ಶ್ರೀನಿವಾಸಪುರ: ಇತ್ತೀಚಿನ ದಿನಗಳಲ್ಲಿ ಸೈಬರ್ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿದ್ದು, ಗ್ರಾಹಕರು ಯಾವುದೇ ಕಾರಣಕ್ಕೂ ತಮ್ಮ ಬ್ಯಾಂಕ್ ಖಾತೆಗೆ ಸಂಬಂಧಿಸಿದ ಮಾಹಿತಿಯನ್ನು ಇತರರ ಜೊತೆಗೆ ಹಂಚಿಕೊಳ್ಳಬಾರದೆಂದು ಜಿಲ್ಲಾ ಲೀಡ್ ಬ್ಯಾಂಕ್‌ನ ಮಹದೇವ್ ಎಸ್.ಜೋಶಿ ಹೇಳಿದರು.
ತಾಲ್ಲೂಕಿನ ಲಕ್ಷ್ಮಿಪುರ ಕ್ರಾಸ್‌ನಲ್ಲಿ ಜಿಲ್ಲಾ ಲೀಡ್ ಬ್ಯಾಂಕ್ ಹಾಗೂ ಕೆನರಾ ಬ್ಯಾಂಕ್ ಶಾಖೆಯಿಂದ ಹಮ್ಮಿಕೊಂಡಿದ್ದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಾಮಾಜಿಕ ಭದ್ರತಾ ಯೋಜನೆಗಳ ಅರಿವು ಸಭೆಯಲ್ಲಿ ಮಾತನಾಡಿದರು.
ಬ್ಯಾಂಕಿನಲ್ಲಿ ಖಾತೆ ಹೊಂದಿರುವ ಪ್ರತಿಯೊಬ್ಬ 18 ರಿಂದ 50ವರ್ಷ ವಯೋಮಿತಿಯ ಗ್ರಾಹಕರು ಪ್ರಧಾನ ಮಂತ್ರಿ ಜೀವನ ಜ್ಯೋತಿ ಭೀಮಾ ಯೋಜನೆಯನ್ನು ಕಡ್ಡಾಯವಾಗಿ ಮಾಡಿಸಬೇಕು. ಇದರಿಂದ ಖಾತೆದಾರರ ನಾಮಿನಿಗೆ ₹ 2 ಲಕ್ಷ ದೊರೆಯುತ್ತದೆ. ಪ್ರಧಾನ ಮಂತ್ರಿ ಸುರಕ್ಷಾ ಭೀಮಾ ಯೋಜನೆ ಹೊಂದಿದ ಗ್ರಾಹಕರು ಅಪಘಾತದಲ್ಲಿ ಮರಣ ಹೊಂದಿದ ಪಕ್ಷದಲ್ಲಿ ನಾಮಿನಿಗೆ ₹ 2 ಲಕ್ಷ ಹಾಗೂ ಶೇ 50ರಷ್ಟು ಅಂಗವಿಕಲರಾದಲ್ಲಿ ₹ 1 ಲಕ್ಷ ಸಿಗುತ್ತದೆ. ಗ್ರಾಹಕರ ಬಳಿ ಹಳೆಯ ₹ 2 ಸಾವಿರದ ನೋಟುಗಳು ಇದ್ದಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಬದಲಾವಣೆ ಮಾಡಿಕೊಳ್ಳಬಹುದೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕೆನರಾ ಬ್ಯಾಂಕ್ ಬೆಂಗಳೂರು ವೃತ್ತದ ಡಿಜಿಎಂ ಖಂಡೆಲ್ ವಾಲ್, ಕೋಲಾರ ಪ್ರಾದೇಶಿಕ ಕಚೇರಿಯ ಎಜಿಎಂ ಅಶೋಕ್ ಕುಮಾರ್, ಹಣಕಾಸು ಆರ್ಥಿಕ ಸಲಹೆಗಾರ ಜಿ ವೆಂಕಟೇಶ್, ನೆಲವಾಂಕಿ ಪಿಡಿಒ ವಿಜಯಲಕ್ಷ್ಮಿ, ಕೆನರಾ ಬ್ಯಾಂಕ್ ಲಕ್ಷ್ಮಿಪುರ ಕ್ರಾಸ್ ಶಾಖೆ ವ್ಯವಸ್ಥಾಪಕಿ ನಿಹಾರಿಕಾ, ನೆಲವಾಗಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕೆ.ಎನ್.ರಾಧಮ್ಮ, ಜಿಲ್ಲಾ ಲೀಡ್ ಬ್ಯಾಂಕ್ ಅಧಿಕಾರಿ ಆನಂದ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.