತ್ತ ನ್ಯಾಯಮೂರ್ತಿ ಸಂತೋಷ ಹೆಗ್ಡೆ ಚಾಲನೆ ನೀಡಿದರು. ಪಲ್ಲಕ್ಕಿ ನಾರಾಯಣಸ್ವಾಮಿಗಳು ಹಾಜರಿದ್ದರು
ಕೆಜಿಎಫ್‌ ಪಾರಾಂಡಹಳ್ಳಿಯಲ್ಲಿ ಶನಿವಾರ ನಡೆದ ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಸಂಸ್ಥಾಪನೆ ದಿನ ಕಾರ್ಯಕ್ರಮಕ್ಕೆ ನಿವೃತ್ತ ನ್ಯಾಯಮೂರ್ತಿ ಸಂತೋಷ ಹೆಗ್ಡೆ ಚಾಲನೆ ನೀಡಿದರು. ಪಲ್ಲಕ್ಕಿ ನಾರಾಯಣಸ್ವಾಮಿಗಳು ಹಾಜರಿದ್ದರು   

ಕೆಜಿಎಫ್: ‘ಸಮಾಜದ ಎಲ್ಲೆಡೆ ಹರಡಿರುವ ಭ್ರಷ್ಟಾಚಾರಕ್ಕೆ ಕೇವಲ ಸರ್ಕಾರವನ್ನು ದೂರಿದರೆ ಸಾಲದು. ಸಾರ್ವಜನಿಕರು ಕೂಡ ಭ್ರಷ್ಟರ ವಿರುದ್ಧ ಹೋರಾಟ ಮಾಡಬೇಕು’ ಎಂದು ನಿವೃತ್ತ ನ್ಯಾಯಮೂರ್ತಿ ಸಂತೋಷ್‌ ಹೆಗ್ಡೆ ಹೇಳಿದರು.

ಪಾರಾಂಡಹಳ್ಳಿಯಲ್ಲಿ ಶನಿವಾರ ಪ್ರಜಾತತ್ವ ಮಾನವ ಹಕ್ಕುಗಳ ಫೌಂಡೇಷನ್‌ ಏರ್ಪಡಿಸಿದ್ದ ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಸಂಸ್ಥಾಪನಾ ದಿನದ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. 

‘ಭ್ರಷ್ಟಾಚಾರ ಮುಕ್ತ ಭಾರತ ನಿರ್ಮಾಣ ಮಾಡುವುದು ಪ್ರತಿಯೊಬ್ಬ ನಾಗರಿಕರ ಆದ್ಯ ಕರ್ತವ್ಯ. ಈಗಿನ ಸಮಾಜದಲ್ಲಿ ನಾವು ಎಷ್ಟೇ ಪ್ರಯತ್ನಪಟ್ಟರೂ ಸರ್ಕಾರಿ ಕಚೇರಿಗಳನ್ನು ಭ್ರಷ್ಟಾಚಾರ ಮುಕ್ತವಾಗಿಸುವುದು ಅಸಾಧ್ಯ ಎನ್ನುವಂತಾಗಿದೆ. ಇದಕ್ಕೆ ನಮ್ಮ ಉದಾಸೀನ ಮನೋಭಾವವೇ ಕಾರಣ. ಯಾವುದೇ ಕಚೇರಿಯಲ್ಲಿ ಭ್ರಷ್ಟಾಚಾರ ಕಂಡುಬಂದರೆ, ಪ್ರಶ್ನೆ ಮಾಡುವ ಪ್ರವೃತ್ತಿಯನ್ನು ಬೆಳೆಸಿಕೊಳ್ಳಬೇಕು. ಆರ್‌ಟಿಐ ಕಾಯ್ದೆಯಡಿ ಯಾವುದೇ ಸರ್ಕಾರಿ ಕಚೇರಿಯಲ್ಲಿ ಅರ್ಜಿ ಸಲ್ಲಿಸಿ ಮಾಹಿತಿಗಳನ್ನು ಪಡೆಯಬಹುದು. ಮಾಹಿತಿ ಆಧಾರದ ಮೇರೆಗೆ ನಡೆದ ಭ್ರಷ್ಟಾಚಾರದ ವಿರುದ್ಧ ಇಲಾಖೆಗಳ ಉನ್ನತ ಅಧಿಕಾರಿಗಳು ಮತ್ತು ಲೋಕಾಯುಕ್ತಕ್ಕೆ ದೂರು ಸಲ್ಲಿಸಬಹುದು’ ಎಂದು ತಿಳಿಸಿದರು. 

