ADVERTISEMENT

ಕೋವಿಡ್‌: ಮಾರ್ಗಸೂಚಿ ಪಾಲನೆ ಕಡ್ಡಾಯ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2021, 12:57 IST
Last Updated 18 ಸೆಪ್ಟೆಂಬರ್ 2021, 12:57 IST

ಕೋಲಾರ: ಲೋಕಾಯುಕ್ತರು ಜಿಲ್ಲೆಯ ಶಾಲೆಗಳಿಗೆ ಭೇಟಿ ನೀಡುತ್ತಿದ್ದು, ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಕೋವಿಡ್ ಮಾರ್ಗಸೂಚಿ ಕಡ್ಡಾಯವಾಗಿ ಪಾಲಿಸಿ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ (ಡಿಡಿಪಿಐ) ಎಸ್.ಜಿ.ನಾಗೇಶ್ ಪತ್ರಿಕಾ ಪ್ರಕಟಣೆಯಲ್ಲಿ ಶಿಕ್ಷಕರಿಗೆ ಆದೇಶಿಸಿದ್ದಾರೆ.

ಶಿಕ್ಷಣ ಇಲಾಖೆಯ ಬಿಆರ್‌ಪಿ, ಸಿಆರ್‌ಪಿ, ಇಸಿಒಗಳು ಸೇರಿದಂತೆ ಎಲ್ಲಾ ಅನುಷ್ಠಾನಾಧಿಕಾರಿಗಳು ಸರ್ಕಾರಿ, ಅನುದಾನಿತ, ಅನುದಾನರಹಿತ ಶಾಲೆಗಳಿಗೆ ಇಲಾಖೆ ನೀಡಿರುವ ಕೋವಿಡ್‌ ಸುರಕ್ಷತಾ ಮಾರ್ಗಸೂಚಿ ಪಾಲಿಸವ ಬಗ್ಗೆ ಗಮನ ಹರಿಸಬೇಕು ಎಂದು ತಿಳಿಸಿದ್ದಾರೆ.

ಶಾಲೆ ಆವರಣ, ಕೊಠಡಿ, ಕಾಂಪೌಂಡ್, ಮೇಲ್ಛಾವಣಿಯ ದೂಳು ಸ್ವಚ್ಛಗೊಳಿಸಿ ಸೋಂಕು ನಿವಾರಕ ದ್ರಾವಣ ಸಿಂಪಡಿಸಿರುವುದನ್ನು ಖಚಿತಪಡಿಸಿಕೊಳ್ಳಿ. ಶಾಲೆಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಿ. ಸಂಪ್, ನೀರಿನ ಟ್ಯಾಂಕ್‌ ಶುಚಿಗೊಳಿಸಿ. ಶೌಚಾಲಯಗಳ ಸ್ವಚ್ಛತೆಗೆ ಒತ್ತು ಕೊಡಬೇಕು ಎಂದು ಹೇಳಿದ್ದಾರೆ.

ADVERTISEMENT

ಅಡುಗೆ ಕೋಣೆ ದಾಸ್ತಾನು ನಿರ್ವಹಣೆ, ಸ್ವಚ್ಛತೆ, ಪಾತ್ರೆ, ಸ್ಟೌವ್, ಪರಿಕರಗಳ ಸ್ವಚ್ಛತೆ ಬಗ್ಗೆ ಕಾಳಜಿ ವಹಿಸಿ. ಶಾಲಾ ಆವರಣದಲ್ಲಿ 6 ಅಡಿ ಅಂತರದ ಚೌಕಾಕಾರದ ಗುರುತು ಹಾಕಿ ಅಂತರ ಕಾಪಾಡಲು ಕ್ರಮ ಕೈಗೊಳ್ಳಿ. ಡೆಸ್ಕ್‌ಗೆ ಇಬ್ಬರು ವಿದ್ಯಾರ್ಥಿಗಳಿಗೆ ಮಾತ್ರ ಕೂರಲು ಅವಕಾಶ ನೀಡಬೇಕು ಎಂದು ಸೂಚಿಸಿದ್ದಾರೆ.

ಶಾಲೆಗಳನ್ನು ಮಾದರಿ ಶಾಲೆಗಳಾಗಿಸಬೇಕು. ಶಾಲಾ ಪರಿಸರ ಸುಂದರವಾಗಿಸಲು ಕ್ರಮ ಕೈಗೊಳ್ಳಬೇಕು. ಕೋವಿಡ್‌ 3ನೇ ಅಲೆ ಭೀತಿ ಹಿನ್ನೆಲೆಯಲ್ಲಿ ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ಲೋಕಾಯುಕ್ತ ಭೇಟಿ ವೇಳೆ ಯಾವುದೇ ಲೋಪ ಆಗದಂತೆ ಎಚ್ಚರ ವಹಿಸಿ ಎಂದು ತಿಳಿಸಿದ್ದಾರೆ.

ಗುರುಸ್ಪಂದನಾ: ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ಗುರುಸ್ಪಂದನಾ ಕಾರ್ಯಕ್ರಮ ನಡೆಸುತ್ತಿದ್ದು, ಶಿಕ್ಷಕರ ವೇತನ, ಬಡ್ತಿ, ಸೇವಾ ಪುಸ್ತಕ, ವೈದ್ಯಕೀಯ ಬಿಲ್‌ ವಿಳಂಬ ಸೇರಿದಂತೆ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ. ಆಯಾ ತಾಲ್ಲೂಕಿನಲ್ಲಿ ಶಿಕ್ಷಕರ ಸಮಸ್ಯೆಗಳಿದ್ದರೆ ಪದಾಧಿಕಾರಿಗಳು ಪಟ್ಟಿ ಮಾಡಿ ಬಿಇಒ ಮೂಲಕ ಸಲ್ಲಿಸಬೇಕು ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.