
ಮುಳಬಾಗಿಲು: ನಗರದ ಕೋಮುಲ್ ಶಿಬಿರ ಕಚೇರಿಯಲ್ಲಿ ಗುರುವಾರ ಕೇಂದ್ರ ಸರ್ಕಾರದ ಡೈರಿ ಅಭಿವೃದ್ಧಿಗಾಗಿ ರಾಷ್ಟ್ರೀಯ ಕಾರ್ಯಕ್ರಮ, ಕೋಮುಲ್ ಹಾಗೂ ಮುಳಬಾಗಿಲು ಶಿಬಿರ ಕಚೇರಿಯ ಸಹಯೋಗದಲ್ಲಿ ತಾಲ್ಲೂಕಿನ ಡೇರಿಗಳಿಗೆ ವಿವಿಧ ಯಂತ್ರೋಪಕರಣ ವಿತರಿಸಲಾಯಿತು.
ಈ ವೇಳೆ ಕೋಮುಲ್ ನಿರ್ದೇಶಕ ಕಾಡೇನಹಳ್ಳಿ ಕೆ.ಎನ್.ನಾಗರಾಜ್ ಮಾತನಾಡಿ, ಇತ್ತೀಚೆಗೆ ಕೋಮುಲ್ ಡೇರಿಯಲ್ಲಿ ಹಾಲಿನ ತ್ಯಾಜ್ಯವನ್ನು ಕೋಮುಲ್ ಸಿಬ್ಬಂದಿ ಡೇರಿಯಿಂದ ಹೊರಹಾಕಿದರೆ, ಅದನ್ನು ಕೆಲವರು ತುಪ್ಪ ಚೆಲ್ಲಿ ವ್ಯರ್ಥ ಮಾಡಿದ್ದಾರೆಂದು ಆರೋಪಿಸಿದ್ದರು. ಇದು ಶುದ್ಧ ಸುಳ್ಳು ಎಂದು ಸ್ಪಷ್ಟನೆ ನೀಡಿದರು.
ಕೋಮುಲ್ ₹ 18 ಕೋಟಿ ನಷ್ಟದಲ್ಲಿತ್ತು. ಅಂತಹ ಡೇರಿಯನ್ನು ₹ 9 ಕೋಟಿ ಲಾಭದತ್ತ ಮುನ್ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಡೇರಿಯಿಂದ ಐಸ್ ಕ್ರೀಂ, ಪನ್ನೀರ್, ಚೀಸ್ ಹಾಗೂ ಪಶು ಆಹಾರ ತಯಾರಿಸುವ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದರು.
ರಾಜ್ಯ ಸರ್ಕಾರ ಗ್ಯಾರಂಟಿಗಳಿಂದ ರಾಜ್ಯವನ್ನು ಹಾಳು ಮಾಡುತ್ತಿದೆ. ಭೋವಿ, ವಾಲ್ಮೀಕಿ ನಿಗಮಗಳಲ್ಲಿ ಹಗರಣ ನಡೆಸುತ್ತಿದ್ದರೂ ಮತ್ತೊಬ್ಬರನ್ನು ಟೀಕೆ ಮಾಡುವುದು ಸರಿಯಲ್ಲ ಎಂದು ಕುಟುಕಿದರು.
ಕಾರ್ಯಕ್ರಮದಲ್ಲಿ ಡೇರಿ ಸಿಬ್ಬಂದಿಗೆ ಜರ್ಕಿನ್ ಹಾಗೂ ಮತ್ತಿತರರ ಸಲಕರಣೆಗಳನ್ನು ವಿತರಿಸಿದರು.
ಬಿ.ವಿ.ಸಾಮೇಗೌಡ, ಬಿ.ವಿ.ಶಾಮೇಗೌಡ, ಎಂ.ಎಸ್.ಶ್ರೀನಿವಾಸ ರೆಡ್ಡಿ, ಕೆ.ಎನ್.ಪ್ರಕಾಶ್, ಎಂ.ಗೊಲ್ಲಹಳ್ಳಿ ಪ್ರಭಾಕರ್, ಅಶೋಕ್ ಕುಮಾರ್, ವರದಪ್ಪ, ನರಸಿಂಹಪ್ಪ, ಮುನಿಸ್ವಾಮಿ ಗೌಡ, ಶಂಕರಪ್ಪ, ಬಾಲಕೃಷ್ಣ, ಶ್ರೀನಿವಾಸ್, ಲಕ್ಷ್ಮಿ ಪ್ರಿಯ, ಡಾ.ಕಿರಣ್ ಮತ್ತಿತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.