ADVERTISEMENT

‘ಅಧಿಕಾರಕ್ಕಾಗಿ ಬಂದವರಿಗೆ ಮನ್ನಣೆ’-ಕೆಜಿಎಫ್‌ ಬಿಜೆಪಿ ಮುಖಂಡರ ದೂರು

ರಾಜ್ಯ ವರಿಷ್ಠರಿಗೆ ಕೆಜಿಎಫ್‌ ಬಿಜೆಪಿ ಮುಖಂಡರ ದೂರು ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 5 ಮೇ 2022, 2:26 IST
Last Updated 5 ಮೇ 2022, 2:26 IST
ಕೆಜಿಎಫ್‌ ರಾಬರ್ಟಸನ್‌ಪೇಟೆಯಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಪಕ್ಷದ ರಾಜ್ಯ ಕಾರ್ಯದರ್ಶಿ ಜಯಚಂದ್ರ ರೆಡ್ಡಿ ಭಾಗವಹಿಸಿದ್ದರು
ಕೆಜಿಎಫ್‌ ರಾಬರ್ಟಸನ್‌ಪೇಟೆಯಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಪಕ್ಷದ ರಾಜ್ಯ ಕಾರ್ಯದರ್ಶಿ ಜಯಚಂದ್ರ ರೆಡ್ಡಿ ಭಾಗವಹಿಸಿದ್ದರು   

ಕೆಜಿಎಫ್‌: ಬಿಜೆಪಿಗೆ ಹೊಸದಾಗಿ ಸೇರ್ಪಡೆಯಾದವರಿಗೆ ಸಿಗುತ್ತಿರುವ ಮನ್ನಣೆ ಹಳಬರಿಗೆ ಸಿಗುತ್ತಿಲ್ಲ. ಇದರಿಂದ ನೊಂದ ಕಾರ್ಯಕರ್ತರು ಸಕ್ರಿಯವಾಗಿ ಪಕ್ಷದ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಪಕ್ಷದ ಒಂದು ಗುಂಪು ಅಸಮಾಧಾನ ವ್ಯಕ್ತಪಡಿಸಿದೆ.

ತಾಲ್ಲೂಕಿನ ಬಿಜೆಪಿಯಲ್ಲಿರುವ ಗುಂಪುಗಾರಿಕೆ ತಡೆಗಟ್ಟಲು ಮಂಗಳವಾರ ನಗರದ ವಿವೇಕಾನಂದ ವಿದ್ಯಾಕೇಂದ್ರದಲ್ಲಿ ಮೂಲ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿದ್ದ ಪಕ್ಷದ ರಾಜ್ಯ ಕಾರ್ಯದರ್ಶಿ ಜಯಚಂದ್ರರೆಡ್ಡಿ ಅವರಿಗೆ ತಾಲ್ಲೂಕಿನಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ಕಾರ್ಯಕರ್ತರು ವಿವರಣೆ ನೀಡಿದರು.

ಬಿಜೆಪಿ ಹುಟ್ಟಿದಾಗಿನಿಂದ ಕೆಜಿಎಫ್‌ನಲ್ಲಿ ಬಲಿಷ್ಠ ಕಾರ್ಯಕರ್ತರ ತಂಡವನ್ನು ಕಟ್ಟಲಾಗಿತ್ತು. ಅನೇಕ ಮುಖಂಡರು ಕೆಜಿಎಫ್ ತಂಡದ ಶಕ್ತಿ ಮತ್ತು ಸಂಘಟನೆಯನ್ನು ಶ್ಲಾಘಿಸಿದ್ದರು. ನಂತರದ ದಿನಗಳಲ್ಲಿ ಅಧಿಕಾರಕ್ಕೆ ಬರುತ್ತಲೇ ಮೂಲ ಕಾರ್ಯಕರ್ತರನ್ನು ಕಡೆಗಣಿಸಲಾಯಿತು ಎಂದು ದೂರಿದರು.

ADVERTISEMENT

ಪಕ್ಷಕ್ಕಾಗಿ ಹಗಲಿರುಳು ದುಡಿದವರನ್ನು ಮೂಲೆಗುಂಪು ಮಾಡಲಾಯಿತು. ಅಧಿಕಾರಕ್ಕಾಗಿ ಪಕ್ಷಕ್ಕೆ ಸೇರಿದವರಿಗೆ ಆದ್ಯತೆ ನೀಡಲಾಯಿತು. ಕುಟುಂಬ ರಾಜಕಾರಣಕ್ಕೆ ನಾಂದಿ ಹಾಡಲಾಯಿತು. ಪಕ್ಷ ಕಟ್ಟಿದ ಕಾರ್ಯಕರ್ತರಿಗೆ ಸ್ಥಾನಮಾನಗಳು ಮರೀಚಿಕೆಯಾಗಿಯೇ ಉಳಿದಿವೆ ಎಂದು ಕಾರ್ಯಕರ್ತರು ದೂರಿದರು.

ಜಯಚಂದ್ರರೆಡ್ಡಿ, ‘ಹಳೆಯ ಕಾರ್ಯಕರ್ತರಿಗೆ ಬೇಸರ ವಾಗಿರು ವುದು ಸತ್ಯ. ಎಲ್ಲರನ್ನೂ ಒಗ್ಗೂಡಿಸಿಕೊಂಡು ಪಕ್ಷ ಕಟ್ಟಬೇಕಾಗಿದೆ’ ಎಂದು
ಹೇಳಿದರು.

ಮುಂದಿನ ಚುನಾವಣೆ ದೃಷ್ಟಿಯಿಂದ ಗುಂಪುಗಾರಿಕೆ ಇರಬಾರದು.ಎಲ್ಲರನ್ನೂ ಒಂದುಗೂಡಿಸಿಕೊಂಡು ಪಕ್ಷದ ಸಂಘಟನೆ ಮಾಡಬೇಕಾಗಿದೆ. ಅತಿಶೀಘ್ರದಲ್ಲಿಯೇ ಮುಖಂಡರಾದ ಸಿ.ಟಿ. ರವಿ, ಸಂಸದ ಎಸ್‌. ಮುನಿಸ್ವಾಮಿ ನಗರಕ್ಕೆ ಆಗಮಿಸಿ ಕಾರ್ಯಕರ್ತರ ಜೊತೆ ಮಾತನಾಡಲಿದ್ದಾರೆ. ಪ್ರತ್ಯೇಕ ವಾಗಿರುವುದರ ಬದಲು ಪಕ್ಷದ ಚಟುವಟಿಕೆಗಳಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.

ಮುಖಂಡರಾದ ವೆಂಕಟೇಶ್‌, ರಾಜಗೋಪಾಲ್‌, ಯಶ್ವಂತ್ ರಾವ್‌, ಲೋಹಿತ್‌, ಮುರಳಿ, ಶಂಕರ್‌, ಗಣೇಶ್‌, ಸುರೇಶ್ ಬಾಬು, ಎಲ್‌. ರಮೇಶ್‌, ಮುರಳಿ ಮನ್ನನ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.