ADVERTISEMENT

ಭಾರತಕ್ಕಿಂತ ಚೀನಾದಲ್ಲಿ ಭ್ರಷ್ಟರ ಸಂಖ್ಯೆ ಹೆಚ್ಚಿದೆ. ಅಲ್ಲಿ ಭ್ರಷ್ಟರಿಗೆ ಗಲ್ಲು ಶಿಕ್ಷೆ ವಿಧಿಸಲಾಗುತ್ತದೆ. ಆದರೂ ಭ್ರಷ್ಟಾಚಾರ ಜೀವಂತವಾಗಿದೆ. ನಮ್ಮಲ್ಲಿ ಭ್ರಷ್ಟರಿಗೆ ಶಿಕ್ಷೆ ಸಿಗುವುದು ಕಷ್ಟ. ಜೈಲಿಗೆ ಹೋದವರಿಗೆ ಜೈಕಾರ ಹಾಕಲಾಗುತ್ತಿದೆ. ಪ್ರಶ್ನೆ ಮಾಡಿದರೆ, ಮಹಾತ್ಮಗಾಂಧಿ ಜೈಲಿಗೆ ಹೋಗಲಿಲ್ಲವೇ ಎಂಬ ವಿತಂಡ ವಾದ ಮಂಡಿಸಲಾಗುತ್ತಿದೆ. ಇದು ಇಂದಿನ ಸಮಾಜದ ದುರ್ದೈವ ಎಂದರು. 

‘ಸರ್ಕಾರಿ ಕೆಲಸವಾಗಬೇಕಾದರೆ ಕೆಳಗಿನಿಂದ ಮೇಲಿನವರೆಗೆ ಲಂಚ ಕೊಡಬೇಕು. ನಮ್ಮಲ್ಲಿ ದುರಾಸೆ ಮಿತಿ ಮೀರಿದೆ. ಎಷ್ಟೇ ಹಣವಿದ್ದರೂ, ಸಾಲದು ಎಂಬ ಭಾವನೆಯಲ್ಲಿ ಅಧಿಕಾರಿಗಳು, ರಾಜಕಾರಣಿಗಳು ಇದ್ದಾರೆ. ಕಾನೂನು ಚೌಕಟ್ಟಿಗೆ ನಾವು ಒಳಪಡುವುದಿಲ್ಲ ಎಂಬ ಭಾವನೆಯಲ್ಲಿದ್ದಾರೆ. ಒಂದಲ್ಲ ಒಂದು ದಿನ ಅವರ ಬಂಡವಾಳ ಬಯಲಾಗುತ್ತದೆ’ ಎಂದರು.

ಹಣದಿಂದ ಮನಸ್ಸಿಗೆ ನೆಮ್ಮದಿ ಸಿಗುವುದಿಲ್ಲ. ದೇಶ ಕಂಡ ಅತಿ ದೊಡ್ಡ ಹಗರಣವಾದ ಕಲ್ಲಿದ್ದಲು ಮತ್ತು 2 ಜಿ ಹಗರಣ ನೆನಪಿಸಿಕೊಳ್ಳಬೇಕು. ಹಣ ಹೊಡೆದವರು ಎಂದಾದರೂ ನೆಮ್ಮದಿಯಿಂದ ಇದ್ದಾರೆಯೇ ಎಂಬುದನ್ನು ಗಮನಿಸಬೇಕು. ಅವರು ಎಂದಿಗೂ ನೆಮ್ಮದಿಯಿಂದ ಇರಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದರು. 

ಶಿವಮೊಗ್ಗ ಜಿಲ್ಲೆಯ ದೂರ್ವಾಸ ಕ್ಷೇತ್ರದ ಪಲ್ಲಕ್ಕಿ ನಾರಾಯಣ ಸ್ವಾಮಿ, ಫೌಂಡೇಷನ್‌ ಸಂಸ್ಥಾಪಕ ಅಧ್ಯಕ್ಷ ನಾರಾಯಣರೆಡ್ಡಿ, ಅತಾವುಲ್ಲಾ, ವಿಜಯರಾಘವರೆಡ್ಡಿ, ವೆಂಕಟಕೃಷ್ಣರೆಡ್ಡಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.