ADVERTISEMENT

ಶ್ರೀನಿವಾಸಪುರ: ಸಂಕಷ್ಟಕ್ಕೆ ಸಿಲುಕಿದ ರೈತರು, ಬೆಳೆಗೆ ಮುಳುವಾದ ಮಳೆ

ಆರ್.ಚೌಡರೆಡ್ಡಿ
Published 2 ನವೆಂಬರ್ 2022, 6:50 IST
Last Updated 2 ನವೆಂಬರ್ 2022, 6:50 IST
ಶ್ರೀನಿವಾಸಪುರ ಹೊರವಲಯದ ತೋಟವೊಂದರಲ್ಲಿ ರೋಗ ಪೀಡಿತವಾಗಿರುವ ಟೊಮೆಟೊ ಗಿಡಗಳು
ಶ್ರೀನಿವಾಸಪುರ ಹೊರವಲಯದ ತೋಟವೊಂದರಲ್ಲಿ ರೋಗ ಪೀಡಿತವಾಗಿರುವ ಟೊಮೆಟೊ ಗಿಡಗಳು   

ಶ್ರೀನಿವಾಸಪುರ: ತಾಲ್ಲೂಕಿನಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆ ಹಾಗೂ ಹವಾಮಾನ ವೈಪರೀತ್ಯದಿಂದ ತೋಟದ ಬೆಳೆಗಳು ರೋಗ ಪೀಡಿತವಾಗಿವೆ. ಮಳೆ ಆಶ್ರಯದಲ್ಲಿ ಬೆಳೆಯಲಾಗಿರುವ ಬೆಳೆಗಳಿಗೂ ಧಕ್ಕೆಯಾಗಿದೆ.

ಕೊಳವೆಬಾವಿ ಆಶ್ರಯದಲ್ಲಿ ಪ್ರಮುಖ ಆರ್ಥಿಕ ಬೆಳೆಯಾಗಿ ಟೊಮೆಟೊ ಬೆಳೆಯಲಾಗಿದೆ. ಆದರೆ, ಅಧಿಕ ಮಳೆ ಹಾಗೂ ವಾತಾವರಣ ವೈಪರೀತ್ಯದ ಪರಿಣಾಮ ವೈರಸ್ ಹಾಗೂ ಅಂಗಮಾರಿ ರೋಗ ಆವರಿಸಿದೆ. ಇದರಿಂದ ಗಿಡ ಅಂದಗೆಟ್ಟು, ಟೊಮೆಟೊ ಉದುರಿ ನೆಲ ಕಚ್ಚುತ್ತಿದೆ. ಇದರಿಂದ ರೈತರು ಕಂಗಾಲಾಗಿದ್ದಾರೆ.

‘ಬೆಳೆ ಚೆನ್ನಾಗಿ ಹತ್ತಿ ಬಂತು. ಬೆಳೆ ಬಂದರೆ ನಾಲ್ಕು ಕಾಸು ಸಿಗಬಹುದೆಂಬ ಭರವಸೆ ಇತ್ತು. ಆದರೆ, ಬದಲಾದ ಪರಿಸ್ಥಿತಿಯಲ್ಲಿ ರೋಗ ಬಾಧೆ ಕಾಡುತ್ತಿದೆ. ಎಷ್ಟೇ ಔಷಧಿ ಸಿಂಪಡಣೆ ಮಾಡಿದರೂ ಹತೋಟಿಗೆ ಬರುತ್ತಿಲ್ಲ. ಹಾಕಿದ ಬಂಡವಾಳಕ್ಕೆ ಸಂಚಕಾರ ಬಂದಿದೆ’ ಎಂದು ಟೊಮೆಟೊ ಬೆಳೆಗಾರ ಶ್ರೀನಾಥ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಬಿತ್ತನೆ ಬೀಜ ಉತ್ಪಾದನಾ ಕಂಪನಿಗಳು ಹೊಸ ಹೊಸ ಟೊಮೆಟೊ ತಳಿ ಪರಿಚಯಿಸುತ್ತಿವೆ. ರೈತರ ಮೇಲೆ ಪ್ರಯೋಗ ಮಾಡುತ್ತಿವೆ. ಕಳಪೆ ಬಿತ್ತನೆ ಬೀಜ ಮಾರುಕಟ್ಟೆ ಪ್ರವೇಶಿಸಿದೆ. ಕೀಟ ಹಾಗೂ ರೋಗನಾಶಕಗಳ ಸಾಚಾತನ ಗೊತ್ತಾಗುತ್ತಿಲ್ಲ. ಜತೆಗೆ, ವಾತಾವರಣ ವೈಪರೀತ್ಯದ ಪ್ರಹಾರ ಬೇರೆ’ ಎಂದು ರೈತ ರಮೇಶ್ ಅಳಲು ತೋಡಿಕೊಂಡರು.

