ಕೆಜಿಎಫ್: ಆಂಡರ್‌ಸನ್‌ಪೇಟೆಯ ಖಾಸಗಿ ನರ್ಸಿಂಗ್ ಕಾಲೇಜಿಗೆ ಕೇರಳದಿಂದ ಬಂದ ವಿದ್ಯಾರ್ಥಿನಿಯರ ಕೋವಿಡ್ ನೆಗೆಟಿವ್ ವರದಿಯಲ್ಲಿ ಅನೇಕ ನೂನ್ಯತೆಗಳಿರುವುದು ಪ್ರಾಥಮಿಕ ಹಂತದ ತನಿಖೆಯಿಂದ ತಿಳಿದುಬಂದಿದೆ.
ಕಾಲೇಜಿನ ಒಟ್ಟು 65 ವಿದ್ಯಾರ್ಥಿನಿಯರು ಕೋವಿಡ್ ಸೋಂಕಿಗೆ ಒಳಗಾಗಿದ್ದಾರೆ. ಅವರು ಸಲ್ಲಿಸಿರುವ ನೆಗೆಟಿವ್ ವರದಿಯಲ್ಲಿ ಕೆಲವು ವಿದ್ಯಾರ್ಥಿನಿಯರಲ್ಲಿ ಲಸಿಕೆ ಪಡೆದ ಬಗ್ಗೆ ಪ್ರಮಾಣ ಪತ್ರ ಇರಲಿಲ್ಲ. ಈಗಾಗಲೇ ಒಮ್ಮೆ ಕೋವಿಡ್ ಸೋಂಕಿತರಾದವರು ಕೋವಿಡ್ ಪ್ರಮಾಣ ಪತ್ರವನ್ನು ಹೊಂದಿಲ್ಲ. ಕೆಲವು ಕಡೆಗಳಲ್ಲಿ ವಿದ್ಯಾರ್ಥಿಯರ ಹೆಸರು ಬದಲಾವಣೆಯಾಗಿದೆ. ಕೆಲವೊಂದು ಹೆಸರುಗಳು ವೆಬ್ ಸೈಟಿನಲ್ಲಿ ಕಾಣಿಸುತ್ತಿಲ್ಲ. ಒಟ್ಟಿನಲ್ಲಿ ಕಾಲೇಜಿನ ಆಡಳಿತ ಕೋವಿಡ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಿಲ್ಲ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ಮೂಲಗಳು ಹೇಳಿವೆ.
ಡಿವೈಎಸ್ಪಿ ಮುರಳೀಧರ್, ಸರ್ಕಲ್ ಇನ್‌ಸ್ಪೆಕ್ಟರ್ ನಾಗರಾಜ್ ಬುಧವಾರ ಕಾಲೇಜಿಗೆ ಭೇಟಿ ನೀಡಿ ಪರಿಶೀಲಿಸಿದರು. ಈ ಮಧ್ಯೆ ತಾಲ್ಲೂಕಿನಲ್ಲಿ ಹತ್ತು ಪ್ರಕರಣಗಳು ಪತ್ತೆಯಾಗಿದೆ. ಕ್ಯಾಸಂಬಳ್ಳಿಯಲ್ಲಿ 5, ಬೇತಮಂಗಲದಲ್ಲಿ 2 ಮತ್ತು ಕೆಜಿಎಫ್‌ನಲ್ಲಿ 3 ಪ್ರಕರಣ ಪತ್ತೆಯಾಗಿದೆ.
ನಗರದ ಎರಡನೇ ಕ್ರಾಸ್‌ನಲ್ಲಿರುವ ಖಾಸಗಿ ಪ್ರೌಢಶಾಲೆಯ ವಿದ್ಯಾರ್ಥಿಗೆ ಕೋವಿಡ್ ಲಕ್ಷಣಗಳು ಕಂಡು ಬಂದ ಹಿನ್ನೆಲೆಯಲ್ಲಿ ಶಾಲೆಗೆ ಒಂದು ವಾರಗಳ ಕಾಲ ರಜೆ ಘೋಷಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.