ADVERTISEMENT

ಕ್ರಿಮಿನಲ್‌ ಪ್ರಕರಣ: ಡಿಡಿಪಿಐ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2020, 16:49 IST
Last Updated 30 ಮಾರ್ಚ್ 2020, 16:49 IST

ಕೋಲಾರ: ಸರ್ಕಾರದ ಮುಂದಿನ ಆದೇಶದವರೆಗೆ ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಶಾಲೆಗಳು 2020-21ನೇ ಶೈಕ್ಷಣಿಕ ವರ್ಷಕ್ಕೆ ದಾಖಲಾತಿ ನಡೆಸಿದರೆ ಅಥವಾ ಪ್ರವೇಶ ಶುಲ್ಕ ವಸೂಲು ಮಾಡಿದರೆ ಕ್ರಿಮಿನಲ್‌ ಪ್ರಕರಣ ದಾಖಲಿಸುವುದಾಗಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕೆ.ರತ್ನಯ್ಯ ಎಚ್ಚರಿಕೆ ನೀಡಿದ್ದಾರೆ.

ಮಕ್ಕಳ ದಾಖಲಾತಿ ವಿಚಾರದಲ್ಲಿ ಜಿಲ್ಲೆಯ ಎಲ್ಲಾ ಶಾಲೆಗಳು ಸರ್ಕಾರದ ಆದೇಶ ಪಾಲಿಸಬೇಕು. ಆದೇಶ ಉಲ್ಲಂಘಿಸಿದೆ ಭಾರತೀಯ ದಂಡ ಸಂಹಿತೆ 188ರಡಿ ಕ್ರಿಮಿನಲ್ ಮೊಕದ್ದಮೆ ದಾಖಲಿಸುತ್ತೇವೆ. ಅಲ್ಲದೇ, ಶಿಕ್ಷಣ ಕಾಯ್ದೆಯಡಿ ಶಾಲೆಯ ಮಾನ್ಯತೆ ರದ್ದುಪಡಿಸುತ್ತೇವೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೊರೊನಾ ಸೋಂಕಿನ ಭೀತಿ ಹಿನ್ನೆಲೆಯಲ್ಲಿ ಶಾಲೆಗಳಿಗೆ ರಜೆ ನೀಡಿರುವ ಸರ್ಕಾರ ಮುಂದಿನ ಆದೇಶದವರೆಗೂ ದಾಖಲಾತಿ ಪ್ರಕ್ರಿಯೆ ನಡೆಸಬಾರದೆಂದು ಸೂಚನೆ ನೀಡಿದೆ. ಆದರೆ, ಕೆಲ ಖಾಸಗಿ ಶಾಲೆಗಳ ಆಡಳಿತ ಮಂಡಳಿ ಸದಸ್ಯರು ಪ್ರವೇಶ ಶುಲ್ಕ ಪಾವತಿಸುವಂತೆ ಪೋಷಕರಿಗೆ ಪತ್ರ ಬರೆಯುತ್ತಿದ್ದಾರೆ ಮತ್ತು ಮೊಬೈಲ್‌ಗೆ ಎಸ್‍ಎಂಎಸ್ ಸಂದೇಶ ಕಳುಹಿಸುತ್ತಿದ್ದಾರೆ. ಈ ಸಂಗತಿ ಇಲಾಖೆ ಗಮನಕ್ಕೆ ಬಂದಿದೆ ಎಂದು ಹೇಳಿದ್ದಾರೆ.

ADVERTISEMENT

ಶಾಲೆಯಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳನ್ನು ಅದೇ ಶಾಲೆಯ ಮುಂದಿನ ತರಗತಿಗಳಿಗೆ ದಾಖಲಿಸಲು ಏಪ್ರಿಲ್‌ ಅಥವಾ ಮೇ ತಿಂಗಳಲ್ಲಿ ಪ್ರವೇಶ ಶುಲ್ಕ ಪಾವತಿಸಬೇಕೆಂದು ಶಿಕ್ಷಣ ಸಂಸ್ಥೆಗಳು ಗಡುವು ನಿಗದಿಪಡಿಸಿ ಪೋಷಕರಿಗೆ ಪತ್ರ ಕಳುಹಿಸಿರುವುದು ಗೊತ್ತಾಗಿದೆ. ಈ ಕ್ರಮ ಸರಿಯಲ್ಲ. ಶೈಕ್ಷಣಿಕ ಪ್ರಕ್ರಿಯೆ, ಶುಲ್ಕ ಪಾವತಿಗೆ ಪೋಷಕರಿಗೆ ಮೇಲೆ ಒತ್ತಡ ತರುವುದು ನಿಷಿದ್ಧ ಎಂದು ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.