ಬಂಗಾರಪೇಟೆ: ತಾಲ್ಲೂಕಿನ ಕಾರಮಾನಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಸಭೆ ಬುಧವಾರ ನಡೆಯಿತು.
ಶಾಸಕ ಎಸ್.ಎನ್. ನಾರಾಯಣಸ್ವಾಮಿ ಮಾತನಾಡಿ, ‘ಹೈನುಗಾರಿಕೆಯು ಗ್ರಾಮೀಣ ಮಹಿಳೆಯರಿಗೆ ಆರ್ಥಿಕತೆ ಶಕ್ತಿ ನೀಡುತ್ತದೆ. ರೈತರನ್ನು ಸಬಲೀಕರಣಗೊಳಿಸುತ್ತದೆ. ಹೀಗಾಗಿ, ಪ್ರತಿ ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘಗಳನ್ನು ಪ್ರಾರಂಭಿಸಲು ಉತ್ತೇಜನ ನೀಡುವುದಾಗಿ’ ಹೇಳಿದರು.
ಈ ಹಿಂದಿನ ನಿರ್ದೇಶಕರು ಹೊಸ ಹಾಲು ಉತ್ಪಾದಕರ ಸಹಕಾರ ಸಂಘಗಳ ಆರಂಭಕ್ಕೆ ಅವಕಾಶ ನೀಡಲಿಲ್ಲ. ಆದರೆ, ಇನ್ನು ಮುಂದೆ ತಾಲ್ಲೂಕಿನ ಯಾವುದೇ ಗ್ರಾಮದವರು ಹಾಲು ಉತ್ಪಾದಕರ ಸಹಕಾರ ಸಂಘ ಪ್ರಾರಂಭಕ್ಕೆ ಆಸಕ್ತಿ ತೋರುವವರಿಗೆ ಉಪ ವ್ಯವಸ್ಥಾಪಕರ ಮೂಲಕ ಮಾರ್ಗದರ್ಶನ ನೀಡಲಾಗುವುದು ಎಂದು ತಿಳಿಸಿದರು.
ಹೈನುಗಾರಿಕೆ ಕೇವಲ ಉಪಕಸುಬು ಅಲ್ಲ. ಅದೊಂದು ಪ್ರಮುಖ ಜೀವನಾಧಾರ. ಸಣ್ಣ ಮತ್ತು ಅತಿ ಸಣ್ಣ ರೈತರು ಹೈನುಗಾರಿಕೆಯಿಂದ ಪ್ರತಿ ಹದಿನೈದು ದಿನಗಳಿಗೊಮ್ಮೆ ಆದಾಯ ಪಡೆಯಲು ಸಹಕಾರ ಸಂಘಗಳು ವೇದಿಕೆಯಾಗಿವೆ. ಅಲ್ಲದೆ, ಸಂಘದ ಸದಸ್ಯರಿಗೆ ಕಡಿಮೆ ದರದಲ್ಲಿ ಉತ್ತಮ ಗುಣಮಟ್ಟದ ಪಶು ಆಹಾರ, ಖನಿಜ ಮಿಶ್ರಣ, ಬೀಜೋಪಚಾರ ಮತ್ತು ಕೃತಕ ಗರ್ಭಧಾರಣೆ ಸೇವೆಗಳು ಲಭ್ಯವಾಗುತ್ತವೆ ಎಂದರು.
ಈ ಸಭೆಯಲ್ಲಿ ಅಧ್ಯಕ್ಷ ಕೃಷ್ಣಪ್ಪ, ಉಪಾಧ್ಯಕ್ಷ ಕೆ.ಎಂ. ಮುನಿಸ್ವಾಮಪ್ಪ, ಉಪ ವ್ಯವಸ್ಥಾಪಕ ಡಾ. ಸಿ. ಎನ್. ಗಿರೀಶ್ ಗೌಡ, ವಿಸ್ತರಣಾಧಿಕಾರಿ ಭಾನುಪ್ರಕಾಶ್, ಸಹಕಾರಿ ಅಭಿವೃದ್ಧಿ ಅಧಿಕಾರಿ ಬಾಲಕೃಷ್ಣಪ್ಪ, ಕೆ.ವಿ. ನಾಗರಾಜ್, ಮಹದೇವಪ್ಪ, ಜುಂಜನಹಳ್ಳಿ ನಾರಾಯಣಸ್ವಾಮಿ, ಪಿ. ಗಂಗಪ್ಪ, ಆರ್. ಮುನಿಯಪ್ಪ, ಈಶ್ವರಪ್ಪ, ಮಣಿ, ಕೃಷ್ಣಪ್ಪ ಜಿ , ಕೃಷ್ಣಪ್ಪ, ಗಂಗಮ್ಮ, ಚೌಡಮ್ಮ,ಮಂಜುಳ, ಎನ್. ವೆಂಕಟೇಶ್, ಶ್ರೀ ಕೃಷ್ಣ ಉಪಸ್ಥಿತರಿದ್ದರು.
‘ಭ್ರಷ್ಟಾಚಾರ ಸಹಿಸಲ್ಲ’
‘ಕೋಮುಲ್‌ನಲ್ಲಿ ಯಾರದ್ದೊ ದುಡ್ಡು ಯಲ್ಲಮ್ಮನ ಜಾತ್ರೆ ಎಂಬ ಪರಿಸ್ಥಿತಿ ಇದೆ. ಆದರೆ ಇದಕ್ಕೆ ನಾನು ಅವಕಾಶ ನೀಡುವುದಿಲ್ಲ. ಕೋಮುಲ್‌ನಲ್ಲಿ ನಡೆದ ಅವ್ಯವಹಾರ ತಡೆಯುವ ವಿಚಾರದಲ್ಲಿ ನನಗೆ ನಿರ್ದೇಶಕರು ಸಹಕಾರ ನೀಡುತ್ತಾರೊ ಅಥವಾ ಇಲ್ಲವೊ ಎಂಬುದು ಗೊತ್ತಿಲ್ಲ. ಆದರೆ ಹಾಲು ಉತ್ಪಾದಕರ ಹಿತ ಕಾಪಾಡಲು ಒಬ್ಬಂಟಿಯಾದರೂ ಹೋರಾಟ ಮಾಡುತ್ತೇನೆ’ ಎಂದು ಶಾಸಕ ಎಸ್.ಎನ್. ನಾರಾಯಣ ಗುಡುಗಿದರು.
‘ರೈತರು ಮತ್ತು ಹೆಣ್ಣು ಮಕ್ಕಳಿಗೆ ಸಹಾಯ ಮಾಡುವ ಸಲುವಾಗಿ ಕೋಮುಲ್ ನಿರ್ದೇಶಕನಾಗಿದ್ದೇನೆ. ನನ್ನ ಕಣ್ಣ ಮುಂದೆ ಅನ್ಯಾಯವಾಗುತ್ತಿರುವುದನ್ನು ಕಂಡು ಸುಮ್ಮನಿರಲು ಸಾಧ್ಯವಿಲ್ಲ. ನನಗೆ ಯಾವುದೇ ಸ್ವಾರ್ಥವಿಲ್ಲ. ಹಾನುಗಾರರು ಮತ್ತು ಹೆಣ್ಣು ಮಕ್ಕಳಿಗೆ ಸಹಾಯ ಮಾಡುವುದಷ್ಟೇ ನನ್ನ ಗುರಿ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.