ನೆಲಗಡಲೆ ಗಿಡ ಕೀಳಲೂ ಮಳೆ ಬಿಡುವು ಕೊಡುತ್ತಿಲ್ಲ. ಹಾಗಾಗಿ, ಬಲಿತ ಕಾಯಿ ಹೊಲದಲ್ಲಿಯೇ ಮೊಳಕೆ ಬರುತ್ತಿದೆ. ಈ ಬಾರಿ ಹೆಚ್ಚಿನ ಸಂಖ್ಯೆಯ ರೈತರು ರಾಗಿಗೆ ಪರ್ಯಾಯವಾಗಿ ನೆಲಗಡಲೆ ಬಿತ್ತನೆ ಮಾಡಿದ್ದರು. ಬೆಳೆಯೂ ಹುಲುಸಾಗಿ ಬಂದಿತ್ತು. ಕೊನೆಗೆ ನೋಡಿದರೆ ಗಟ್ಟಿಗಿಂತ ಜೊಳ್ಳೇ ಹೆಚ್ಚು. ಕಾಯಿ ಬಿಟ್ಟಿದೆಯಾದರೂ ಬೀಜ ಕಟ್ಟಿಲ್ಲ. ಇದು ಅಗತ್ಯಕ್ಕಿಂತ ಹೆಚ್ಚು ಮಳೆ ಸುರಿದ ಪರಿಣಾಮ ಎಂಬುದು ಅನುಭವಿ ರೈತರ ಅಭಿಪ್ರಾಯ.

ತಾಲ್ಲೂಕಿನಲ್ಲಿ ರಾಗಿ ಬೆಳೆ ವಿವಿಧ ಹಂತಗಳಲ್ಲಿದೆ. ಮೊದಲು ಬಿತ್ತನೆ ಮಾಡಲಾಗಿರುವ ಕಡೆ ತೆನೆ ಕೊಯ್ಲಿಗೆ ಬಂದಿದೆ. ಉಳಿದೆಡೆ ಹಾಲು ಹತ್ತುವ ಹಂತದಲ್ಲಿದೆ. ದುರದೃಷ್ಟವೆಂದರೆ ಮಳೆಯೊಂದಿಗೆ ಬೀಸಿದ ಬಿರುಗಾಳಿಗೆ ಬೆಳೆ ಉರುಳಿ ಬಿದ್ದಿದೆ. ತೆನೆ ನೆಲಕಚ್ಚಿದೆ. ಬಲಿತ ತೆನೆ ಕೊಯ್ಲು ಮಾಡಲು ಸಾಧ್ಯವಾಗುತ್ತಿಲ್ಲ. ಎಳೆ ತೆನೆ ಬಲಿಯಲು ಸಾಧ್ಯವಾಗುತ್ತಿಲ್ಲ. ಒಟ್ಟಾರೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.

ಕೊತ್ತಂಬರಿ ಸೊಪ್ಪು ಮಳೆಯಿಂದ ಹಾಳಾಗಿದೆ. ಸೊಪ್ಪು ಬೆಳೆಯಲು ಸಾಧ್ಯವಾಗುತ್ತಿಲ್ಲ. ಹಾಗಾಗಿ, ಅವುಗಳ ಬೆಲೆ ಗಗನಕ್ಕೇರಿದೆ. ಕೋಸು, ಕ್ಯಾಪ್ಸಿಕಂನಂಥ ಸೂಕ್ಷ್ಮ ಬೆಳೆಗಳಿಗೆ ಔಷಧಿ ಸಿಂಪಡಣೆ ಮಾಡಲು ಮಳೆ ಅಡ್ಡಿಯಾಗಿದೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಭಾರಿ ಮಳೆ ಸುರಿದ ದಿನಗಳು ಕಡಿಮೆ. ಕಳೆದ ವರ್ಷ ಈ ಹೊತ್ತಿನಲ್ಲಿ ಕೆರೆಗಳು ತುಂಬಿ ಕೋಡಿ ಹರಿಯುತ್ತಿದ್ದವು. ಈಗ ಅಂಥ ಪರಿಸ್ಥಿತಿ ಇಲ್ಲ. ಆದರೂ, ಆಗಾಗ ಎಡೆಬಿಡದೆ ಸುರಿಯುತ್ತಿರುವ ಸಾಮಾನ್ಯ ಮಳೆ ಹಾಗೂ ಅಧಿಕ ತೇವಾಂಶ ಬೆಳೆಯನ್ನು ಬಲಿ ಪಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.