ADVERTISEMENT

ಕ್ರಷರ್‌: ಎನ್ಒಸಿ ರದ್ದು ಮಾಡಲು ಒತ್ತಾಯ

ಜಿಲ್ಲಾಧಿಕಾರಿ ಕಚೇರಿ ಎದುರು ದಸಂಸ ಸದಸ್ಯರ ಧರಣಿ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2019, 14:32 IST
Last Updated 3 ಸೆಪ್ಟೆಂಬರ್ 2019, 14:32 IST
ಮಾಲೂರು ತಾಲ್ಲೂಕಿನ ಅಗರ ಗ್ರಾಮದಲ್ಲಿ ಕ್ರಷರ್ ಆರಂಭಕ್ಕೆ ನೀಡಿರುವ ನಿರಾಕ್ಷೇಪಣಾ ಪತ್ರ ರದ್ದುಪಡಿಸುವಂತೆ ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ಸದಸ್ಯರು ಕೋಲಾರ ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಧರಣಿ ನಡೆಸಿದರು.
ಮಾಲೂರು ತಾಲ್ಲೂಕಿನ ಅಗರ ಗ್ರಾಮದಲ್ಲಿ ಕ್ರಷರ್ ಆರಂಭಕ್ಕೆ ನೀಡಿರುವ ನಿರಾಕ್ಷೇಪಣಾ ಪತ್ರ ರದ್ದುಪಡಿಸುವಂತೆ ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ಸದಸ್ಯರು ಕೋಲಾರ ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಧರಣಿ ನಡೆಸಿದರು.   

ಕೋಲಾರ: ಜಿಲ್ಲೆಯ ಮಾಲೂರು ತಾಲ್ಲೂಕಿನ ಅಗರ ಗ್ರಾಮದ ಸರ್ವೆ ನಂಬರ್‌ 167ರ ಜಮೀನಿನಲ್ಲಿ ಕ್ರಷರ್ ಆರಂಭಕ್ಕೆ ನೀಡಿರುವ ನಿರಾಕ್ಷೇಪಣಾ ಪತ್ರ (ಎನ್‍ಒಸಿ) ರದ್ದುಪಡಿಸುವಂತೆ ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ಸದಸ್ಯರು ಇಲ್ಲಿ ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದರು.

‘ಮಾಲೂರು ತಾಲ್ಲೂಕಿನ ಟೇಕಲ್‌ ಭಾಗದಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ನಡೆಯುತ್ತಿದೆ. ಕ್ರಷರ್‌ಗಳು ನಾಯಿಕೊಡೆಗಳಂತೆ ತಲೆ ಎತ್ತಿವೆ. ಕ್ರಷರ್‌ ದಂಧೆಕೋರರಿಗೆ ಅಧಿಕಾರಿಗಳೇ ಸರ್ಕಾರಿ ಭೂಮಿಯ ನಕಲಿ ದಾಖಲೆಪತ್ರ ಸೃಷ್ಟಿಸಿ ಕೊಟ್ಟಿದ್ದಾರೆ. ಲಂಚದಾಸೆಗೆ ಕಲ್ಲು ಗಣಿಗಾರಿಕೆ ನಡೆಸಲು ಅನುಮತಿ ಕೊಟ್ಟಿದ್ದಾರೆ’ ಎಂದು ಧರಣಿನಿತರು ಆಕ್ರೋಶ ವ್ಯಕ್ತಪಡಿಸಿದರು.

‘ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಅಕ್ರಮ ಕಲ್ಲು ಗಣಿಗಾರಿಕೆಗೆ ಕುಮ್ಮಕ್ಕು ನೀಡುತ್ತಿದ್ದಾರೆ. ಗಣಿ ಉದ್ಯಮಿಗಳು ಪರಿಸರ ಸಂಪತ್ತು ಲೂಟಿ ಮಾಡುತ್ತಿದ್ದಾರೆ. ಪ್ರಭಾವಿ ವ್ಯಕ್ತಿಗಳು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ಪೊಲೀಸ್ ಅಧಿಕಾರಿಗಳ ಬೆಂಬಲದಿಂದ ಕ್ರಷರ್ ನಡೆಸುತ್ತಿದ್ದಾರೆ’ ಎಂದು ಸಮಿತಿಯ ಮಾಲೂರು ತಾಲ್ಲೂಕು ಘಟಕದ ಸಂಘಟನಾ ಸಂಚಾಲಕ ನಾಗರಾಜ್ ದೂರಿದರು.

ADVERTISEMENT

ದೂರು ದಾಖಲು: ‘ಅಗರ ಸಮೀಪದ ಸರ್ವೆ ನಂಬರ್‌ 167ರ ಜಮೀನು ಅಬ್ದುಲ್ ರೆಹಮಾನ್ ಎಂಬುವರಿಗೆ ಸೇರಿದೆ. ಆದರೆ, ಆ ಜಮೀನಿಗೆ ಎ.ಎನ್.ಪ್ರಕಾಶ್ ಮತ್ತು ಅಹಮ್ಮದ್‌ ಉಲ್ಲಾ ಎಂಬುವರು ಅಕ್ರಮವಾಗಿ ಕಾಂಪೌಂಡ್ ಹಾಕಿ ಕ್ರಷರ್ ಆರಂಭಿಸಲು ನಿರಾಕ್ಷೇಪಣಾ ಪತ್ರ ಪಡೆದಿದ್ದಾರೆ. ಈ ಸಂಬಂಧ ಉಪ ವಿಭಾಗಾಧಿಕಾರಿ ನ್ಯಾಯಾಲಯದಲ್ಲಿ ದೂರು ದಾಖಲಾಗಿದ್ದು, ವಿಚಾರಣೆ ನಡೆಯುತ್ತಿದೆ. ಆದ ಕಾರಣ ಎನ್‌ಒಸಿ ರದ್ದುಪಡಿಸಬೇಕು’ ಎಂದು ಮನವಿ ಮಾಡಿದರು.

‘ಜಮೀನು ಪ್ರಕರಣ ಇತ್ಯರ್ಥವಾಗುವವರೆಗೂ ಅಲ್ಲಿ ಕಲ್ಲು ಗಣಿಗಾರಿಕೆ ನಡೆಸಲು ಅವಕಾಶ ನೀಡಬಾರದು. ಜಮೀನಿಗೆ ಪೊಲೀಸರನ್ನು ನಿಯೋಜಿಸಬೇಕು. ಜಮೀನಿಗೆ ಅತಿಕ್ರಮ ಪ್ರವೇಶ ಮಾಡುವವರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಬೇಕು’ ಎಂದು ಒತ್ತಾಯಿಸಿದರು.

ಸಮಿತಿಯ ರಾಜ್ಯ ಘಟಕದ ಸದಸ್ಯ ನಾರಾಯಣಸ್ವಾಮಿ, ತಾಲ್ಲೂಕು ಘಟಕದ ಸಂಘಟನಾ ಸಂಚಾಲಕ ವಿನೋದ್‌ಕುಮಾರ್‌, ಸದಸ್ಯರಾದ ಎಚ್.ವಿ.ಮಂಜುನಾಥ್, ಬಿ.ಜಿ.ಮುನಿರಾಜು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.