ADVERTISEMENT

ಮುಳಬಾಗಿಲು: ಶಾಸಕ ಎಚ್. ನಾಗೇಶ್‌ ವಿರುದ್ಧ ಟೀಕೆ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2021, 1:12 IST
Last Updated 11 ಫೆಬ್ರುವರಿ 2021, 1:12 IST
ಮಾಜಿ ಶಾಸಕ ಕೊತ್ತೂರು ಜಿ .ಮಂಜುನಾಥ್ ಮಾತನಾಡಿದರು
ಮಾಜಿ ಶಾಸಕ ಕೊತ್ತೂರು ಜಿ .ಮಂಜುನಾಥ್ ಮಾತನಾಡಿದರು   

ಮುಳಬಾಗಿಲು: ‘ಕ್ಷೇತ್ರಕ್ಕೆ ಪರಿಚಯವಿಲ್ಲದ ಎಚ್. ನಾಗೇಶ್‌ ಅವರನ್ನು ತಂದು ಶಾಸಕರನ್ನಾಗಿ ಮಾಡಿದ್ದು ನನ್ನ ದೊಡ್ಡ ತಪ್ಪು’ ಎಂದು ಮಾಜಿ ಶಾಸಕ ಕೊತ್ತೂರು ಜಿ. ಮಂಜುನಾಥ್ ಹೇಳಿದರು.

ನಗರದಲ್ಲಿ ಬುಧವಾರ ತಮ್ಮ ಬೆಂಬಲಿಗ ಗ್ರಾ.ಪಂ ಅಧ್ಯಕ್ಷ ಮತ್ತು ಉಪಾಧ್ಯಕ್ಷರಿಗೆ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.

‘ನಾಗೇಶ್ ಶಾಸಕರಾಗಲು ನಾನು ಹಾಗೂ ನನ್ನ ಬೆಂಬಲಿಗರು ಕಾರಣ. ಆದರೆ, ಅವರು ಸಚಿವ ಸ್ಥಾನದಿಂದ ತೆಗೆದು ಹಾಕಲು ತಾವು ಕಾರಣವಲ್ಲ. ಅವರ ಅಸಮರ್ಥತೆ ಕಾರಣವಾಯಿತು. ಸಂಸದರಿಗೆ ಇರುವ ಕೃತಜ್ಞತೆ ನಾಗೇಶ್‌ ಅವರಿಗೆ ಇಲ್ಲ’ ದೂರಿದರು.

ADVERTISEMENT

‘ತಮ್ಮ ಗೆಲುವಿಗೆ ಕಾರಣರಾದವರನ್ನು ಬಿಜೆಪಿ ಸಂಸದ ನೆನೆಸಿಕೊಳ್ಳುತ್ತಿದ್ದಾರೆ. ಕೆ.ಸಿ ವ್ಯಾಲಿ ನೀರು ತರುವುದರಲ್ಲಿ ಹಿಂದಿನ ಜಿಲ್ಲಾಧಿಕಾರಿ ಡಿ.ಕೆ. ರವಿ ಅವರ ಪಾತ್ರವಿದೆ. ನಂತರದ ದಿನಗಳಲ್ಲಿ ಶ್ರೀನಿವಾಸಪುರ ಶಾಸಕ ಕೆ.ಆರ್. ರಮೇಶ್‌ಕುಮಾರ್ ಹಾಗೂ ಜಿಲ್ಲೆಯ ಶಾಸಕರು ಕೈಜೋಡಿಸಿದ್ದಾರೆ. ಆದರೆ, ನಾಗೇಶ್‌ ಅವರು ಕೆ.ಸಿ ವ್ಯಾಲಿ ಯೋಜನೆ ತಂದಿರುವುದು ತಾವೇ ಎಂದು ಹೇಳಿಕೆ ನೀಡುತ್ತಿರುವುದು ಹಾಸ್ಯಾಸ್ಪದ’ ಎಂದು ವ್ಯಂಗ್ಯವಾಡಿದರು.

ಜೆಡಿಎಸ್ ಮುಖಂಡ ಸಮೃದ್ಧಿ ಮಂಜುನಾಥ್ ಮತ್ತು ಶಾಸಕ ಎಚ್. ನಾಗೇಶ್ ತಾವು ಗೆದ್ದು ಬಂದಿರುವ ಗ್ರಾ.ಪಂ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಕುರಿತು ಸುಳ್ಳು ಪ್ರಚಾರ ನೀಡುತ್ತಿದ್ದಾರೆ. ಹಾಗಾಗಿ, ಈ ಕಾರ್ಯಕ್ರಮ ನಡೆಸಿ ತಮ್ಮ ಶಕ್ತಿ ಪ್ರದರ್ಶನ ಮಾಡುತ್ತಿದ್ದೇವೆ ಎಂದು ಹೇಳಿದರು.

ಮಾಜಿ ಸಂಸದ ಕೆ.ಎಚ್. ಮುನಿಯಪ್ಪ ಅವರು ಎರಡು ತಲೆಯ ಹಾವು ಇದ್ದಂತೆ. ವಿಧಾನಸಭೆ ಚುನಾವಣೆ ಸಮಯದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನೇ ಸೋಲಿಸುವುದರೊಂದಿಗೆ ಕಾಂಗ್ರೆಸ್‌ಗೆ ದ್ರೋಹ ಮಾಡಿದ್ದಾರೆ. ಅವರು ನಿಜವಾದ ಕಾಂಗ್ರೆಸ್‌ ನಾಯಕರಲ್ಲ. ಸಹಾಯ ಪಡೆದವರನ್ನೇ ಮುಗಿಸುವ ಗುಣ ಅವರದ್ದಾಗಿದೆ ಎಂದು ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.