ADVERTISEMENT

ಕೋವಿಡ್‌ ನಿರ್ವಹಣೆ: ಸರ್ಕಾರ ವಿಫಲ

​ಪ್ರಜಾವಾಣಿ ವಾರ್ತೆ
Published 13 ಮೇ 2021, 14:50 IST
Last Updated 13 ಮೇ 2021, 14:50 IST

ಕೋಲಾರ: ಕೊರೊನಾ ಸೋಂಕಿತರಿಗೆ ಅಗತ್ಯ ಸೌಲಭ್ಯ ಒದಗಿಸುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಜೆಡಿಎಸ್ ರಾಜ್ಯ ಘಟಕದ ಉಪಾಧ್ಯಕ್ಷ ಕೆ.ಬಿ.ಗೋಪಾಲಕೃಷ್ಣ ಪತ್ರಿಕಾ ಪ್ರಕಟಣೆಯಲ್ಲಿ ಟೀಕಿಸಿದ್ದಾರೆ.

ರಾಜ್ಯದ ಕೋವಿಡ್ ಆಸ್ಪತ್ರೆಗಳಲ್ಲಿ ಬೆಡ್, ವೈದ್ಯಕೀಯ ಆಮ್ಲಜನಕ, ರೆಮ್‌ಡಿಸಿವರ್‌ ಚುಚ್ಚುಮದ್ದಿನ ಕೊರತೆಯಿಲ್ಲ ಎಂದು ಸರ್ಕಾರ ಹೇಳುತ್ತಿದೆ. ಆದರೆ, ವಾಸ್ತವದಲ್ಲಿ ಆಸ್ಪತ್ರೆಗಳ ಚಿತ್ರಣವೇ ಬೇರೆಯಿದೆ. ಬೆಡ್‌ ಹಾಗೂ ವೈದ್ಯಕೀಯ ಆಮ್ಲಜನಕ ಸಿಗದೆ ಸೋಂಕಿತರು ರಸ್ತೆಯಲ್ಲಿ ಸಾಯುತ್ತಿದ್ದಾರೆ ಎಂದು ದೂರಿದ್ದಾರೆ.

ಕೋಲಾರ ಜಿಲ್ಲೆಯಲ್ಲೂ ಕೊರೊನಾ ಸೋಂಕಿತರು ಬೆಡ್, ಆಮ್ಲಜನಕ ಮತ್ತು ಚುಚ್ಚುಮದ್ದು ಸಿಗದೆ ನರಳಾಡುತ್ತಿದ್ದಾರೆ. ಶಾಸಕರು ಕರೆ ಮಾಡಿದರೂ ಆಸ್ಪತ್ರೆಗಳಲ್ಲಿ ಸೋಂಕಿತರಿಗೆ ಅಗತ್ಯ ಸೌಕರ್ಯಗಳು ಸಿಗುತ್ತಿಲ್ಲ. ಜನಪ್ರತಿನಿಧಿಗಳ ಮಾತಿಗೆ ಮನ್ನಣೆ ಇಲ್ಲದಿದ್ದರೆ ಜನಸಾಮಾನ್ಯ ಗತಿಯೇನು? ಎಂದು ಪ್ರಶ್ನಿಸಿದ್ದಾರೆ.

ADVERTISEMENT

ಕೋವಿಡ್ ಮೊದಲನೇ ಅಲೆಯನ್ನು ಸಮರ್ಪಕವಾಗಿ ನಿರ್ವಹಿಸಿದ ಸರ್ಕಾರ 2ನೇ ಅಲೆ ಕುರಿತು ತಜ್ಞರು ನೀಡಿದ ವರದಿಯನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಇದರಿಂದಲೇ ಸಮಸ್ಯೆ ಗಂಭೀರವಾಗಿದೆ. ಲಾಕ್‌ಡೌನ್ ಜಾರಿ ವಿಚಾರದಲ್ಲಿ ಸರ್ಕಾರ ವಿಳಂಬ ಮಾಡಿತು. ಇದರಿಂದ ಸೋಂಕಿನ ಪ್ರಮಾಣ ಗಣನೀಯವಾಗಿ ಏರಿಕೆಯಾಗಿದೆ. ಇದರಿಂದ ವಿಷಮ ಸ್ಥಿತಿಗೆ ಸರ್ಕಾರದ ಹೊಣೆಗೇಡಿತನವೇ ಕಾರಣ ಎಂದು ಆರೋಪಿಸಿದ್ದಾರೆ.

ಕೋವಿಡ್ ಸಂಕಷ್ಟ ಅನುಭವಿಸುತ್ತಿರುವ ಅಕ್ಕಪಕ್ಕದ ರಾಜ್ಯಗಳು ಅಲ್ಲಿನ ಜನರಿಗೆ ಉಚಿತ ಪಡಿತರ, ಕಾರ್ಮಿಕರಿಗೆ ಆರ್ಥಿಕ ಪರಿಹಾರ ನೀಡಿವೆ. ಅದೇ ರೀತಿ ರಾಜ್ಯದಲ್ಲಿ ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಸಿಲುಕಿರುವ ಬಡವರು, ಕಾರ್ಮಿಕರ ನೆರವಿಗೆ ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂದು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.